ಪಟ್ಟಣದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ
ಮಹಾಲಿಂಗಪುರ 22: ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ಸಾಮಾಜಿಕ ಹೋರಾಟಗಾರ ಚನಬಸು ಹುರಕಡ್ಲಿ ನೀಲನಕ್ಷೆ ತಯಾರಿಸಿದ್ದು, ಹಲವು ಸಲಹೆಗಳನ್ನು ನೀಡಿ ಸರ್ಕಾರದ ಮಟ್ಟದಲ್ಲಿ ಪತ್ರದ ಮೂಲಕ ಹೋರಾಟ ಮಾಡಲು ನಿರ್ಧರಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಶಾಸಕರು, ಸಚಿವರಿಗೆ, ಅಧಿಕಾರಿಗಳಿಗೆ ಪತ್ರ ಕಳುಹಿಸಲಾಗುವುದು. ಅವರಿಂದ ಬರುವ ಸ್ಪಂದನೆ ನೋಡಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಈಗಾಗಲೇ ಪತ್ರದ ಮೂಲಕ ಹೋರಾಟ ಮಾಡಿದ್ದರಿಂದ ಬಸವೇಶ್ವರ ವೃತ್ತದಿಂದ ಢವಳೇಶ್ವರ ಕಮಾನುವರೆಗೆ ಬೀದೀದೀಪ ಕಾಮಗಾರಿ ಪ್ರಗತಿಯಲ್ಲಿದೆ. ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ನಿರ್ಮಾಣ ಸಮಯದಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ಡಬಲ್ ರಸ್ತೆ, ರಸ್ತೆ ವಿಭಜಕ ನಿರ್ಮಾಣವಾಗಿದೆ. ಹೀಗಾಗಿ, ಇದೇ ರೀತಿ ಪತ್ರದ ಮೂಲಕ ಪಟ್ಟಣದ ಸಮಗ್ರ ಅಭಿವೃದ್ಧಿಯ ಹೋರಾಟಕ್ಕೆ ಅಣಿಯಾಗಿದ್ದು, ಸಾರ್ವಜನಿಕರು ಪಕ್ಷಾತೀತ, ಜಾತ್ಯಾತೀತವಾಗಿ ಇದಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಅಂತರ್ಜಲಕ್ಕೆ ಮೂಲಾಧಾರವಾಗಿರುವ ಪಟ್ಟಣದ ಕೆರೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡುವುದು.ಇದರ ಜೊತೆಗೆ ಕೆರೆಯ ಪಕ್ಕದಲ್ಲಿರುವ ಪುರಸಭೆ ನಾಲ್ಕು ಎಕರೆ ಜಾಗೆಯಲ್ಲಿ ಉದ್ಯಾನವನ ಹಾಗೂ ಸರ್ಕಾರಿ ಕಚೇರಿಗಳ ಕಟ್ಟಡಗಳನ್ನು ನಿರ್ಮಾಣ ಮಾಡುವುದು. ಹಿಂದು ರುದ್ರಭೂಮಿಅಭಿವೃದ್ಧಿ ಪಡಿಸುವುದು, ಪಾಳುಬಿದ್ದ ಹಳೆಯ ಸರ್ಕಾರಿ ಆಸ್ಪತ್ರೆ ಕಟ್ಟಡದಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಿ ಸರ್ಕಾರಿ ಕಚೇರಿಗಳಿಗೆ ಅವಕಾಶ ಕಲ್ಪಿಸುವುದು, ಪಟ್ಟಣಕ್ಕೆ ಒಳಚರಂಡಿ(ಯುಜಿಡಿ)ಯೋಜನೆ ಅನುಷ್ಠಾನಗೊಳಿಸುವ ಕಾಮಗಾರಿಯ ನೀಲಿನಕ್ಷೆ ತಯಾರಿಸಲಾಗಿದ್ದು, ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಶೀಘ್ರ ಈ ಕಾಮಗಾರಿಗಳನ್ನು ಅನುಷ್ಟಾನಗೊಳಿಸಬೇಕು ಎಂದು ಒತ್ತಾಯಿಸಿದರು.