ಮುದ್ದೆಬಿಹಾಲ್

ಸಮಾನತೆಯ ಹರಿಕಾರಾಗಿ ಜನಮಾನಸದಲ್ಲಿ ಉಳಿದವರು ಬಿಬ್ಬಿ ಬಾಚಯ್ಯ

ಸಮಾನತೆಯ ಹರಿಕಾರಾಗಿ ಜನಮಾನಸದಲ್ಲಿ ಉಳಿದವರು ಬಿಬ್ಬಿ ಬಾಚಯ್ಯ

ಶರಣ ಬೆಳಗು ಹುಣ್ಣಿಮೆಯ ಕಾರ್ಯಕ್ರಮದಲ್ಲಿ ಶಂಕರ ಬೇವಿನಗಿಡದ ಅಭಿಮತ 

ಮುದ್ದೇಬಿಹಾಳ 29: ವಚನ ಸಂಸ್ಕಾರದ ಮಹಾಮಂತ್ರವನ್ನು ನೀಡಿದ ಹನ್ನೆರಡನೆ ಶತಮಾನದ ಶರಣರು ಆಡಿದಂತೆ ನಡೆ, ನಡೆಗೆ ತಕ್ಕ ನುಡಿಗಳನ್ನು ಅನುಭಾವದ ಮೇರು ಮಹತಿಯನ್ನು ನೀಡಿದ ಮಹಾತ್ಮರ ಸಾಲಲ್ಲಿ ಬಿಬ್ಬಿ ಬಾಚಯ್ಯ ನವರು ಒಬ್ಬರು ಎಂದು ಶಂಕರ ಅ ಬೇವಿನಗಿಡದ ಹೇಳಿದರು.      

ಪಟ್ಟಣದ ಶರಣ ಬಸಪ್ಪ ದೇಗಿನಾಳ ಅವರ ನಿವಾಸದಲ್ಲಿ  ತಾಲೂಕಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಯೋಜಿಸಿದ ಶರಣ ಬೆಳಗು ಹುಣ್ಣಿಮೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ಬಿಬ್ಬಿ ಬಾಚಿದೇವರು ಇಂದಿನ ಕಲಬುರ್ಗಿ ಜಿಲ್ಲೆ ಗೊಬ್ಬೂರನಲ್ಲಿ ಬ್ರಾಹ್ಮಣ ಕುಲದಲ್ಲಿ ಜನಿಸಿ ಜನಿವಾರವನ್ನು ತೆಗೆದು ಲಿಂಗದೀಕ್ಷೆಯನ್ನು ಪಡೆಯುತ್ತಾರೆ ಬಳಿಕ ತಮ್ಮ ಶೈಲಿಯಲ್ಲಿ ವಚನಗಳನ್ನು ರಚಿಸುವ ಮೂಲಕ ಸಾಮಾಜಿಕ ನ್ಯಾಯ ನೀಡುವಲ್ಲಿ ಮತ್ತು ಮೂಢ ನಂಬಿಕೆಗಳ ವಿರುದ್ಧ ಹೋರಾಡಿ ಸಮಾನತೆಯ ಹರಿಕಾರಾಗಿ ಜನಮಾನಸದಲ್ಲಿ ಉಳಿದವರು. ಅದರಲ್ಲದೇ ಅಲ್ಲಮಪ್ರಭುದೇವರುಗಳ ವಚನಗಳಂತೆ ಇವರು ರಚಿಸಿದ ವಚನಗಳು ಬೆಡಗಿನ ವಚನಗಳಾಗಿ ಹೊರಹೊಮ್ಮಿವೆ. ವಚನಗಳು ಮಾನವ ಸಾರಸ್ವತ ಲೋಕದ ದಿವ್ಯ ಗಂಗೆ. ನಮ್ಮೊಳಗು ಹೊರಗುಗಳನ್ನು  ಶುದ್ಧಗೊಳಿಸಿ ಅಂತರಂಗ ಅರಳಿಸಿ, ಮಹಾ ಮಾನವತಾವಾದವನ್ನು ಹಗುರವಾಗಿ ತಿಳಿಸಿದ ಮೇರು ಸಾಹಿತ್ಯವನ್ನು ನೀಡಿದರು. ವಚನಗಳು ಸರಳ ಸುಂದರ. ಆದರೆ ಅವುಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ತೃಪ್ತಿಕರವಾದ ಪ್ರಯತ್ನ ನಡೆಯುತ್ತಿಲ್ಲ. ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಮನಸ್ಸನ್ನು ಹಗುರವಾಗಿಸಿಕೊಂಡು ವೈಜ್ಞಾನಿಕವಾದ ಚಿಂತನೆಗಳನ್ನೂ ಒಳಗೊಂಡ ವಚನ ಸಾಹಿತ್ಯ ಹಾಗೂ ಶರಣ ತತ್ವ ಸಂದೇಶಗಳನ್ನು ಪ್ರಸಾರ ಮಾಡುವುದು ಪುಣ್ಯ ಕಾರ್ಯ ಎಂದು ತಿಳಿಸಿದರು. 

ತಾಲೂಕಾ ಕದಳಿ ವೇದಿಕೆ ಅಧ್ಯಕ್ಷೆ ಕಾಶಿಬಾಯಿ ಶಿವಯೋಗೆಪ್ಪ ರಾಂಪೂರ ಅವರು ಮಾತನಾಡಿ, ವಚನ ಸಂಸ್ಕಾರವೆಂಬುದು ಗುರು ಲಿಂಗ ಜಂಗಮದಲ್ಲಿ ಶ್ರದ್ಧೆಯನ್ನು ಹೊಂದಿ ಬದುಕನ್ನು ಸಮಾಜಮುಖಿಯಾಗಿ ಅರಳಿಸಿಕೊಳ್ಳುವ ಒಂದು ದಿವ್ಯ ಸಾಹಿತ್ಯ. ಆಚಾರ ಸಂಹಿತೆಯನ್ನು ಅತ್ಯಂತ ಸರಳವಾಗಿ ಅನುಭಾವದ ಮೂಲಕ ನೀಡಿದ ವಚನಕಾರರ ಅಂತಃಶಕ್ತಿಯ ಅಭಿವ್ಯಕ್ತಿ ಮಾನವ ಕುಲವನ್ನು ಉದ್ಧರಿಸುವ ನುಡಿ ಸಂಪತ್ತು. ಇಂಥ ಸಾಹಿತ್ಯದ ಸಂಸ್ಕಾರ ಮನೆ ಮನೆಗೆ ತಲುಪಿ ನೆಮ್ಮದಿಯ ಜೀವನಕ್ಕೆ ನಾಂದಿಯಾಗುವಂತಾಗಬೇಕು ಎಂದರು. 

ಸಾಹಿತಿ ಬಿ ಪಿ ಪಾಟೀಲ, ಬಸವರಾಜ ಎನ್ ಲಿಂಗದಳ್ಳಿ, ಭಾರತಿ ಪಾಟೀಲ, ಸರೋಜಾ ಕೋರಿ, ಸುನಂದಾ ಬೇವಿನಗಿಡದ, ಪುರಸಭೆ ಸದಸ್ಯೆ ಪ್ರೀತಿ ದೇಗಿನಾಳ, ಮಹಾದೇವಿ ವಾಲಿ, ಮಹಾಮನೆ ಬಳಗ ಹಾಗೂ ಕದಳಿ ವೇದಿಕೆ ಸದಸ್ಯರು ಇದ್ದರು. 


ಸುದ್ದಿ ಓದಿ