ಸಾರಿಗೆ ಇಲಾಖೆಯ ಬಾಲಕೃಷ್ಣ ಅವರು ನಾಳೆ ವಯೋನಿವೃತ್ತಿ

ಸಾರಿಗೆ ಇಲಾಖೆಯ ಬಾಲಕೃಷ್ಣ ಅವರು ನಾಳೆ ವಯೋನಿವೃತ್ತಿ

ಕುಶಲಕರ್ಮಿಯಾಗಿ ಬಂದವರು ಚಾರ್ಜಮನ್ ಆಗಿ ನಿವೃತ್ತಿಗೊಳ್ಳುತ್ತಿರುವ ಸರಳಜೀವಿ 

ಬಾಲಕೃಷ್ಣ ಅವರು ಈಶಾನ್ಯ ಕರ್ನಾಟಕ ಅಥವಾ ಇಂದಿನ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗೀಯ ಕಛೇರಿಯ ಚಾರ್ಜಮ್ಯಾನ್ ಹುದ್ದೆಯಿಂದ 2023ರ ಜುಲೈ 31 ರಂದು ನಿವೃತ್ತರಾಗುತ್ತಿದ್ದಾರೆ, ಅವರ ಬಂಧುಗಳು ಮತ್ತು ಅವರ ಸಹೋದ್ಯೋಗಿಗಳು ಬೀಳ್ಕೊಡುತ್ತಿರುವ ನಿಮಿತ್ಯ ಅವರ ಕುರಿತು ಒಂದಿಷ್ಟು ಮಾಹಿತಿಯನ್ನು ಸಮುದಾಯದೊಟ್ಟಿಗೆ ಹಂಚಿಕೊಳ್ಳುತ್ತಾ ಅವರ ಎರಡನೇ ಇನ್ನಿಂಗ್ಸ್‌ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಆಶಿಸಿ ಈ ಕಿರು ಲೇಖನವನ್ನು ಬರೆದಿದ್ದೇನೆ. 

ಮೂಲತಃ ಕೊಪ್ಪಳ ಅವಿಭಜಿತ ಜಿಲ್ಲೆ ರಾಯಚೂರಿನಲ್ಲಿ 1963ರ ಜುಲೈ 10ರಂದು ಜನಿಸಿದ ಬಾಲಕೃಷ್ಣ ಅವರು ಬಿಎಸ್ಸಿ, ಬಿಎ ವಿದ್ಯಾಭ್ಯಾಸ ಮಾಡಿದವರು. ತಂದೆ ತಿಮ್ಮಯ್ಯ ಮತ್ತು ತಾಯಿ ನರಸಮ್ಮ ಅವರಿಗೆ ಮೂರು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳ ಪೈಕಿ ಇವರು ಕೊನೆ ಮಗ. ಬಾಲಕೃಷ್ಣ ಅವರ ಬಾಲ್ಯ ಅಷ್ಟು ಸುಂದರವಾಗಿಯೇನು ಇರಲಿಲ್ಲ. ತಂದೆ ದೂರದ ಬಾಂಬೆದಲ್ಲಿ ವ್ಯಾಪಾರ ಮಾಡುತ್ತಿದ್ದವರು. ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು ತಾಯಿಯ ಆಶ್ರಯದಲ್ಲಿ ಬೆಳೆದು ದೊಡ್ಡವರಾದರು. ಉದ್ಯೋಗದ ಅನಿವಾರ್ಯತೆ ಇದ್ದ ಕಾರಣ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ದರೂ ಸಹ 26ನೇ ವಯಸ್ಸಿನಲ್ಲಿಯೆ ಸಾರಿಗೆ ಇಲಾಖೆಯಲ್ಲಿ ವಿದ್ಯುತ್ ವಿಭಾಗದ ಕುಶಲಕರ್ಮಿಯಾಗಿ ಸೇವೆಗೆ ಸೇರಿದರು. 

ಸಮುದಾಯ ಆಗ ತುಂಬಾ ಗಟ್ಟಿಯಾಗಿ ನೆಲೆ ಕಂಡ ಸಂಘಟನೆ, ಕ್ರಾಂತಿಕಾರಿ ಮನಸ್ಸಿನ ಜನರನ್ನು ಒಳಗೊಮಡ ಹೋರಾಟದ ಕಿಚ್ಚು ಇದ್ದ, ಜನಪರ ಕಾಳಜಿ ಇದ್ದ ಸಂಘಟನೆ ಅಲ್ಲಿ ಬೀದಿ ನಾಟಕ, ಕಿರು ನಾಟಕಗಳ ಮೂಲಕ ಜನರಿಗೆ ರಂಜನೆ ಮತ್ತು ಜಾಗೃತಿ ಮೂಡಿಸಲಾಗುತ್ತಿತ್ತು. ಅಲ್ಲಿ ಬಾಲಕೃಷ್ಣ ಅವರು ಕಲಾವಿದನಾಗಿ ರೂಪಗೊಂಡವರು. ಪ್ರಸ್ತುತ ಬೀದರ್ ಜಿಲ್ಲೆಯಲ್ಲಿ ಪ್ರೌಢಶಾಲೆ ಶಿಕ್ಷಕಿಯಾಗಿರುವ ಎಂಎಸ್ಸಿ., ಬಿ.ಇಡಿ ಪದವೀಧರೆ ಆಗಿರುವ ಸುನಿತಾ ಅವರನ್ನು 2001 ರಲ್ಲಿ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ, ನಿಶಾಂತ ಮತ್ತು ಪದ್ಮಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 34 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ಚಾರ್ಜಮನ್ ಹುದ್ದೆಯಿಂದ ನಿವೃತ್ತರಾಗುತ್ತಿದ್ದಾರೆ. 

ಕೆ.ಎಸ್‌.ಆರ್‌.ಟಿ.ಸಿ ಸ್ಟಾಫ್ ಅಂಡ್ ವರ್ಕರ್ಸ್‌ ಯನಿಯನ್ ಕೊಪ್ಪಳ ವಿಭಾಗದ ಖಜಾಂಚಿಯಾಗಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ.ಜಾ. ಮತ್ತು ಪ.ಪಂ. ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ನಂತರ ಖಜಾಂಚಿಯಾಗಿ ಸೇವೆ ಸಲ್ಲಿಸಿ, ಕಾರ್ಮಿಕ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೈ ಎನಿಸಿಕೊಂಡವರು. ಸಮುದಾಯದ ಕಲಾವಿದನಾಗಿ ಬೀದಿ ನಾಟಕಗಳ ಮುಖಾಂತರ ಜನಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಅವರು ಘಟಕದಲ್ಲಿ ನಡೆಯುವ ಮಹನೀಯರ ಜಯಂತಿ, ಗಣೇಶ ಉತ್ಸವ, ರಾಷ್ಟ್ರೀಯ ಹಬ್ಬಗಳಲ್ಲಿ ಟ್ಯಾಬ್ಲೋ ನಿರ್ಮಾಣದಲ್ಲಿ ವಿಶೇಷ ಪಾತ್ರ ಇರುತ್ತಿತ್ತು. ಇನ್ನು ಕಾರ್ಮಿಕರ ಮೇಲೆ ಬರುತ್ತಿದ್ದ ಆಪಾದನಾ ಪತ್ರಗಳಿಗೆ ಸೂಕ್ತ ಉತ್ತರ ಬರೆದುಕೊಡುವ ಮೂಲಕ ಕಾರ್ಮಿಕ ವರ್ಗದ ರೈಟರ್ ಬಾಲಕೃಷ್ಣ ಆಗಿ ಎಲ್ಲರ ಪ್ರೀತಿಗೆ ಪಾತ್ರರಾದವರು. ಘಟಕದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಹೆಣ್ಣುಮಕ್ಕಳಿಗೆ ಸದಾ ಸಲಹೆ ಸೂಚನೆ ನೀಡುವ ಬಾಲಣ್ಣ ನಿವೃತ್ತರಾಗುತ್ತಿರುವ ಹಿನ್ನೆಲೆಯ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಸನ್ಮಾನಿಸಿ ಬೀಳ್ಕೊಡುತ್ತಿದ್ದಾರೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಆಶಿಸಿ ಈ ಪುಟ್ಟ ಬರಹ. 

ಬಾಲಕೃಷ್ಣ ಅವರ ಜೊತೆಗೆ 1991 ರಿಂದ ಒಡನಾಟವಿದ್ದು, ಅನೇಕ ದಲಿತಪರ ಹೋರಾಟಗಳಲ್ಲಿ ನಂತರ ಮಾನ್ಯತೆ ಪಡೆದ ಕೆ.ಎಸ್‌.ಆರ್‌.ಟಿ.ಸಿ ಸ್ಟಾಫ್ ಅಂಡ್ ವರ್ಕರ್ಸ್‌ ಯನಿಯನ್ ನಲ್ಲಿ ಜೊತೆಯಾಗಿ ಅಲ್ಲಿನ ನೌಕರರ ಹಿತಕ್ಕೆ ಒಟ್ಟಾಗಿ ಕೆಲಸ ಮಾಡಿದ್ದೇವೆ, ಹೃದಯವಂತ ಸ್ನೇಹಿತ ಸಾಕಷ್ಟು ನೋವುಗಳ ಮದ್ಯೆ ಬೆಳೆದು ಸರಕಾರಿ ಉದ್ಯೋಗ ಪಡೆದು ತಮ್ಮ ಸಹೋದರ ಸಹೋದರಿಯರಿಗೆ ಸ್ಪಂದಿಸಿ ಕುಟುಂಬ ಕಟ್ಟಿಕೊಂಡವರು. ಅವರ ನಿರಂತರ ಹೋರಾಟದ ಬದುಕಲ್ಲಿ ಈಗ ದ್ವಿತಿಯಾರ್ಧ ಬದುಕು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಶುಭವಾಗಲಿ ಎಂದು ಆಶಿಸುತ್ತೇನೆ. ಹಿ ಎ. ಜಿ. ಮಣ್ಣೂರ, ಸಹೋದ್ಯೋಗಿ, ಕೊಪ್ಪಳ. 



ಸುದ್ದಿ ಓದಿ