ಬಳ್ಳಾರಿ

ರಕ್ತದಾನ ಅತ್ಯಂತ ಶ್ರೇಷ್ಠ ದಾನ: ಡಾ. ಇಂದ್ರಾಣಿ

ರಕ್ತದಾನ ಅತ್ಯಂತ ಶ್ರೇಷ್ಠ ದಾನ: ಡಾ. ಇಂದ್ರಾಣಿ


ಬಳ್ಳಾರಿ, ಅ. 01: ರಕ್ತವು ಮಾನವ ದೇಹದ ಅತ್ಯಂತ ಅಮೂಲ್ಯ ಜೀವದ್ರವ್ಯವಾಗಿದ್ದು, ರಕ್ತದಾನ ಮಾಡುವುದು ಅತ್ಯಂತ ಶ್ರೇಷ್ಠ ದಾನವಾಗಿದೆ ಎಂದು ಜಿಲ್ಲಾ ಎಚ್‌ಐವಿ/ಏಡ್ಸ್‌ ನಿಯಂತ್ರಣಾಧಿಕಾರಿ ಡಾ. ಇಂದ್ರಾಣಿ ಹೇಳಿದರು.  

ನಗರದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕ ಹಾಗೂ ಕಾಲೇಜಿನ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಈ ವರ್ಷದ ರಕ್ತದಾನ ದಿನಾಚರಣೆಯನ್ನು ‘ಮಾನವೀಯತೆ ಹಿ ಒಂದು ಹನಿ ರಕ್ತ ನೀಡಿ ಜೀವ ಉಳಿಸಿ’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಆರೋಗ್ಯವಂತ 18ರಿಂದ 60 ವರ್ಷದೊಳಗಿನ ಅರ್ಹ ವ್ಯಕ್ತಿಗಳು ಲಿಂಗಭೇದವಿಲ್ಲದೆ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬಹುದು ಎಂದು ತಿಳಿಸಿದರು.  

ರಕ್ತವನ್ನು ಯಾವುದೇ ಕಾರ್ಖಾನೆಯಲ್ಲಿ ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಅಪಘಾತಗಳು, ಶಸ್ತ್ರಚಿಕಿತ್ಸೆಗಳು, ಹೆರಿಗೆ ಹಾಗೂ ಕ್ಯಾನ್ಸರ್ನಂತಹ ಗಂಭೀರ ಚಿಕಿತ್ಸಾ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ರಕ್ತದ ಕೊರತೆಯಾಗದಂತೆ ಸಾರ್ವಜನಿಕರು, ಕಾಲೇಜುಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ರಕ್ತದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.  


ಸುದ್ದಿ ಓದಿ