ಎಐವೈಎಫ್ ವತಿಯಿಂದ ಹುತಾತ್ಮ ದಿನಾಚರಣೆ
ಬಳ್ಳಾರಿ, ಮಾ.23: ಭಗತ್ಸಿಂಗ್ ಮತ್ತು ಗೆಳೆಯರು ನೇಣುಗಂಭಕ್ಕೇರಿದ ಈ ದಿನ ದೇಶವ್ಯಾಪಿಯಾಗಿ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತದೆ. ಇಂದು ಬಳ್ಳಾರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಳ್ಳಾರಿ ಸುತ್ತಮುತ್ತಲಿನ ಊರುಗಳಿಂದ ಬಂದಂತಹ ಯುವಜನ ಫಡೆರೇಷನ್ ಕಾರ್ಯಕರ್ತರು ಮತ್ತು ಮುಖ್ಯಸ್ಥರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ನಾಗಭೂಷಣರಾವ್ ಇವರು ಮಾತನಾಡಿ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಇದ್ದಂತಹ ವಾತಾವರಣ ಈಗಲೂ ಜಾರಿಯಲ್ಲಿದ್ದು, ನಾಡಿನ ನೈಸರ್ಗಿಕ ಸಂಪತ್ತು ಸೇರಿದಂತೆ ಎಲ್ಲಾ ಕೈಗಾರಿಕೆಗಳನ್ನು ಬ್ಯಾಂಕ್, ವಿಮಾ ಸೇರಿದ ಬಲಿಷ್ಠ ಹಣಕಾಸು ಸಂಸ್ಥೆಗಳನ್ನು ಖಾಸಗೀ ಬಂಡವಾಳ ಶಾಹಿಗಳಿಗೆ ಧಾರೆಯೆರಚುವ ಈ ಒಂದು ಸನ್ನಿವೇಶದಲ್ಲಿ ನಾಡಿನ ಯುವಜನತೆ ಹೆಚ್ಚಿನ ಜಾಗೃತಿಯಿಂದ ಹೋರಾಟವನ್ನು ಮುಂದುವರೆಸಬೇಕೆಂದು ಕರೆ ನೀಡಿದರು.
ಇದೇ ರೀತಿ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎ.ಆರ್.ಎಂ. ಇಸ್ಮಾಯಿಲ್ ಮಾತನಾಡಿ, ಹೋರಾಟಗಾರರು ಇತಿಹಾಸಕ್ಕೆ ಗೊಬ್ಬರವಿದ್ದಂತೆ, ಹೋರಾಟವಿಲ್ಲದೇ ಚರಿತ್ರೆಯಿಲ್ಲ ಎಂಬ ಸಂದೇಶವನ್ನು ಸಾರುವ ಜೀವಾಹುತಿ ಭಗತ್ಸಿಂಗ್ ಮತ್ತು ಗೆಳೆಯರ ಒಂದು ತ್ಯಾಗ ಎಂಬುದನ್ನು ನಾಡಿನ ಜನ ಮರೆಯುವಂತಿಲ್ಲ. ಇಂದಿನ ಪರಿಸ್ಥಿತಿ ನೋಡಿದಾಗ ಸುಮಾರು 300ಕ್ಕೂ ಹೆಚ್ಚು ಜನ ರೈತರು ರಾಜಧಾನಿಯ ಬೀದಿಯಲ್ಲೇ ಜೀವ ತೆತ್ತಿರುವ ಘೋರವಾದ ಒಂದು ಘಟನೆ ನಡೆದಿದ್ದರೂ, ದೇಶದಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಪ್ರತಿಭಟನೆ ಕಂಡು ಬರುತ್ತಿಲ್ಲ. ಈ ಕಾರಣದಿಂದ ನಾಡಿನ ಯುವಜನರು ಹೆಚ್ಚಿನ ಪ್ರಮಾಣದಲ್ಲಿ ಪ್ರಜ್ಞಾವಂತರಾಗಿ ಪ್ರಬಲವಾದ ಹೋರಾಟಕ್ಕೆ ಅಣಿಯಾಗಬೇಕು, ಕ್ರಾಂತಿಕಾರಿ ಸಾಮಾಜಿಕ ಪರಿವರ್ತನೆಯಾಗದೇ, ಯಾವುದೇ ರೀತಿ ಬದಲಾವಣೆಯನ್ನು ನಿರೀಕ್ಷೆ ಮಾಡುವಂತಿಲ್ಲ ಎಂಬ ಅಂಶವನ್ನು ಒತ್ತಿ ಹೇಳಿದರು. ಸಂವಿಧಾನವನ್ನು ಮೊಟಕುಗೊಳಿಸುವ ಕುಟಿಲ ತಂತ್ರದಲ್ಲಿ ತೊಡಗಿದೆ ಕೇಂದ್ರ ಸರ್ಕಾರ. ಅದೇ ಕಾರಣದಿಂದ ಸಂವಿಧಾನ ಉಳಿಸಿ ಸಾಮಾಜಿಕ ನ್ಯಾಯ ಕಾಪಾಡಿ ಎಂಬ ಘೋಷಣೆಯೊಂದಿಗೆ ನಾಡಿನ ಯುವಜನತೆ ಪ್ರಬಲವಾದ ಚಳುವಳಿಗೆ ಮುಂದಾಗಬೇಕಾಗಿರುವುದು ಅನಿರ್ವಾಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎ.ಆದಿಮೂರ್ತಿ, ಎಐವೈಎಫ್ ಜಿಲ್ಲಾಧ್ಯಕ್ಷ ಕಟ್ಟೇಬಸಪ್ಪ, ಉಪಾಧ್ಯಕ್ಷರಾದ ವೇಮರೆಡ್ಡಿ, ತಾಲ್ಲೂಕು ಅಧ್ಯಕ್ಷ ಮಲ್ಲಪ್ಪ, ಕಲ್ಯಾಣಗೌಡ, ಮಾರೇಶ್, ವಿಶ್ವನಾಥಸ್ವಾಮಿ, ಮುಕ್ಕಣ್ಣ, ಎಐಕೆಎಸ್ ಜಿಲ್ಲಾಧ್ಯಕ್ಷ ವೀರೇಶ್, ಕರಿಬಸಪ್ಪ, ಹಲಕುಂದಿ ವೀರೇಶ್ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.