ಹಗರಿಬೊಮ್ಮನಹಳ್ಳಿ

ತುರ್ತು ಪರಿಸ್ಥಿತಿಯ ಕರಾಳ ದಿನ ಆಚರಣೆ

ತುರ್ತು ಪರಿಸ್ಥಿತಿಯ ಕರಾಳ ದಿನ ಆಚರಣೆ

ಹಗರಿಬೊಮ್ಮನಹಳ್ಳಿ 25: ತಮ್ಮ ಕುಟುಂಬ ದೇಶದ ಅಧಿಕಾರದ ಗದ್ದುಗೆಗೆ ಏರುವ ದುರುದ್ದೇಶದಿಂದ 1975 ಜೂನ್ 25ರಂದು ದೇಶದ ಅಂದಿನ ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾಂಧಿ ಅಧಿಕಾರ ಲಾಲಸೆಗೋಸ್ಕರ, ದೇಶದಲ್ಲಿ ಕಾಂಗ್ರೆಸ್ ಸರ್ವಾದಿಕಾರ ಹೇರಿದ ತುರ್ತು ಪರಿಸ್ಥಿತಿಯ ಕರಾಳ ದಿನ ಕಳೆದು ಇಂದಿಗೆ 45 ವರ್ಷವಾಗಿದೆ ಎಂದು ಬಿಜೆಪಿ ಉಪಾಧ್ಯಕ್ಷ ಹಾಗೂ ತಾ.ಪಂ ನಾಮನಿರ್ದೇಶಿತ ಸದಸ್ಯರಾದ ಪಿ.ರಾಜಲಿಂಗಪ್ಪ ಹೇಳಿದರು.  

ನಗರದ ರೇಣುಕಾ ವಿದ್ಯಾಸಂಸ್ಥೆಯಲ್ಲಿ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಕರಾಳದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಕಾಂಗ್ರೆಸ್ ತನ್ನ ಸರ್ವಾಧಿಕಾರಿ ಧೋರಣೆಯಿಂದ ಎಮರ್ಜೆನ್ಸಿ ಹೇರಿದರ ಪರಿಣಾಮವಾಗಿ ಮಾನವ ಹಕ್ಕುಗಳ ದಮನ, ಪ್ರಜಾಪ್ರಭುತ್ವದ ಕಗ್ಗೊಲೆ, ಪತ್ರಿಕಾ ಸ್ವಾತಂತ್ರ ಹರಣ ಮತ್ತು ವಾಕ್ ಸ್ವಾತಂತ್ರವನ್ನು ಮೊಟಕುಗೊಳಿಸುವ ಮೂಲಕ ದೇಶದ ಬುದ್ದಿಜೀವಿಗಳು, ಪ್ರಗ್ನಾವಂತರು ಮತ್ತು ಶ್ರೀಸಾಮಾನ್ಯರ ಜೀವ ಮತ್ತು ಜೀವನದ ಜೊತೆಗೆ ಚೆಲ್ಲಾಟವಾಡುತ್ತಾ ಸಂವಿಧಾನ ನೀಡಿದಂತಹ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳ ಹಕ್ಕುಗಳನ್ನು ಕಾಂಗ್ರೆಸ್ ಕಗ್ಗೊಲೆ ಮಾಡಲಾಗಿತ್ತು.  

ತುರ್ತು ಪರಿಸ್ಥಿತಿಯ ಆ ಸಂದರ್ಭದಲ್ಲಿ ಇಂದಿರಾಗಾಂಧಿ ವಿರುದ್ಧ ಧ್ವನಿ ಎತ್ತಿದ ಎಲ್ಲಾ ನೇತಾರರನ್ನು ಜೈಲಿಗಟ್ಟಿದ್ದ ಕಾಂಗ್ರೆಸ್ ಪಕ್ಷ ತನ್ನ ಹಿಟ್ಲರ್ ಧೋರಣೆಯನ್ನು ಮೆರೆದಿತ್ತು. ಇಂದು ಮಾತೆತ್ತಿದರೆ ಸಣ್ಣ ಪುಟ್ಟದ್ದಕ್ಕೆಲ್ಲಾ ಪ್ರತಿಭಟನೆಯ ನೆಪದಲ್ಲಿ ದೇಶದಲ್ಲಿ ಧೋಂಭಿ, ಗಲಭೆ ಸೃಷ್ಠಿಸುತ್ತಿರುವ ಕಾಂಗ್ರೆಸ್ ಪಕ್ಷ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗದ್ಗೀತೆ ಕೇಳಿದಂತ ಹಾಸ್ಯಾಸ್ಪದ ಸಂಗತಿಯಾಗಿದೆ. ಸ್ವ-ಕುಟುಂಬ ಹಾಗೂ ಗೂಂಡಾ ರಾಜಕೀಯ ಮಾಡುತ್ತಲೇ ದೇಶವನ್ನು 60ವರ್ಷಗಳ ಕಾಲ ಲೂಟಿ ಮಾಡಿದ ಕಾಂಗ್ರೆಸ್ ಪಕ್ಷವನ್ನು ಇತ್ತೀಚಿನ ದಿನಗಳಲ್ಲಿ ದೇಶದ ಪ್ರಬುದ್ಧ ಶ್ರೀಸಾಮಾನ್ಯರು ಈಗಾಗಲೇ ಹಲವೆಡೆ ಕಿತ್ತೊಗೆದಿದ್ದಾರೆ ಎಂದರು.  

ಬಿಜೆಪಿ ಮಂಡಲ ಅಧ್ಯಕ್ಷ ವೀರೇಶ್ವರ ಸ್ವಾಮಿ ತುರ್ತು ಪರಿಸ್ಥಿತಿಯ ಕರಾಳ ದಿನದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಉಪಾಧ್ಯಕ್ಷ ನಂದಿಬಂಡಿ ಜಗದೀಶ, ನಗರ ಘಟಕ ಹಾಗೂ ಪುರಸಭೆ ಸದಸ್ಯ ಜ್ಯೋಗಿ ಹನುಮಂತಪ್ಪ, ಪುರಸಭೆ ಸದಸ್ಯ ನವೀನ್, ಹಿರಿಯ ಮುಖಂಡರಾದ ಕಿನ್ನಾಳ್ ಸುಭಾಷ್, ನರೆಗಲ್ ಕೊಟ್ರೇಶ್, ರೋಹಿತ್, ಸಕ್ರಗೌಡ್ರು, ನೀಲಕಂಠಪ್ಪ, ಜೆ.ಬಿ.ಶರಣಪ್ಪ, ಬಸವರಾಜ ಬಡಿಗೇರ್, ಹೊಟೇಲ್ ಸಿದ್ದರಾಜು, ಬಿ.ಜಿ.ಬಡಿಗೇರ್, ರಾಜು ಪಾಟೀಲ್, ಅಂಬಣ್ಣ, ಜಿ.ಸೋಮಶೇಖರ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ