ಬೇಟಿ ಬಚಾವೋ ಬೇಟಿ ಪಡಾವೋ ಜಾಗೃತಿ ಅಭಿಯಾನ
ಇಂಡಿ 20: ಹೆಣ್ಣು ಮಕ್ಕಳಿಗೆ ಧ್ವನಿಯಿಲ್ಲದ ಕಾಲವೊಂದಿತ್ತು. ಅಡುಗೆ ಮನೆಯ ಚೌಕಟ್ಟಿನ ಹೊರತು ಅವಳಿಗೆ ಪ್ರಪಂಚವಿರಲಿಲ್ಲ. ಆದರೆ ಈಗ ಕಾಲ ಬದಲಾಗುತ್ತಿದೆ. ಹೆಣ್ಣು ತನ್ನ ಏಳಿಗೆಯ ಕನಸುಗಳಿಗೆ ರೆಕ್ಕೆ ಕಟ್ಟುತ್ತಿರುವುದನ್ನು ಗಂಡು ಮಕ್ಕಳು ಕುತೂಹಲದಿಂದ ಗಮನಿಸುತ್ತಿದ್ದಾರೆ. ಆದರೂ ಅವಳು ಈಗಷ್ಟೇ ಮೊಟ್ಟೆಯೊಡೆದ ’ಲಾರ್ವ’. ಇನ್ನೂ ಕಲಿತು, ಬಲಿತು ಗಟ್ಟಿಗೊಳ್ಳಬೇಕಿದೆ. ಅವಳು ತನ್ನ ಪ್ರಯಾಣದಲ್ಲಿ ಎರಡು ಮುಖ್ಯ ತೊಡಕುಗಳನ್ನು ಎದುರಿಸಬೇಕಿದೆ ಎಂದು ಯಶೋದಾ ಜೋಶಿ ಹೇಳಿದರು.
ಅವರು ತಾಲ್ಲೂಕಿನ ತಡವಲಗಾ ಗ್ರಾಮದ ಶ್ರೀ ಮರುಳಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ತಡವಲಗಾ ವಲಯ ಮಟ್ಟದ ಬೇಟಿ ಬಚಾವೋ ಬೇಟಿ ಪಡಾವೋ ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ವಿಜಯಪೂರ ಜಿಲ್ಲಾ ಮಹಿಳಾ ಸಬಲೀಕರಣ ಇಲಾಖೆ ಘಟಕದ ಜನರಲ್ ಸ್ಪೆಷಲಿಸ್ಟ್ ಅಧಿಕಾರಿ ಯಶೋದಾ ಜೋಶಿ ಉದ್ಘಾಟಿಸಿ ಮಾತನಾಡಿದ ಮೊದಲನೆಯದು ’ಸಮಾನತೆ’, ಎರಡನೆಯದು ’ರಕ್ಷಣೆ’. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಹೆಣ್ಣಿಗೆ ಈಗಲೂ ರಕ್ಷಣೆಯಿಲ್ಲ. ಹೆಣ್ಣಿನ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಭ್ರೂಣ ಹತ್ಯೆ, ಅನಕ್ಷರತೆ, ಕಿರುಕುಳ, ತಾರತಮ್ಯ, ಅವಮಾನ, ಅಗೌರವ, ಅತ್ಯಾಚಾರ ಮೊದಲಾದ ಅನ್ಯಾಯಗಳು ಹತೋಟಿಗೆ ಬರಬೇಕಾದರೆ, ಅವಳಿಗೆ ಬಾಲ್ಯದಿಂದಲೇ ತನ್ನ ಅಧಿಕಾರ, ಹಕ್ಕುಗಳ ಅರಿವಿರಬೇಕಾಗುತ್ತದೆ. ಈ ಅರಿವು ಮೂಡಿಸುವ ಜವಾಬ್ದಾರಿ ಪೋಷಕರದ್ದು.ಈ ಜವಾಬ್ದಾರಿಯನ್ನು ನಿಭಾಯಿಸಲು ಪೋಷಕರು ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳುವುದು ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತಡವಲಗಾ ವಲಯದ ಅಂಗನವಾಡಿ ಮೇಲ್ವಿಚಾರಕಿಯರಾದ ತೃಪ್ತಿ ತಿಳಿಗೋಳ ಮಾತನಾಡಿ ಹೆಣ್ಣು ಮಕ್ಕಳ ಜನನವನ್ನು ನಾವು ಖುಷಿಯಿಂದ ಸಂಭ್ರಮಿಸಬೇಕು. ನಾವು ನಮ್ಮ ಹೆಣ್ಣು ಮಕ್ಕಳ ಬಗ್ಗೆ ಒಂದೇ ರೀತಿಯ ಅಭಿಮಾನ ಹೊಂದಿರಬೇಕು. ನಿಮ್ಮ ಪುತ್ರಿಯ ಜನನವಾದಾಗ ಕನಿಷ್ಟ 5 ಗಿಡಗಳನ್ನು ನೆಟ್ಟು ಸಂಭ್ರಮಿಸಬೇಕು. 2015ರ ಜನವರಿ 22 ರಂದು ಪ್ರಧಾನ ಮಂತ್ರಿಯವರು ಹರಿಯಾಣದ ಪಾಣಿಪತ್ ನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಚಾಲನೆ ನೀಡಿದರು. ಮಕ್ಕಳ ಲಿಂಗಾನುಪಾತ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಈ ಯೋಜನೆ ಉತ್ತರ ಕಂಡುಕೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿತವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಪ್ರಶಸ್ತಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮುಖ್ಯಗುರುಗಳು, ಶಿಕ್ಷಕರು ಮತ್ತು ಶಿಕ್ಷಕಿಯರು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿನಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.