ಉತ್ತಮ ಶಿಕ್ಷಕ ಪ್ರಶಸ್ತಿಗೆ ಬಸವರಾಜ ಸಸಾಲಟ್ಟಿ ಭಾಜನ
ಲೋಕದರ್ಶನ ವರದಿ
ಗುರ್ಲಾಪೂರ 01: ಸರ್ಕಾರಿ ಕನ್ನಡ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಬಿ.ಬಿ. ಸಸಾಲಟ್ಟಿ ಅವರಿಗೆ ಮೂಡಲಗಿ ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆ ವತಿಯಿಂದ “ಉತ್ತಮ ಶಿಕ್ಷಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಎಲ್.ಪಿ. ನೇಮಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ಸುಭಾಸ ಕಡಾಡಿ ಮಾತನಾಡಿ, 2008ರಿಂದ ಉತ್ತಮ ಶಿಕ್ಷಕರು, ಸ್ವಚ್ಛ ಬಿಸಿಯೂಟ ತಯಾರಕರು ಹಾಗೂ ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯವನ್ನು ವೇದಿಕೆ ಮಾಡುತ್ತಿದೆ ಎಂದರು.
ಬಸವರಾಜ ಸಸಾಲಟ್ಟಿ ಅವರು 32 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಶಾಲೆಯ ಅಭಿವೃದ್ಧಿಯೊಂದಿಗೆ ವಿದ್ಯಾರ್ಥಿಗಳಿಗೆ ಶಾಲಾ ಅವಧಿಯ ಹೊರತಾಗಿಯೂ ಪಾಠ ಬೋಧಿಸುತ್ತಿರುವುದು ಶ್ಲಾಘನೀಯ ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುಖ್ಯೋಪಾಧ್ಯಾಯ ಬಸವರಾಜ ಸಸಾಲಟ್ಟಿ, ಕನ್ನಡ ವೇದಿಕೆಯವರು ತಮ್ಮ ಸೇವೆಯನ್ನು ಗುರುತಿಸಿ ಗೌರವಿಸಿರುವುದು ಸಂತಸ ತಂದಿದೆ. ಪ್ರಶಸ್ತಿಯು ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.