ಬೆಳಗಾವಿ ಪಾಲಿಕೆಯಲ್ಲಿ ಅರಳಿದ ಕಮಲ : ಹೊಸ ಇತಿಹಾಸ ನಿರ್ಮಿಸಿದ ಬಿಜೆಪಿ : ಮಹಾಪೌರರಾಗಿ ಶೋಭಾ ಸೋಮಾನಾಚೆ ಉಪ ಮಹಾಪೌರರಾಗಿ ರೇಷ್ಮಾ ಪಾಟೀಲ ಆಯ್ಕೆ
ಬೆಳಗಾವಿ, ಫೆ, 6 : ಇಂದು ನಡೆದ ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಮಹಾಪೌರರಾಗಿ ಶೋಭಾ ಸೋಮಾನಾಚೆ ಅವಿರೋಧವಾಗಿ ಹಾಗೂ ಉಪ ಮಹಾಪೌರರಾಗಿ ರೇಷ್ಮಾ ಪಾಟೀಲ ಇವರುಗಳು ಆಯ್ಕೆವಾಗಿದ್ದು, ಸಭಾ ನಾಯಕರಾಗಿ ರಾಜಶೇಖರ ಡೋನಿ ಅವರು ಆಯ್ಕೆಯಾಗಿದ್ದಾರೆ.
ಸೋಮವಾರ ಬೆಳಿಗ್ಗೆ ಪಾಲಿಕೆಯಲ್ಲಿ ನಡೆದ ಚುನಾವಣೆಯಲ್ಲಿ ಮಹಾಪೌರ ಸ್ಥಾನಕ್ಕೆ ವಾಣಿ ಜೋಶಿ, ಶೋಭಾ ಸೋಮಾನಾಚೆ ಮತ್ತು ರೇಷ್ಮಾ ಪಾಟೀಲ ಈ ಮೂವರು ರೇಸ್ ನಲ್ಲಿ ಇದ್ದರು. ಆದರೆ ಇದರಲ್ಲಿ ಶೋಭಾ ಸೋಮಾನಾಚೆ ಅವರನ್ನು ಮಹಾಪೌರ ಹಾಗೂ ರೇಷ್ಮಾ ಪಾಟೀಲ ಉಪ ಮಹಾಪೌರ ಸ್ಥಾನಕ್ಕಾಗಿ ಅಧಿಕೃತವಾಗಿ ನಾಮಪತ್ರಗಳನ್ನು ಸಲ್ಲಿಸಿದ್ದರು. ಅದರಂತೆ ಉಪ ಮಹಾಪೌರ ಸ್ಥಾನಕ್ಕೆ ವೈಶಾಲಿ ಬಾಥಕಾಂಡೆ ಅವರು ನಾಮಪತ್ರ ಸಲ್ಲಿಸಿದ್ದರು.
ಬೆಳಗಾವಿ ಪಾಲಿಕೆಗೆ ಚುನಾವಣೆ ನಡೆದು ಒಂದುವರೆ ವರ್ಷದಿಂದ ಗತಿಸಿದ್ದರೂ ಕೂಡಾ ಇಲ್ಲಿಯ ವರೆಗೆ ಮಹಾಪೌರ ಹಾಗೂ ಉಪ ಮಹಾಪೌರ ಸ್ಥಾನಗಳಿಗೆ ಚುನಾವಣೆ ನಡೆಯದೆ ಉಳಿದಿತ್ತು. ಅಲ್ಲದೆ ಇದಕ್ಕೆ ಶಾಸಕ ಸತೀಶ ಜಾರಕಿಹೊಳಿ ಅವರು ಮಹಾಪೌರ ರಿಗೆ ಗೌನ್ ನೀಡುವ ಬಗ್ಗೆ ಹಲವು ಬಾರಿ ವ್ಯಂಗ್ಯ ವಾಡಿದ್ದರು.
ಆದರೆ ಕಳೆದ ಕೆಲವು ದಿನಗಳ ಹಿಂದೆ ಪ್ರಾದೇಶಿಕ ಆಯುಕ್ತರಾದ ಎಮ್.ಜಿ ಹಿರೇಮಠ ಅವರು ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಸರಕಾರದ ನಿರ್ದೇಶನದಂತೆ ಅಧಿಸೂಚನೆಯನ್ನು ಹೊರಡಿಸಿದ್ದರು.
ಈ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಒಟ್ಟು 58 ಸದಸ್ಯರುಗಳ ಪೈಕಿ ಬಿಜೆಪಿ 35 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬೆಳಗಾವಿ ಪಾಲಿಕೆಯ ಇತಿಹಾಸದಲ್ಲಿ ಮೈಲುಗಲ್ಲು ಆಯಿತು. ಅಲ್ಲದೆ ಪಾಲಿಕೆ ಚುಕ್ಕಾಣಿ ಹಿಡಿದ ಮೊದಲ ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತ್ತು.
ಈ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲಿ ಬೆರಳೆಣಿಕೆಯಷ್ಟು ಕನ್ನಡ ಮಹಾಪೌರರು ಆಯ್ಕೆಯಾಗಿರುದನ್ನು ಹೊರತುಪಡಿಸಿದರೆ ಉಳಿದ ಎಲ್ಲ ಅವಧಿಯಲ್ಲಿ ಎಮ್ ಇಎಸ್ ಮಾತ್ರ ಅಧಿಕಾರ ಚುಕ್ಕಾಣಿ ಹಿಡಿದು ಬೀಗುತ್ತಿತ್ತು.
ಆದರೆ ಈ ಬಾರಿ ಬೆಳಗಾವಿ ಮಹಾನಗರ ಪಾಲಿಕೆಗೆ ಪ್ರಥಮಬಾರಿ ಪಕ್ಷಗಳ ಚಿನ್ಹೆ ಮೇಲೆ ಚುನಾವಣೆ ನಡೆದು ಶಾಸಕರಾದ ಅಭಯ್ ಪಾಟೀಲ ಹಾಗೂ ಅನಿಲ ಬೆನಕೆ ಇವರ ಪ್ರಯತ್ನದಿಂದ ಬಿಜೆಪಿ ಪಕ್ಷವು ಎಮ್ ಇಎಸ್ ಅನ್ನು ಬಗ್ಗು ಬಡೆದು ಪಾಲಿಕೆಯಲ್ಲಿ ಸರಳ ಬಹುಮತ ಪಡೆಯುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯಿತು.
ಆದರೆ ಚುನಾವಣೆ ಬಳಿಕ 1.5 ವರ್ಷಗಳ ಬಳಿಕ ಪಾಲಿಕೆಯಲ್ಲಿ ಮಹಾಪೌರ, ಉಪ ಮಹಾಪೌರ ಸ್ಥಾನಗಳಿಗೆ ಚುನಾವಣೆ ನಡೆದು ಕೊನೆಯಲ್ಲಿ ಮಹಾಪೌರರಾಗಿ ಶೋಭಾ ಸೋಮಾನಾಚೆ ಹಾಗೂ ಉಪ ಮಹಾಪೌರರಾಗಿ ರೇಷ್ಮಾ ಪಾಟೀಲ ಇವರುಗಳು ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಗಳಾಗಿ ಪ್ರಾದೇಶಿಕ ಆಯುಕ್ತ ಎಮ್.ಜಿ.ಹಿರೇಮಠ ಅವರು ಕಾರ್ಯ ನಿರ್ವಹಿಸಿದರು.
ಇಂದು ಮಹಾಪೌರ ರಾಗಿ ಆಯ್ಕೆಯಾಗಿರುವ ಶೋಭಾ ಸೋಮಾನಾಚೆ ಅವರು ಬೆಳಗಾವಿ ನಗರದ 57 ವಾರ್ಡಿನಿಂದ ಆಯ್ಕೆಯಾಗಿದ್ದರು. ಅಲ್ಲದೆ ಉಪ ಮಹಾಪೌರ ಸ್ಥಾನವನ್ನು ಅಲಂಕರಿಸಿದ್ದ ರೇಷ್ಮಾ ಪಾಟೀಲ ಅವರು 33 ವಾರ್ಡಿನಿಂದ ಆಯ್ಕೆಯಾಗಿದ್ದರು.