ರಕ್ತದಾನ ಮಾಡುವುದರಿಂದ ಆರೋಗ್ಯವಂತ ಶರೀರವನ್ನು ಹೊಂದಬಹುದು: ಪಾಟೀಲ್
ಮಹಾಲಿಂಗಪುರ 14: ಪಾಪ್ಯುಲರ್ ಫ್ರಂಟ್ ಸಂಘಟನೆಯ ಜನಪರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಅವರು, ಒಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಿದರೆ, ಹಲವಾರು ಜನರ ಪ್ರಾಣ ಉಳಿಸಿದಂತೆ, ಅದರಂತೆಯೇ ಇಂದಿನ ಶಿಬಿರದಲ್ಲಿ ರಕ್ತದಾನ ಮಾಡಿದವರು ಪುಣ್ಯವಂತರು. ಪ್ರತಿ ವರ್ಷವೂ ನಿಗದಿತ ವೇಳೆಯಲ್ಲಿ ನಾವು ರಕ್ತದಾನ ಮಾಡುವುದರಿಂದ ಆರೋಗ್ಯವಂತ ಶರೀರವನ್ನು ಹೊಂದಬಹುದು ಎಂದು ಕೆಎಂಎಫ್ ಮಾಜಿ ಅಧ್ಯಕ್ಷ ರಂಗನಗೌಡ ಪಾಟೀಲ್ ಹೇಳಿದರು.
ವಿಶ್ವ ರಕ್ತ ದಾನ ದಿನದ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಸಂಘಟನೆ ಹಾಗೂ ರಾಮನಗೌಡ ಆಸ್ಪತ್ರೆ ಬಾಗಲಕೋಟ ಇವರ ಸಹಯೋಗದಲ್ಲಿ ಸಮೀರವಾಡಿ ಗ್ರಾಮದಲ್ಲಿ ಜೂ.14ರಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.
ಸೈದಾಪುರ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಸನದಿ ಮಾತನಾಡಿ, ದೇಶದಲ್ಲಿ ಈಗ ರೋಗಿಗಳಿಗೆ ಸಾಕಷ್ಟು ರಕ್ತದ ಅವಶ್ಯಕತೆ ಇದೆ. ಏಕೆಂದರೆ ಕೊರೊನಾ ಮಹಾಮಾರಿಯಿಂದ ದೇಶದಲ್ಲಿ ಹೆಚ್ಚಿನ ಪ್ರಮಾಣದ ರಕ್ತ ಸಂಗ್ರಹವಿಲ್ಲ. ಆದಕಾರಣ ಆರೋಗ್ಯವಂತರಾದವರು ರಕ್ತದಾನ ಮಾಡಿ, ಇದು ಶ್ರೇಷ್ಠವಾದದ್ದು, ಇಂತಹ ಕಾರ್ಯವನ್ನು ಏರಿ್ಡಸಿದ ಪಾಪುಲರ್ ಫ್ರಂಟ್ ಸಂಸ್ಥೆ ಕಾರ್ಯವು ಶ್ಲಾಘನೀಯ ಎಂದರು
ಮಜ್ದೂರ್ ಯೂನಿಯನ್ ಅಧ್ಯಕ್ಷ ಬಸವರಾಜ ಪೂಜಾರ ಮಾತನಾಡಿ, ದಾನ ಮಾಡಿದ ರಕ್ತವು ದೇಶದ ಯಾವುದೇ ನಾಗರಿಕರಿಗೆ ಅನುಕೂಲವಾಗುತ್ತದೆ ಹಾಗೂ ರಕ್ತದಾನ ಮಾಡಲು ಪ್ರತಿಯೊಬ್ಬರೂ ಮುಂದೆ ಬಂದು ಸಂಕಷ್ಟದಲ್ಲಿರುವ ರೋಗಿಗಳಿಗೆ ಸಹಕಾರಿಯಾಗಿಬೇಕು ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ತುಳಜಾಬಾಯಿ ಲಮಾಣಿ ಅಧ್ಯಕ್ಷತೆ ವಹಿಸಿ, ಮಜದೂರ ಸಂಘದ ಮಾಜಿ ಅಧ್ಯಕ್ಷ ಎಚ್.ಎಸ್ ಬಜಂತ್ರಿ, ಪಿಯೂಷ್ ಓಸವಾಲ್, ಅಯ್ಯೂಬ್ ಅಥಣಿ, ಮೇಹಬೂಬಸಾಬ ನದಾಫ, ಪಾಪುಲರ್ ಫ್ರಂಟ್ ಸಮೀರ್ವಾಡಿ ಘಟಕದ ಅಧ್ಯಕ್ಷ ಫಾರೂಕ್ ಅಲಾಸ್ , ಉಪಾಧ್ಯಕ್ಷ ಅಲ್ಫಾಜ್ ಮುಲ್ಲಾ, ಸೈಯದ್ ನದಾಫ್, ಗೌಸ್ ನದಾಫ್, ಮೌ. ಸಮೀರ್ ಬಿಸ್ತಿ, ಮುಬಾರಕ್ ಅಲ್ಲಾಖಾನ್ ಮತ್ತು ರಾಮನಗೌಡ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.