ರಣಜಿ ಟ್ರೋಫಿಯಲ್ಲಿ ದಾಖಲೆ ಬರೆದ ಬೆಂಗಾಲ್ ಬ್ಯಾಟರ್ಸ್; 9 ಆಟಗಾರರಿಂದ ತಲಾ ಹಾಫ್ ಸೆಂಚುರಿ!
ಬೆಂಗಳೂರು: ಜೂನ್ 08: ಪಂದ್ಯದಲ್ಲಿ ಬೆಂಗಾಲ್ ತಂಡವು ವಿಶ್ವ ದಾಖಲೆ ಬರೆದಿದೆ. ಬೆಂಗಳೂರಿನಲ್ಲಿ ನಡೆದ ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ತಮ್ಮ ಒಂಬತ್ತು ಬ್ಯಾಟರ್ಗಳು ಅರ್ಧಶತಕಗಳನ್ನು ಗಳಿಸುವುದರೊಂದಿಗೆ ಬಂಗಾಳ ಕ್ರಿಕೆಟ್ ತಂಡವು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿತು.
ನಾಕೌಟ್ ಹಂತದ ಆಟದ ಮೂರನೇ ದಿನದಂದು ಬೆಂಗಾಲ್ 773/7 ಎಂದು ಡಿಕ್ಲೇರ್ ಮಾಡಿಕೊಂಡಿತು. ಈ ಸಮಯದಲ್ಲಿ ಅವಕಾಶ ಪಡೆದು ಅಂಗಳಕ್ಕಿಳಿದ ಎಲ್ಲಾ ಬ್ಯಾಟರ್ಗಳು ಕನಿಷ್ಠ ತಲಾ ಅರ್ಧಶತಕ ಬಾರಿಸಿದರು. ನಂ. 3 ಬ್ಯಾಟರ್ ಸುದೀಪ್ ಘರಾಮಿ ಮತ್ತು ನಂ. 4 ಅನುಸ್ತುಪ್ ಮಜುಂದಾರ್ ಮೂರಂಕಿ ಸ್ಕೋರ್ ತಲುಪಿದರು. ಪ್ರಥಮ ದರ್ಜೆ ಇನ್ನಿಂಗ್ಸ್ ನಲ್ಲಿ ಒಂಬತ್ತು ಬ್ಯಾಟ್ಸ್ ಮನ್ಗಳು ತಲಾ ಅರ್ಧಶತಕ ಸಿಡಿಸಿದ್ದು ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು.
ಈ ಹಿಂದೆ ಮೊದಲ ದರ್ಜೆಯ ಇನ್ನಿಂಗ್ಸ್ ನಲ್ಲಿ ತಂಡವೊಂದರ ಎಂಟು ಬ್ಯಾಟರ್ಗಳು ಅರ್ಧಶತಕಗಳನ್ನು ಗಳಿಸಿದ್ದು 1893 ರಲ್ಲಿ ಘಟಿಸಿದ್ದು ಇದುವರೆಗೂ ದಾಖಲೆಯಾಗಿತ್ತು. ಪೋರ್ಟ್ಸ್ಮೌತ್ನಲ್ಲಿ ನಡೆದ ಆ ಪಂದ್ಯದಲ್ಲಿ, ಆಕ್ಸ್ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳ ವಿರುದ್ಧ ಪ್ರವಾಸಿ ಆಸ್ಟ್ರೇಲಿಯಾ ತಂಡದ ಎಂಟು ಸದಸ್ಯರು ಕನಿಷ್ಠ ತಲಾ ಅರ್ಧಶತಕ ಗಳಿಸಿದ್ದರು.