ಶ್ರಮ ಸಂಸ್ಕೃತಿಗೆ ಶಿಬಿರಗಳು ಪೂರಕ: ಡಾ.ಕಾಂಬಳೆ
ಲೋಕದರ್ಶನ ವರದಿ
ಹಾರೂಗೇರಿ 05: ಎನ್ನೆಸ್ಸೆಸ್ ಶಿಬಿರಗಳು ಸೇವಾಮನೋಭಾವನೆ ಮೂಲಕ ಶ್ರಮ ಸಂಸ್ಕೃತಿ ಕಲಿಸುವುದರ ಜೊತೆಗೆ ಸಹೋದರತ್ವ, ಸಹಬಾಳ್ವೆ, ಸಹಕಾರ, ಒಗ್ಗಟ್ಟಿನ ಗುಣಗಳನ್ನು ಬೆಳೆಸುವಲ್ಲಿ ಪೂರಕವಾಗಿವೆ ಎಂದು ಪದವಿ ಕಾಲೇಜು ಪ್ರಾಚಾರ್ಯ ಡಾ.ವಿನೋದ ಕಾಂಬಳೆ ಹೇಳಿದರು.
ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಬಿ.ಆರ್.ದರೂರ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಮಂಗಳವಾರ ದತ್ತು ಗ್ರಾಮ ಕೋಳಿಗುಡ್ಡ ಗ್ರಾಮದ ಆನಂದಾಶ್ರಮದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಬದುಕಿನ ಮೌಲ್ಯಗಳನ್ನು ಕಲಿಸಿ, ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿಸುವ ಕರ್ತವ್ಯ ನಮ್ಮ ಮೇಲಿದೆ. ಆ ನಿಟ್ಟಿನಲ್ಲಿ ಎನ್ನೆಸ್ಸೆಸ್ ಶಿಬಿರದ ಮೂಲಕ ವಿದ್ಯಾರ್ಥಿಗಳಿಗೆ ಆತ್ಮಶಕ್ತಿ ತುಂಬುವುದು ಪ್ರೇರಣಾದಾಯಕವಾಗಿದೆ ಎಂದರು.
ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ.ರಮೇಶ ಕಮತಗಿ ಮಾತನಾಡುತ್ತ ಏಳು ದಿನಗಳವರೆಗೆ ನಡೆದ ಎನ್ನೆಸ್ಸೆಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವೆ, ಸಮಯ ಪಾಲನೆ, ಶಿಸ್ತು, ಪ್ರಾಮಾಣಿಕತೆ ಮತ್ತು ಸಾಮಾಜಿಕ ಮೌಲ್ಯಗಳನ್ನು ತಿಳಿಸಿ ಕೊಟ್ಟಿದ್ದು, ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಪೂರಕವಾಯಿತು ಎಂದರು.
ಆನಂದಾಶ್ರಮದ ಧರ್ಮದರ್ಶಿ ಶ್ರೀ ಪ್ರಭುದೇವರು ಸಾನಿಧ್ಯ ವಹಿಸಿದ್ದರು. ಡಾ.ರಾಜೇಂದ್ರ ಹೆಳವಿ, ಪ್ರೊ.ರೋಹಿನಿ ಕಾಂಬಳೆ, ಪ್ರೊ.ಹಾಲಪ್ಪ ಹಾರೂಗೇರಿ, ಪ್ರೊ.ಗುರು ಜಂಬಗಿ, ಪ್ರೊ.ಸುನೀಲ ಸರಿಕರ, ಮಲ್ಲಿಕಾರ್ಜುನ ಲುಡಬುಡೆ, ಶಿವಾನಂದ ಕೋಳಿ, ಅಶೋಕ ಚೌಗಲಾ, ಕರೆಪ್ಪ ಮಂಟೂರ, ಅವ್ವಣ್ಣ ನರಗಟ್ಟಿ, ಸದಾಶಿವ ಶಿಂಗೆ, ರಾಘವೇಂದ್ರ ಮೊರಬ ಹಾಗೂ ಕೋಳಿಗುಡ್ಡ ಗ್ರಾಮದ ಗಣ್ಯರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಶಿಬಿರಾರ್ಥಿ ಅಶ್ವಿನಿ ಗೋವಿಂದಗೋಳ ಸ್ವಾಗತಿಸಿದರು. ಬ್ರಾಹ್ಮಿ ಕಾಗಿ ನಿರೂಪಿಸಿದರು. ಅಮೂಲ್ಯ ನಾಗನೂರ ವಂದಿಸಿದರು.