ಮಹಲಿಂಗಪುರ

ಬಜೆಟ್ ಪೂರ್ವಭಾವಿ ಸಭೆ: ಸೂಕ್ತ ಕ್ರಮ ಭರವಸೆ ನೀಡಿದ ಮುಖ್ಯಾಧಿಕಾರಿ ಎಚ್‌.ಎಸ್‌.ಚಿತ್ತರಗಿ

ಬಜೆಟ್ ಪೂರ್ವಭಾವಿ ಸಭೆ: ಸೂಕ್ತ ಕ್ರಮ ಭರವಸೆ ನೀಡಿದ ಮುಖ್ಯಾಧಿಕಾರಿ ಎಚ್‌.ಎಸ್‌.ಚಿತ್ತರಗಿ


ಮಹಾಲಿಂಗಪುರ : 2022- 23 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯ 2 ನೇ ಸಾರ್ವಜನಿಕ ಸಭೆ ಸೋಮವಾರ ಪುರಸಭಾಧ್ಯಕ್ಷೆ ಸ್ನೇಹಲ್ ಅಂಗಡಿಯವರ ಅಧ್ಯಕ್ಷತೆಯಲ್ಲಿ ಜರುಗಿತು. 

ಈ ಸಭೆಯಲ್ಲಿ ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕರ ಸಮೃದ್ಧ ಜೀವನಕ್ಕೆ ಸಾರ್ವಜನಿಕರಿಂದ ಸಾಕಷ್ಟು ಸಲಹೆ, ಸೂಚನೆ, ಅಹವಾಲುಗಳು ಹರಿದುಬಂದವು ಮತ್ತು ಮುಖ್ಯಾಧಿಕಾರಿ ಎಚ್‌.ಎಸ್‌.ಚಿತ್ತರಗಿ ಬಜೆಟ್‌ನಲ್ಲಿ ಸೂಕ್ತ ಕ್ರಮದ ಭರವಸೆಯನ್ನೂ ನೀಡಿದರು. 

ಮಾಜಿ ಪುರಸಭಾಧ್ಯಕ್ಷ ಜಿ.ಎಸ್‌.ಗೊಂಬಿ ಮಾತನಾಡಿ, ಬೀದಿ ವ್ಯಾಪಾರಿಗಳನ್ನು ಸ್ಥಳಾಂತರಿಸಿ ಜನದಟ್ಟನೆ ಮತ್ತು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಪಟ್ಟಣದಲ್ಲಿ ಕಸ ವಿಲೇವಾರಿ ಜಾಗೃತಿ, ಪಟ್ಟಣದ ಶೌಚಾಲಯಗಳ ಸ್ವಚ್ಛತೆ, ಶಾಲಾ-ಕಾಲೇಜು ಮತ್ತು ಅಂಗನವಾಡಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಅಲ್ಲದೆ ಪುರಸಭೆ ಅಧಿಕಾರಿಗಳು ಸಾರ್ವಜನಿಕರ ಜೊತೆ ಜನಸ್ನೇಹಿಯಾಗಿ ವರ್ತಿಸಿ ಅವರ ಅನಾನುಕೂಲತೆಗಳನ್ನು ದೂರ ಮಾಡಿ ಎಂದರು. 

 ಬಸವೇಶ್ವರ ವೃತ್ತದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲಾಗಿತ್ತು, ಕೇವಲ ಎರಡು- ಮೂರು ತಿಂಗಳಲ್ಲಿ ಸಾರ್ವಜನಿಕರು ಸರಿಯಾಗಿ ಉಪಯೋಗಿಸದೆ ಹಾಳುಗೆಡವಿರುವುದು ಬೇಸರದ ಸಂಗತಿ. ಎಲ್ಲವೂ ಪುರಸಭೆ ಮಾಡಬೇಕು ಎಂದರೆ ಅಸಾಧ್ಯ ಇದರಲ್ಲಿ ಸಾರ್ವಜನಿಕರು ಸಹ ಕೈಜೋಡಿಸಬೇಕು ಎಂದು ಪುರಸಭಾ ಸದಸ್ಯ ರವಿ ಜವಳಗಿ ಹೇಳಿದರು. 

ದಲಿತ ಮುಖಂಡರಾದ, ಪರಶುರಾಮ ಮೇತ್ರಿ, ಬಸವರಾಜ ಮಾವಿನಹಿಂಡಿ ಮಾತನಾಡಿ, ಭಗೀರಥ ವೃತ್ತದಿಂದ ಕೆಂಗೇರಿಮಡ್ಡಿಯವರೆಗೆ ವಿದ್ಯುದ್ದೀಪಗಳ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಚರಂಡಿ ದುರಸ್ತಿ ಬಗ್ಗೆ ಪುರಸಭೆಗೆ ಒತ್ತಾಯಿಸಿದರು. 

ಗುರುಲಿಂಗಯ್ಯ ಮಠಪತಿ ಮಾತನಾಡಿ ಕಚೇರಿಯ ಕೆಲಸಗಳನ್ನು ನಿಗದಿತ ವೇಳೆಯಲ್ಲಿ ಸಾರ್ವಜನಿಕರಿಗೆ ಒದಗಿಸಬೇಕು ಸ್ಮಶಾನಕ್ಕೆ ತಂತಿ ಬೇಲಿ ಹಾಕಿ ಸಂರಕ್ಷಿಸಬೇಕು ಎಂದರೆ ಮಹಿಳಾ ಕಾರ್ಯಕ್ರಮಗಳಿಗೆ ಸಮುದಾಯ ಭವನ ಅಗತ್ಯತೆಯ ಬಗ್ಗೆ ಸುವರ್ಣ ಆಸಂಗಿ ಸಭೆಯ ಗಮನ ಸೆಳೆದರು ಮತ್ತು ಸುರೇಶ ಮಡಿವಾಳ ಭಿಕ್ಷಾಟನೆ ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು  

ಯುಜಿಡಿ ಅಡಿಯಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಫಲಕಗಳ ಅಳವಡಿಸಬೇಕೆಂದು ಗುರುಪಾದ ಅಂಬಿ, ಸಿದ್ದು ಶಿರೋಳ್ ಹೇಳಿದರು. ಬೀದಿ ವ್ಯಾಪಾರಿಗಳಿಗೆ ಮಳಿಗೆಗಳ ನಿರ್ಮಾಣ, ನಗರದಾದ್ಯಂತ ಸಸಿ ನೆಡುವುದು ಮತ್ತು ಬಸ್ ನಿಲ್ದಾಣ, ಎಪಿಎಂಸಿ ಸ್ವಚ್ಛತೆ ಬಗ್ಗೆ ವರ್ತಕ ಸಿದ್ದಪ್ಪ ಸೋನಾರ್ ಸಲಹೆ ನೀಡಿದರು. 

ಚೆನ್ನಯ್ಯ ಚಟ್ಟಿಮಠ, ರವಿ ಬಾರ್ಕೋಲ್, ಹೊಸ ಬಡಾವಣೆಗಳಲ್ಲಿ ಸ್ವಚ್ಛತೆಯ ಕರ ಸಂಗ್ರಹ ಮತ್ತು ವೇಗದ ವಾಹನಗಳಿಗೆ ಸ್ಪೀಡ್ ಲಿಮಿಟ್ ಅಳವಡಿಸಬೇಕು ಅಲ್ಲದೆ ಪಟ್ಟಣದ ಅಭಿವೃದ್ಧಿಗಾಗಿ ನಗರದಲ್ಲಿ ಮಾಸ್ಟರ್ ಪ್ಲಾನ್ ಅಗತ್ಯತೆ ಬಗ್ಗೆಯೂ ಒತ್ತಿ ಹೇಳಿದರು.  

ಈ ಸಾರ್ವಜನಿಕ ಸಭೆಯಲ್ಲಿ ಊರಿನ ಸಣ್ಣ-ಪುಟ್ಟ, ಮಧ್ಯಮ, ಸಗಟು ವ್ಯಾಪಾರಸ್ಥರು, ಪ್ರಗತಿಪರ ಚಿಂತಕರು, ಮುಖಂಡರು ಭಾಗವಹಿಸಿ ನಗರದ ಅಭಿವೃದ್ಧಿಗಾಗಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿವರ್ಗ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ