ಬಳ್ಳಾರಿ

ಕಾರ್ಮಿಕರಿಗೆ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಬಿಸಿಯೂಟ ಕಾರ್ಮಿಕರ ಆಗ್ರಹ

ಕಾರ್ಮಿಕರಿಗೆ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಬಿಸಿಯೂಟ ಕಾರ್ಮಿಕರ ಆಗ್ರಹ

ಬಳ್ಳಾರಿ 19: ಇಂದು ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದವತಿಯಿಂದ ಬಿಸಿಯೂಟ ಕಾರ್ಮಿಕರ ಹಲವಾರು ಬೇಡಿಕೆಗಳಿಗಾಗಿ ಆಗ್ರಹಿಸಿ ಜಿಲ್ಲಾ ಪಂಚಾಯತ್ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 

ಈ ಸಂದರ್ಭದಲ್ಲಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್‌.ಎನ್ ಮಾತನಾಡುತ್ತಾ “ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿಷ್ಠಿತ ಮಧ್ಯಾಹ್ನ ಬಿಸಿ ಊಟ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುವ ಬಿಸಿಯೂಟ ಕಾರ್ಮಿಕರಿಗೆ ಅತ್ಯಂತ ಜುಜುಬಿ ವೇತನ ರೂ.3,600 ನೀಡಲಾಗುತ್ತಿದೆ. ಈ ವೇತನವು ಕೂಡ ಪ್ರತಿ ತಿಂಗಳು ಬರುವುದಿಲ್ಲ. ಕೆಲವೊಮ್ಮೆ 2-3 ತಿಂಗಳಿಗೊಮ್ಮೆ ನೀಡಲಾಗುತ್ತದೆ 

ಕಳೆದ ಏಪ್ರಿಲ್‌-ಮೇ ತಿಂಗಳ ವೇತನ ಇನ್ನೂವರೆಗೆ ನೀಡಿಲ್ಲ. ನೂರಾರು ಮೊಟ್ಟೆಗಳನ್ನ ಸುಲಿದ ಕೂಲಿಯನ್ನ ಹಲವಾರು ವರ್ಷಗಳಿಂದ ನೀಡಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ರೂ.1000 ಹೆಚ್ಚಿಸುವ ಘೋಷಣೆ ಮಾಡಿದರೂ, ಜಾರಿಗೆ ತರದೆ ಬಿಸಿಯೂಟ ಕಾರ್ಮಿಕರಿಗೆ ಮೋಸ ಮಾಡಿತು. ಈಗಿನ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ರೂ.6000ಕ್ಕೆ ಹೆಚ್ಚಿಸುವ ಭರವಸೆ ನೀಡಿದರೂ, ಜಾರಿಗೆ ತರಲಿಲ್ಲ.  

ಒಟ್ಟಾರೆಯಾಗಿ ಎಲ್ಲಾ ಸರ್ಕಾರಗಳು ಬಿಸಿಊಟ ಕಾರ್ಮಿಕರನ್ನು ಬಿಟ್ಟಿಯಾಗಿ ದುಡಿಸಿಕೊಳ್ಳುವುದಕ್ಕಷ್ಟೆ ಸೀಮಿತಗೊಳಿಸಿವೆ. ಈ ಹಿನ್ನಲೆಯಲ್ಲಿ ಬಿಸಿಯೂಟ ಕಾರ್ಮಿಕರು ಸಂಘಟಿತರಾಗಿ ಬಲಿಷ್ಟ ಹೋರಾಟ ಬೆಳೆಸಬೇಕು. ಬಿಸಿಯೂಟ ಕಾರ್ಮಿಕರ ಬೇಡಿಕೆಗಳಿಗೆ ಸರಿಯಾದ ಸ್ಪಂದನೆ ಸಿಗದಿದ್ದರೆ, ರಾಜ್ಯ ಮಟ್ಟದ ಹೋರಾಟಕ್ಕೂ ಸಿದ್ಧರಾಗಬೇಕು” ಎಂದು ಕರೆ ನೀಡಿದರು. 

ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಜಿಲ್ಲಾ ಸಲಹೆಗಾರರಾದ ನಾಗರತ್ನ ಎಸ್‌.ಜಿ ಮಾತನಾಡುತ್ತಾ “ಬಿಸಿಯೂಟ ನೌಕರರಿಗೆ ಅವರ ಅಡಿಗೆಗೆ ಸಂಬಂಧಪಟ್ಟ ಕೆಲಸವಲ್ಲದೆ ಇತರೆ ಅವರದಲ್ಲದ ಅನೇಕ ಕೆಲಸಗಳನ್ನು ಹೇರಲಾಗುತ್ತಿದೆ. ಇಡೀ ಆಟದ ಮೈದಾನ ಹಾಗೂ ಎಲ್ಲಾ ತರಗತಿಗಳನ್ನು ಸ್ವಚ್ಛಗೊಳಿಸುವುದು, ಕೆಲವು ಶಾಲೆಗಳಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ಇಂತಹ ಕೆಲಸಗಳನ್ನು ಸಹ ಹಲವಾರು ಕಡೆ ನೀಡಲಾಗುತ್ತಿದೆ.  

ಈ ಹಿಂದೆ ಶಾಲಾ ಕಾಂಪೌಂಡ್‌ಗೆ ಸುಣ್ಣ ಬಳಿಸಿರುವ, ಕೆಲವಡೆ ಅಡಿಗೆಗೆ ಬಳಸುವ ನೀರನ್ನು ದೂರದಿಂದ ತರಿಸಿರುವ ಉದಾಹರಣೆ ಕೂಡ ಇದೆ. ಇದರ ಜೊತೆಗೆ ಕೆಲವು ಕಡೆ ಶಾಲಾ ಸಿಬ್ಬಂದಿ ಬಿಸಿಯೂಟ ಕಾರ್ಮಿಕರನ್ನು ಅವಮಾನಕರ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವುದು ಕೂಡ ಗಮನಕ್ಕೆ ಬಂದಿದೆ. ‘ಇಷ್ಟ ಇದ್ರೆ ಇರಿ, ಇಲ್ಲವೆಂದರೆ ಬಿಟ್ಟು ಹೋಗಿ’ ಎನ್ನುವ ಮಾತುಗಳು ಸಹ ಕೇಳಿ ಬರುತ್ತವೆ. ಈ ಹಿನ್ನಲೆಯಲ್ಲಿ ಬಿಸಿಯೂಟ ಕಾರ್ಮಿಕರು ಒಗ್ಗಟ್ಟಾಗುತ್ತಾ ಇಂತಹ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಬೇಕು” ಎಂದು ಕರೆ ನೀಡಿದರು. ಅಧ್ಯಕ್ಷತೆಯನ್ನು ಎಐಯುಟಿಯುಸಿ ಜಿಲ್ಲಾ ಜಂಟಿ ಕಾರ್ಯದರ್ಶಿಗಳಾದ ಸುರೇಶ್‌.ಜಿ ವಹಿಸಿದ್ದರು. 

ಮನವಿ ಸ್ವೀಕರಿಸಿದ ಉಪಕಾರ್ಯದರ್ಶಿ ಗಿರಿಜಾ ಶಂಕರ್, ಬಿಸಿಯೂಟ ಯೋಜನೆ ಕಾರ್ಯನಿರ್ವಾಹಕ ಅಧಿಕಾರಿ ಕಸ್ತೂರಿ, 10 ದಿನಗಳ ನಂತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅಧಿಕಾರಿಗಳು, ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ಕರೆಯುವುದಾಗಿ ಭರವಸೆ ನೀಡಿದರು. ಮೊಟ್ಟೆ ಸುಲಿಯುವ ಕೂಲಿಯ ಮೊತ್ತವನ್ನು ಮುಖ್ಯೋಪಾಧ್ಯಯರ ಖಾತೆ ನಿಯಮಿತವಾಗಿ ಜಮಾ ಮಾಡಲಾಗಿದೆ. ಆದರೂ ಬಿಸಿಯೂಟ ಕಾರ್ಮಿಕರಿಗೆ ಹಣ ಸಿಗದೆ ಇರುವ ಹಿನ್ನಲೆಯಲ್ಲಿ, ಕೂಡಲೆ ಅಗತ್ಯ ಕ್ರಮಕೈಗೊಳವುದಾಗಿ ಅಧಿಕಾರಿಗಳು ಭರವಸೆ ನೀಡಿದರು. 

ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷರಾದ ಮಂಜುಳಾ, ಮುಖಂಡರಾದ ಅನಸೂಯಮ್ಮ, ನಾಗಮ್ಮ ಅಂಬಮ್ಮ, ಶಾಂತಮ್ಮ ಅಂಬುಜಾ, ನೀಲಮ್ಮ ಭಾಗವಹಿಸಿದ್ದರು. 


ಸುದ್ದಿ ಓದಿ