ಬೆಳಗಾವಿಯ ಬಿಜೆಪಿ ಭದ್ರಕೋಟೆ ಛಿದ್ರಗೋಳಿಸಿದ ಕಾಂಗ್ರೆಸ್ : 11 ಸ್ಥಾನಗಳಲ್ಲಿ ಕೈ ಕಿಲ್ ಕಿಲ್, 7ರಲ್ಲಿ ಕಮಲ ವಿಲ್ ವಿಲ್ : ನಾಯಕರ ಲೆಕ್ಕಾಚಾರ ಬುಡಮೇಲ
ಪಾರೇಶ ಭೋಸಲೆ
ಬೆಳಗಾವಿ : ತೀವ್ರ ಕೂತುಹಲ ಕೆರಳಿಸಿದ್ದ ವಿಧಾನಸಭೆ ಚುನಾವಣೆಯ ಇಂದು ನಡೆದ ಮತಗಳ ಎಣಿಕೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿನ ಒಟ್ಟು 18 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇನ್ನೂಳಿದ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಸಾಧಿಸುವ ಮೂಲಕ ಬೆಳಗಾವಿ ಜಿಲ್ಲೆಯ ಬಿಜೆಪಿ ಭದ್ರಕೋಟಿಯನ್ನು ಕಾಂಗ್ರೆಸ್ ಛಿದ್ರಗೋಳಿಸಿದೆ.
ಶನಿವಾರ ನಗರದ ಆರ್‍ಪಿಡಿ ಕಾಲೇಜಿನಲ್ಲಿ ನಡೆದ ವಿಧಾನ ಸಭೆ ಚುನಾವಣೆಯ ಬೆಳಗಾವಿ ಜಿಲ್ಲೆಯ ಮತಗಳ ಎಣಿಕೆ ಕಾರ್ಯದಲ್ಲಿ ಈ ಅಚ್ಚರಿಯ ಫಲಿತಾಂಶ ಬಂದಿದ್ದು, ಜಿಲ್ಲೆಯ ಕೆಲ ಘಟಾನುಘಟಿಗಳು ಸೋತು ಸುಣ್ಣವಾಗಿದ್ದಾರೆ. ಕೇಂದ್ರದಲ್ಲಿನ ಹಾಗೂ ರಾಜ್ಯದಲ್ಲಿನ ಡಬಲ್ ಇಂಜಿನ್ ಸರಕಾರ ಹಲವಾರು ಅಭಿವೃದ್ದಿ ಕಾರ್ಯಗಳನ್ನು ನೋಡಿ ಮತ ನೀಡಿ ಎಂದು ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ನಾಯಕರು ಪ್ರಚಾರ ಕೈಗೊಂಡಿದ್ದರು. ಅದರಂತೆ ಹಲವಾರು ಯೋಜನೆಗಳನ್ನು ಘೋಷಣೆಗಳ ಮೂಲಕ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿತ್ತು.
ಆದರೆ ಇಂದು ಶನಿವಾರ ನಡೆದ ಚುನಶಾವಣೆಯ ಮತಗಳ ಎಣಿಕೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದಿದ್ದು, ಜಿಲ್ಲೆಯ ಒಟ್ಟು 18 ವಿಧಾನಸಭಾ ಕ್ಷೇತ್ರಗಳ ಪೈಕಿ ಒಟ್ಟು 11 ಕ್ಷೇತ್ರಗಳಲ್ಲಿ ಮತದಾರರು ಕಾಂಗ್ರೆಸ್‍ನ ಕೈ ಹಿಡಿದಿದ್ದಾರೆ. ಅದರಂತೆ 7 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಮಕ್ಕೆ ಜೈ ಅಂದಿರುವ ಮತದಾರರು ಅಚ್ಚರಿಯ ನಿರ್ಣಯ ಕೈಗೊಂಡಿದ್ದಾರೆ. ಈ ಹಿಂದೆ 13 ಸ್ಥಾನ ಪಡೆಯುವ ಮೂಲಕ ಬಿಜೆಪಿಯ ಭದ್ರಕೋಟೆಯಾಗಿದ್ದ ಬೆಳಗಾವಿ ಜಿಲ್ಲೆಯನ್ನು ಕಾಂಗ್ರೆಸ್ ಪಕ್ಷವು ಈ ಬಾರಿ 11 ಕ್ಷೇತ್ರದಲ್ಲಿ ಜಯ ಸಾಧಿಸುವ ಮೂಲಕ ಛಿದ್ರವಾಗಿ ಮಾಡಿದೆ.
ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಬಿಜೆಪಿ ತೋರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಚಿವ ಲಕ್ಷ್ಮಣ ಸವದಿ ಅವರು ಬಿಜೆಪಿಯ ಹಾಲಿ ಶಾಸಕ ಮಹೇಶ ಕುಮಠಳ್ಳಿ ಅವರ ವಿರುದ್ದ ಜಯ ಸಾಧಿಸಿದ್ದಾರೆ. ಅದರಂತೆ ಕಾಗವಾಡದಲ್ಲಿ ಹಾಲಿ ಶಾಸಕ ಶ್ರೀಮಂತ ಪಾಟೀಲ ಅವರ ವಿರುದ್ದ ಮಾಜಿ ಶಾಸಕ ರಾಜು ಕಾಗೆ ಜಯಸಾಧಿಸಿದ್ದಾರೆ. ರಾಯಬಾಗದಲ್ಲಿ ಹಾಲಿ ಶಾಸಕ ದುರ್ಯೋಧನ ಐಹೋಳೆ ಅವರು ಜಯ ಸಾಧಿಸುವ ಮೂಲಕ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ. ಕುಡಚಿಯಲ್ಲಿ ಬಿಜೆಪಿಯ ಹಾಲಿ ಶಾಸಕ ಪಿ. ರಾಜೀವ ಅವರ ವಿರುದ್ದ ಮಹೇಂದ್ರ ತಮ್ಮಣ್ಣವರ ಜಯಸಾಧಿಸಿದ್ದಾರೆ.
ಚಿಕ್ಕೋಡಿಯಲ್ಲಿ ಹಾಲಿ ಶಾಸಕ ಗಣೇಶ ಹುಕ್ಕೇರಿ ಅವರು ರಮೇಶ ಕತ್ತಿ ಅವರ ವಿರುದ್ದ ಜಯ ಗಳಿಸಿದ್ದಾರೆ. ನಿಪ್ಪಾಣಿಯಲ್ಲಿ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಉತ್ತಮ ಪಾಟೀಲ ಅವರ ವಿರುದ್ದ ಜಯ ಸಾಧಿಸಿದ್ದಾರೆ. ಹುಕ್ಕೇರಿಯಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ ಅವರ ವಿರುದ್ದ ನಿಖಿಲ್ ಕತ್ತಿ ಅವರ ಜಯ ಸಾಧಿಸಿದ್ದಾರೆ. ಯಮಕನಮರಡಿಯಲ್ಲಿ ಹಾಲಿ ಶಾಸಕ ಸತೀಶ ಜಾರಕಿಹೊಳಿ ಅವರು ಬಸವರಾಜ ಹುಂದ್ರಿ ಅವರ ವಿರುದ್ದ ಜಯ ಸಾಧಿಸಿದ್ದಾರೆ. ಬೆಳಗಾವಿ ಉತ್ತರದಲ್ಲಿ ಡಾ. ರವಿ ಪಾಟೀಲ ವಿರುದ್ದ ರಾಜು ಶೇಠ್ ಜಯ, ದಕ್ಷೀಣದಲ್ಲಿ ಸ್ವತಂತ್ರ ಅಭೈರ್ಥಿ ರಮಾಕಾಂತ ವಿರುದ್ದ ಅಭಯ ಪಾಟೀಲ ಜಯ ಸಾಧಿಸಿದ್ದಾರೆ.
ಗ್ರಾಮೀಣದಲ್ಲಿ ಚೌಗಲೆ ವಿರುದ್ದ ಲಕ್ಷ್ಮೀ ಹೆಬ್ಬಾಳಕರ್ ಅವರು ಜಯ ಸಾಧಿಸಿದ್ದಾರೆ. ಖಾನಾಪೂರದಲ್ಲಿ ಹಾಲಿ ಶಾಸಕಿ ಅಂಜಲಿ ನಿಂಬಾಳಕರ ವಿರುದ್ದ ಬಿಜೆಪಿಯ ವಿಠಳ ಹಲಗೇಕರ್ ಜಯ ಸಾಧಿಸಿದ್ದಾರೆ. ಕಿತ್ತೂರಿನಲ್ಲಿ ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ವಿರುದ್ದ ಬಾಬಾಸಾಹೇಬ ಪಾಟೀಲ ಅವರು ಜಯ ಗಳಿಸಿದ್ದಾರೆ. ಬೈಲಹೊಂಗಲದಲ್ಲಿ ಹಾಲಿ ಶಾಸಕ ಮಹಾಂತೇಶ ಕೌಜಲಗಿ ಅವರು ಜಗದೀಶ ಮೆಟ್ಟಗುಡ್ಡ ಅವರ ವಿರುದ್ದ ಆಯ್ಕೆಯಾಗುವ ಮೂಲಕ ತಮ್ಮ ಸ್ಥಾನವನ್ನು ಭದ್ರವಾಗಿಟ್ಟುಕೊಂಡಿದ್ದಾರೆ. ರಾಮದುರ್ಗದಲ್ಲಿ ಅಶೋಕ ಪಟ್ಟಣ ಅವರು ಚಿಕ್ಕರೇವಣ್ಣ ಅವರ ವಿರುದ್ದ ಜಯ ಗಳಿಸಿದ್ದಾರೆ. ಅದೇ ರೀತಿ ಗೋಕಾಕದಲ್ಲಿ ಮಹಾಂತೇಶ ಕಡಾಡಿ ವಿರುದ್ದ ಹಾಲಿ ಶಾಸಕ ರಮೇಶ ಜಾರಕಿಹೊಳಿ ಜಯ ಸಾಧಿಸಿದ್ದಾರೆ. ಅರಭಾವಿಯಲ್ಲಿ ಹಾಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಜಯ ಸಾಧಿಸಿದ್ದಾರೆ. ಸವದತ್ತಿಯಲ್ಲಿ ರತ್ನಾ ಮಾಮನಿ ವಿರುದ್ದ ವಿಶ್ವಾಸ ವೈದ್ಯ ಅವರು ಜಯ ಸಾಧಿಸಿದ್ದಾರೆ.