ಗಡಿ ವಿವಾದ ಬಗೆಹರಿಯವ ತನಕ ಬೆಳಗಾವಿ ವಿಭಜನೆ ಬೇಡ : ನಾವು ಬೇರೆಯಾಗುವದು ಬೇಡ : ಹಿರಿಯ ಸಾಹಿತಿ ಗವಿಮಠ
ಬೆಳಗಾವಿ : ನ್ಯಾಯಾಲಯದಲ್ಲಿ ಗಡಿ ವಿವಾದ ಇತ್ಯರ್ಥ ಆಗುವವರೆಗೆ ಬೆಳಗಾವಿ ಜಿಲ್ಲೆ ವಿಭಜನೆ ಮಾಡುವದು ಬೇಡ. ಒಂದೇ ಇರುವ ಬೆಳಗಾವಿಯ ನಾವೆಲ್ಲರು ಬೇರೆ ಆಗುವದು ಬೇಡ ಎಂದು ಎಂದು ಬೆಳಗಾವಿಯ ಹಿರಿಯ ಸಾಹಿತಿ ಬಿ.ಎಸ್.ಗವಿಮಠ ಅವರು ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ನಿಜವಾಗಿ ಜಿಲ್ಲೆಯ ಅಥಣಿ ತಾಲೂಕಿನ ಜನತೆಗೆ ಬೆಳಗಾವಿ ದೂರದ ಮಾತಾಗುತ್ತದೆ. ಆದರೆ ಸಾಂಸ್ಕೃತಿಕವಾಗಿ ನಮ್ಮ ಜಿಲ್ಲೆ ಒಂದಾಗಿ ಇರಬೇಕು. ಜಿಲ್ಲೆ ಒಡೆದರೆ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಭಾಷಿಕರ ಪ್ರಾಬಲ್ಯ ಅಧಿಕವಾಗುತ್ತದೆ ಎಂದಿದ್ದಾರೆ.
ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ, ಬೆಳಗಾವಿ ಮಹಾ ನಗರ ಸಭೆಯಲ್ಲಿ ಅವರದೇ ಬಹುಮತವಾಗುತ್ತದೆ. ಆಡಳಿತ ಮರಾಠಿಯಲ್ಲಿ ನಡೆಸಬಹುದು. ಇದರ ಹೊರತಾಗಿ ನಮ್ಮೊಳಗೆ ವಿರಸ. ಈ ಹಿಂದೆ ಖ್ಯಾತ ಪತ್ರಕರ್ತ ಡಾ. ಪಾಟೀಲ್ ಪುಟ್ಟಪ್ಪ ಅವರು ಒಂದು ಕಾಲಕ್ಕೆ ನಿಪ್ಪಾಣಿ ಜಿಲ್ಲೆ ಮಾಡಬೇಕೆಂದು ಪ್ರತಿಪಾದಿಸಿದ್ದರು. ಗಡಿ ವಿವಾದದ ಪರಿಹಾರಕ್ಕೆ ಅವರು ಪರಿಹಾರವೆಂದು ಆ ಮಾತು ಆಡಿದ್ದರು. ಗಡಿವಿವಾದ ಬಗೆಹರಿಯುವ ತನಕ ಜಿಲ್ಲೆಯನ್ನು ವಿಭಜಿಸುವುದು ಬೇಡ ಎಂದು ಹೇಳಿದ್ದಾರೆ.