ಹಗರಿಬೊಮ್ಮನಹಳ್ಳಿ

ಸರ್ವೆ ಅಧಿಕಾರಿಗಳ ಹಾಗೂ ಎಂ.ಬಿ.ಕಾಲೋನಿ ನಿವಾಸಿಗಳ ನಡುವೆ ಮಾತಿನ ಚಕಮಕಿ

ಸರ್ವೆ ಅಧಿಕಾರಿಗಳ ಹಾಗೂ ಎಂ.ಬಿ.ಕಾಲೋನಿ ನಿವಾಸಿಗಳ ನಡುವೆ ಮಾತಿನ ಚಕಮಕಿ

ನಿವೇಶನ, ಕಣಗಳ ಪಟ್ಟ ನೀಡುವಂತೆ ಪಟ್ಟು

ಹಗರಿಬೊಮ್ಮನಹಳ್ಳಿ 15: ಪಟ್ಟಣದ ಪುರಸಭೆ ವ್ಯಾಪ್ತಿಯ ಎಂ.ಬಿ.ಕಾಲೂನಿಯಲ್ಲಿ, ಸರ್ಕಾರದ ಭೂಮಿಯನ್ನು ಸರ್ವೆ ಮಾಡಲು ಹೋದ ಸರ್ವೆಯರ್ ಅಧಿಕಾರಿಗಳನ್ನು ಗ್ರಾಮಸ್ಥರು ತಡೆದು, ಬೇಡಿಕೆ ಈಡೇರಿಸಿ ಭೂಮಿ ಅಳತೆಗೆ ಮುಂದಾಗುವಂತೆ ಪಟ್ಟು ಹಿಡಿದು ವಾಪಸ್ಸು ಕಳಿಸಿದ ಘಟನೆ ಬುಧವಾರ ನಡೆದಿದೆ.

ತುಂಗಭದ್ರ ಡ್ಯಾಂ ನಿರ್ಮಾಣದ ಕಾಮಗಾರಿ ಆರಂಭವಾದಾಗ, ತಾಲೂಕಿನ ಮುತ್ಕೂರು, ಬೆನಕಾಪುರ ಗ್ರಾಮಗಳು ಹಿನ್ನೀರಿನಲ್ಲಿ ಮುಳುಗಡೆಯಾದ ಪರಿಣಾಮ ಅಂದು ಸ್ಥಳಾಂತರಗೊಂಡು, ಈ ಎಂ.ಬಿ.ಕಾಲೂನಿ(ಮುತ್ಕೂರು-ಬೆನಕಾಪುರ)ಎಂದು ಮರು ನಾಮಕಾರಣಮಾಡಿ ಬಂದು ನೆಲಸಿದರು. ಸರ್ಕಾರದ ಮುಳುಗಡೆಗೊಂಡ ಪ್ರದೇಶದ ನಿವಾಸಿ ರೈತರಿಗೆ ಪರಿಹಾರವಾಗಿ ಪ್ರಸ್ತುತ ಸ್ಥಳದಲ್ಲಿ ತಲಾ 5ಎಕರೆ ಕೃಷಿ ಭೂಮಿ, ಕಣಗಳು ಹಾಗೂ ನಿವೇಶನಗಳನ್ನು ನೀಡಿದ್ದರು. ರೈತರು ಹೊಸ ಜೀವನವನ್ನು ಕಟ್ಟಿಕೊಂಡರು. ಅಲ್ಲಿಂದ ಇಲ್ಲಿಯವರೆಗೂ ಕಣಗಳಿಗೆ ಪಹಣಿ ನೀಡಿ, ನಿವೇಶನಗಳಿಗೆ ಪಟ್ಟ ನೀಡಿ ಎಂದು ತಾಲೂಕು ದಂಡಾಧಿಕಾರಿಗಳಿಗೆ, ಸ್ಥಳೀಯ ಗ್ರಾ.ಪಂ.ಆಡಳಿತಗಳಿಗೆ ಮನವಿ ಪತ್ರಗಳನ್ನು ನೀಡಿದರು ಪ್ರಯೋಜನವಾಗದೆ, ಅಧಿಕಾರಿಗಳು ಇವರ ಕೂಗಿಗೆ ಕಿವಿಗೊಡದೆ ಇಂದು ಸರ್ಕಾರಿ ಭೂಮಿ ಸರ್ವೆ ಮಾಡಬೇಕು ಎಂದು ಬಂದ ಅಧಿಕಾರಿಗಳನ್ನು ಗ್ರಾಮಸ್ಥರು ತಡೆದರು.

ಗ್ರಾಮಸ್ಥರ ಪರವಾಗಿ ಬಿ.ಎಂ.ವಾಮದೇವಯ್ಯ, ಮಲ್ಲಿಕಾರ್ಜುನ, ಕರಿಯಪ್ಪ ಮತ್ತು ಶಂಕ್ರಪ್ಪ ಮಾತನಾಡಿ, ನಾವು ಇಲ್ಲಿ 60 ವರ್ಷಗಳಿಗಿಂತಲೂ ಹೆಚ್ಚುಕಾಲ ನಮ್ಮ ಹಿರಿಯರೊಂದಿಗೆ ವಾಸವಾಗಿದ್ದೇವೆ. ನಮಗೆ ಸರ್ಕಾರ ನೀಡಿದ ನಿವೇಶನ ಮತ್ತು ಕಣಗಳ ಪಟ್ಟ, ಪಹಣಿ ನೀಡದೆ, ಅಕ್ರಮ ಸಕ್ರಮಗಳಲ್ಲಿ ಸೌಲಭ್ಯಗಳನ್ನು ಕಲ್ಪಿಸದೇ, ಈಗ ಏಕಾಏಕಿ ಸರ್ಕಾರಿ ಭೂಮಿ ಅಳತೆ ಮಾಡಲು ಪೊಲೀಸರೊಂದಿಗೆ ಸರ್ವೆ ಅಧಿಕಾರಿಗಳು ಬಂದಿದ್ದಾರೆ. ನಾವು ಕಣಗಳಿಗೆ ಪಹಣಿ ಮತ್ತು ನಿವೇಶನಗಳಿಗೆ ಪಟ್ಟ ನೀಡದೆ ಅಳತೆ ಮಾಡಲು ಬಿಡುವುದಿಲ್ಲ, ಆಗ ಅಧಿಕಾರಿಗಳ ನಡುವೆ ಮತ್ತು ಗ್ರಾಮಸ್ಥರ ನಡುವೆ ವಾಗ್ವಾದಗಳು ಜರುಗಿದವು. ಪೊಲೀಸರ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು.

ಆರ್.ಐ. ಸಾಲ್ಮನಿ ಕೊಟ್ರೇಶ ಮಧ್ಯೆ ಪ್ರವೇಶಿಸಿ ನಿವೇಶನಗಳು ಮತ್ತು ಕಣಗಳನ್ನು ಗುರುತಿಸಲು ಅವಕಾಶಮಾಡಿಕೊಡಿ, ನಂತರ ಉಳಿದ ಸರ್ಕಾರಿ ನಿವೇಶನವನ್ನು ಅಳತೆಮಾಡಿಕೊಳ್ಳುವ ಭರವಸೆ ನೀಡಿದರು.ಇದಕ್ಕೆ ಸಮಸ್ತ ಗ್ರಾಮಸ್ಥರ ಚರ್ಚೆಯ ಬಳಿಕ ದಿನಾಂಕ ನಿಗದಿ ಮಾಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳಾದ ಎಡಿಎಲ್‍ಆರ್ ಬಸವರಾಜ್ ರೋಣದ್, ತಾಲೂಕು ಸರ್ವೆಯರ್ ರಮೇಶ, ಗ್ರಾಮಲೆಕ್ಕಾಧಿಕಾರಿ ನೇತ್ರಾವತಿ, ಎಎಸ್‍ಐ ಕಲ್ಲಪ್ಪ, ಗೋವಿಂದಪ್ಪ ಎಸ್.ಜಯಪ್ಪ, ಕೋರಿ ದುರುಗಪ್ಪ, ನಾಗಪ್ಪ, ಕೊಟ್ರೇಶ್, ಹುಗ್ಗಿ ಹನುಮಂತಪ್ಪ, ಬಸವರಾಜ್, ಚನ್ನವೀರಸ್ವಾಮಿ, ದೇವೆಂದ್ರಪ್ಪ, ಕೆ.ಮಂಜುನಾಥ, ಎಚ್.ವಿಕ್ರಮ್, ಮಂಜಪ್ಪ, ಎಸ್.ನಿಂಗಪ್ಪ, ವಸಂತಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.

ಸುದ್ದಿ ಓದಿ