ಬೆಳಗಾವಿ ಎಸ್‌ಪಿ 18ನೇ ಫೋನ್ ಇನ್ ಕಾರ್ಯಕ್ರಮ : ಅಕ್ರಮ ಸರಾಯಿ, ಮಟ್ಕಾ, ವಿರುದ್ದ ಕ್ರಮಕ್ಕೆ ನಾಗರಿಕರ ದೂರು
ಬೆಳಗಾವಿ : ಸಾರ್ವಜನಿಕರು ನೇರವಾಗಿ ತಮ್ಮ ದೂರು ಸಮಸ್ಯೆ ಮತ್ತು ಸಲಹೆಗಳನ್ನು ನೀಡಲು ಶನಿವಾರ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಮ್ಮಿಕೊಂಡ ಫೋನ್-ಇನ್ ಕಾರ್ಯಕ್ರಮದಲ್ಲಿ ಒಟ್ಟು 82 ಕರೆಗಳು ಸ್ವೀಕೃತವಾಗಿದ್ದು, ಇದರಲ್ಲಿ ಅಕ್ರಮ ಮದ್ಯ ಮಾರಾಟ, ಕಾನೂನು ಬಾಹಿರ ಚಟುವಟಿಕೆಗಳು, ವಿದ್ಯುತ್ ಸಮಸ್ಯೆ ಕೌಟುಂಬಿಕ ಸಮಸ್ಯೆ ಸೇರಿದಂತೆ ಹಲವಾರು ದೂರು ಹಾಗೂ ಕೆಲವು ಸಲಹೆಗಳು ಬಂದ್ದವು. ಇದೇ ವೇಳೆ ಸಾರ್ವಜನಿಕರ ಕರೆಗಳನ್ನು ಸ್ವಿಕರಿಸಿ, ನಮಸ್ಕಾರಿ ನಾನು ಬೆಳಗಾವಿ ಎಸ್ಪಿ ಮಾತಾಡೋದು, ಏನಿದೆ ನಿಮ್ಮ ಸಮಸ್ಯೆ ಎನ್ನುತ್ತ ತಮಗೆ ಬಂದ ಕರೆಗಳಿಗೆ ಸ್ಪಂದಿಸಿ ಜನರ ಕಷ್ಟಗಳನ್ನು ಡಾ. ಸಂಜೀವ ಪಾಟೀಲ ಅವರು ಆಲಿಸಿದರು.
ಶನಿವಾರ ದಿ. ೨೬ರಂದು ಜಿಲ್ಲಾ ಪೊಲೀಸ್ ಭವನದ ಸಭಾಂಗಣದಲ್ಲಿ ೧೮ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಎಸ್ಪಿ ಸಂಜೀವ ಪಾಟೀಲ ನೇತೃತ್ವದ ತಂಡದ ಎದುರು ಜಿಲ್ಲೆಯ ಹಾಗೂ ಬೆಳಗಾವಿ ನಗರದ ಸಾರ್ವಜನಿಕರು ಕರೆ ಮಾಡಿ ಅಕ್ರಮ ಸರಾಯಿ, ಮಟ್ಕಾ, ಜೂಜಾಟ ತಡೆಗಟ್ಟುವುದು, ಸಂಚಾರ, ಸೇರಿ ಹೀಗೆ ತಮ್ಮ ಹಲವಾರು ಸಮಸ್ಯೆಗಳನ್ನು ಹೇಳಿ ಪರಿಹಾರ ಕಂಡುಕೊಂಡರು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಸರಾಯಿ, ಮಟ್ಕಾ, ಜೂಜಾಟ ತಡೆಗಟ್ಟುವುದು, ಸಂಚಾರ ಸಮಸ್ಯೆ, ಬೈಕ್ ಸವಾರರಿಂದ ಕರ್ಕಶ ಶಬ್ಧ, ಜಮೀನು ವಿವಾದ, ಕೌಟುಂಬಿಕ ಸಮಸ್ಯೆ, ಅಕ್ರಮ ಮರಳು ಸಾಗಾಟ, ನಗರ ಪೊಲೀಸ್ ಇಲಾಖೆ ಸೇರಿದಂತೆ ಹೊರ ಜಿಲ್ಲೆಯಿಂದಲೂ ಜನರು ಕರೆ ಮಾಡಿದ್ದರು.
ಅದೇ ರೀತಿಯಾಗಿ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ 24 ಗಂಟೆಗಳ ಕಾಲ ಸರಾಯಿ ಅಂಗಡಿ ತೆರದಿರುತ್ತದೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಿವರಿಸಿದರು. ಅಲ್ಲದೆ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮ ಜಮೀನು ವ್ಯಾಜ್ಯ, ಬೈಲಹೊಂಗಲ ಪಟ್ಟಣದಲ್ಲಿ ನನ್ನ ತಾಯಿ ಕಡೆಯಿಂದ ಒಂದೂವರೆ ಲಕ್ಷ ರೂ. ಹೆಚ್ಚುವರಿ ಹಣ ಪಡೆದಿದ್ದಾರೆ. ಆ ಹಣ ಮರಳಿ ಕೊಡಿಸುವಂತೆ ಎಸ್ಪಿಗೆ ವ್ಯಕ್ತಿಯೊರ್ವ ಕರೆ ಮಾಡಿ ವಿನಂತಿಸಿದರು.
ಅದೇ ರೀತಿ ಯರಗಟ್ಟಿ ತಾಲೂಕಿನ ಬೂದಿಗೊಪ್ಪ ಗ್ರಾಮದ ವ್ಯಕ್ತಿಯೊರ್ವ ಕರೆ ಮಾಡಿ, ಗ್ರಾಮದಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಬೈಕ್ ಸವಾರರು ಕರ್ಕಶ ಶಬ್ಧ ಮಾಡಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ತಿಳಿಸಿದರು. ರಾಯಬಾಗ ತಾಲೂಕಿನಲ್ಲಿ ಮಟ್ಕಾ ಹಾಗೂ ಜೂಜಾಟದ ಹಾವಳಿ ಹೆಚ್ಚಾಗಿದೆ. ಬುಕ್ಕಿಗಳ ಮೇಲೆ ಕ್ರಮಕೈಗೊಳ್ಳ ಬೇಕೆಂದು ವ್ಯಕ್ತಿಯೊರ್ವ ಕರೆ ಮಾಡಿ ಹೇಳಿದರು. ಗೋಕಾಕ ಪಟ್ಟಣದಲ್ಲಿ ಸೊಸೈಟಿಯವರು ೫೦ ಸಾವಿರ ರೂ. ವಂಚನೆ ಮಾಡಿದ್ದಾರೆ. ಈ ಕುರಿತು ದೂರು ಕೊಡಲು ಹೋದರು ಪೊಲೀಸರು ಪ್ರಕರಣ ದಾಖಲಿಸಲು ಹಿಂದೆಟ್ಟು ಹಾಕುತ್ತಿದ್ದಾರೆ ಎಂದು ದೂರಿದರು.
ಬೈಲಹೊಂಗಲ ತಾಲೂಕಿನ ಗುರಗುಂದ ಗ್ರಾಮ ಮಸೀದಿಯ ಹಿಂಬದಿಯಲ್ಲಿ ಜೂಜಾಟ ಅಡ್ಡಾ ಮಾಡಿಕೊಂಡಿದ್ದಾರೆ. ಅಲ್ಲಿ ದಾಳಿ ಮಾಡುವಂತೆ ಕರೆ ಮಾಡಿ ವ್ಯಕ್ತಿಯೊರ್ವ ದೂರು ಹೇಳಿಕೊಂಡರು. ನಗರದ ಭಾಗ್ಯ ನಗರದ ಹಿರಿಯ ನಾಗರಿಕರು ಕರೆ ಮಾಡಿ, ಬಿದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಹಾನಗರ ಪಾಲಿಕೆಯವರಿಗೆ ಹಲವಾರು ಬಾರಿ ದೂರು ನೀಡಿದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ. ಮಕ್ಕಳು, ಮಹಿಳೆಯರು, ವೃದ್ಧರು ರಸ್ತೆಯಲ್ಲಿ ಸಂಚಾರ ನಡೆಸುವುದೇ ದುಸ್ತರವಾಗಿದೆ. ಪಾಲಿಕೆಯ ಅಧಿಕಾರಿಗಳಿಗೆ ಬಿದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ತಿಳಿಸಿ ಎಂದರು.
ಬೆಳಗಾವಿ ನಗರದ ಶಹಾಪುರ, ಎಪಿಎಂಸಿ, ಮಾರ್ಕೇಟ್, ಬೆಳಗಾವಿ ಗ್ರಾಮೀಣ, ಟಿಳಕವಾಡಿ, ಬಾಗಲಕೋಟ ಹಾಗೂ ಹುಬ್ಬಳ್ಳಿಯಿಂದಲೂ ಜನರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ, ಡಿವೈಎಸ್ಪಿ ವೀರೇಶ ದೊಡಮನಿ, ಸಿಪಿಐಗಳಾದ ಬಿ.ಆರ್.ಗಡ್ಡೇಕರ, ಮಹಾದೇವ ಎಸ್.ಎಂ. ಬಾಳಪ್ಪ ತಳವಾರ, ಪೊಲೀಸ್ ಸಿಬ್ಬಂದಿಗಳಾದ ಶ್ರೀಶೈಲ ಬಳಿಗಾರ, ವಿಠ್ಠಲ್ ಮಾದರ ಉಪಸ್ಥಿತರಿದ್ದರು.