ವಿವಿಧ ಬೇಡಿಕೆಗಳಿಗಾಗಿ ಬೆಳಗಾವಿ ಚಲೋ
ಮಹಾಲಿಂಗಪುರ : ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಎಪಿಎಂಸಿ, ಮಿಲ್, ಗೋಡೌನ್, ವೇರ್ಹೌಸ್, ನಗರ ಮತ್ತು ಗ್ರಾಮೀಣ ಬಜಾರ ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳಿಗಾಗಿ ಕರೆ ನೀಡಿರುವ ಬೆಳಗಾವಿ ಚಲೋ ಹಾಗೂ ಸುವರ್ಣಸೌಧದ ಎದುರು ಪ್ರತಿಭಟನೆ ಕಾರ್ಯಕ್ರಮಕ್ಕೆ ಸ್ಥಳೀಯ ಎಪಿಎಂಸಿ ಶ್ರಮಿಕ ಸಂಘದ ಸದಸ್ಯರು ಸೋಮವಾರ ಮುಂಜಾನೆ ಬೆಳಗಾವಿಗೆ ಪ್ರಯಾಣ ಬೆಳೆಸಿದರು.
ಸ್ಥಳೀಯ ಎಪಿಎಂಸಿ ದ್ವಾರದ ಬಸವೇಶ್ವರ ಪುತ್ತಳಿಗೆ ಹಾರ ಹಾಕಿ ಶ್ರಮಿಕ ಸಂಘದ ಪೈಗಂಬರ್ ಪೆಂಡಾರಿ ಮಾತನಾಡಿ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸಾಗಬೇಕು, ವಸತಿ, ಭವಿಷ್ಯ ನಿಧಿ, ಪಿಂಚಣಿ, ಕನಿಷ್ಠ ಕೂಲಿ, ಕೋವಿಡ್ ಪರಿಹಾರ, ಎಪಿಎಂಸಿ ಕಾಯಕ ನಿಧಿ ಅಡಿಯಲ್ಲಿ ನಿವೃತ್ತಿ ಮತ್ತು ಮರಣ ಪರಿಹಾರ, ವಿದ್ಯಾರ್ಥಿ ವೇತನ, ಈ ಶ್ರಮ ಕಾರ್ಡುದಾರರಿಗೆ ಕಲ್ಯಾಣ ಕಾರ್ಯಕ್ರಮ ಜಾರಿ ಮಾಡುವ ಕುರಿತು ಸರಕಾರವನ್ನು ಆಗ್ರಹಿಸುವ ಅಂಶಗಳನ್ನು ಸಭೆಯಲ್ಲಿ ವಿವರಿಸಿದರು.
ಈ ಸಭೆಯಲ್ಲಿ ಎಲ್ಲ ಸದಸ್ಯರು ಬೇಡಿಕೆಗಳ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತ ಒಕ್ಕೊರಲಿನಿಂದ ಶ್ರಮಿಕ ವರ್ಗಕ್ಕೆ ಜಯವಾಗಲಿ ಎಂದು ಘೋಷನೆ ಕೂಗಿದರು.
ಸಂಘದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಹಾಗೂ ಶ್ರಮಿಕರು ಭಾಗವಹಿಸಿದ್ದರು. ಇವರ ಪ್ರಯಾಣಕ್ಕೆ ಇನ್ನಿತರ ಶ್ರಮಿಕರು ಶುಭಕೋರಿ ಬೀಳ್ಕೊಟ್ಟರು.