ನೇಕಾರರಿಗೆ ಕೆಟ್ಟಕಾಲ, ತಾಳ್ಮೆ ವಹಿಸಿ, ಜೀವ ಕಳೆದುಕೊಳ್ಳಬೇಡಿ ಉಮಾಶ್ರೀ ನೇಕಾರರಿಗೆ ಕಿವಿ ಮಾತು.
ಮಹಾಲಿಂಗಪುರ 16: ನೇಕಾರರಿಗೆ ಕೆಟ್ಟಕಾಲ ಬಂದಿದೆ ತಾಳ್ಮೆವಹಿಸಿ, ಜೀವ ಕಳೆದುಕೊಳ್ಳಬೇಡಿ, ಧೈರ್ಯವಿದ್ದರೆ ಎಲ್ಲವನ್ನೂ ಸಾಧಿಸಬಹುದು ಎಂದು ಮಾಜಿ ಸಚಿವೆ ಉಮಾಶ್ರೀ ಅವರು ಮೃತ ನೇಕಾರನ ಮಡದಿಗೆ ಧೈರ್ಯ ತುಂಬಿ ಮಾತನಾಡಿದರು.
ಇತ್ತೀಚಿಗೆ ನೇಣಿಗೆ ಶರಣಾದ ನೇಕಾರ ಮಲ್ಲಪ್ಪ ಯಡಪ್ಪನವರ ಮನೆಗೆ ಭೇಟಿ ಸಮಯದಲ್ಲಿ ಪರಿವಾರಕ್ಕೆ ಸಾಂತ್ವನದೊಂದಿಗೆ ಆರ್ಥಿಕ ಸಹಾಯ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದ ಅವರು, ರಾಜ್ಯಾದ್ಯಂತ ಹಾಗೂ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಹಾಗೂ ರಾಂಪೂರಗಳಲ್ಲಿ ಒಟ್ಟು ಇಬ್ಬರು ನೇಕಾರರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಗುರಿಯಾಗಿದ್ದಾರೆ. ಇವರನ್ನು ಕಳೆದುಕ್ಕೊಂಡ ಪರಿವಾರಗಳು ಸಂಕಷ್ಟದಿಂದ ಮುಂದಿನ ದಾರಿ ಕಾಣದೆ ಗೋಳಾಡುತ್ತಿವೆ. ಈ ಮುಂಚೆ ನೇಕಾರರ ಸಮಸ್ಯೆಗಳನ್ನು ಹೊತ್ತು ವಿರೋಧ ಪಕ್ಷದವರು, ಅನೇಕ ಸಂಘ-ಸಂಸ್ಥೆಗಳು, ರಾಜ್ಯಾದ್ಯಂತ ಆಗುತ್ತಿರುವ ನೇಕಾರರ ಆತ್ಮಹತ್ಯೆ ವಿಚಾರವನ್ನು ಭಾಜಪ ಸರ್ಕಾರಕ್ಕೆ ಮತ್ತು ಈ ಭಾಗದ ಶಾಸಕರಿಗೆ ಮನವರಿಕೆ ಮಾಡಿದರೂ ಕೂಡ ನೇಕಾರರ ಕಡೆಗೆ ಒಂದಿಷ್ಟು ಗಮನ ಹರಿಸುತ್ತಿಲ್ಲವೆಂದು ಆರೋಪಿಸಿ ಇದು ಘೋರ ಅನ್ಯಾಯವೆಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ನಾನು ಎಂಎಲ್ಸಿ ಇದ್ದೆ. ಆ ವೇಳೆಯಲ್ಲಿ ನೇಕಾರರ ಬದುಕಿಗೆ ಅನೇಕ ಯೋಜನೆಗಳ ಮುಖಾಂತರ ಕೋಟ್ಯಾಂತರ ಹಣವನ್ನು ತಂದಿದ್ದೇನೆ. ಈಗಿನ ಸರ್ಕಾರ ಅವುಗಳನ್ನು ಎಲ್ಲವನ್ನು ಮರೆಮಾಚಿದೆ ಎಂದರು. ವರ್ಷಕ್ಕೊಮ್ಮೆ ಕೇವಲ 2/3 ಸಾವಿರ ರೂಪಾಯಿಗಳನ್ನು ನೀಡಿದರೆ ಸಾಲದು. ನೇಕಾರರ ಬಗ್ಗೆ ಪ್ರಸ್ತುತ ಪರಿಸ್ಥಿತಿಯ ಅವಲೋಕನ ಮಾಡಿ ಅವರಿಗೊಂದು ನ್ಯಾಯ ದೊರಕಿಸಿಕೊಡಬೇಕು. ವಿದ್ಯುತ್ ಬಿಲ್ ಹಾಗೂ ಟ್ಯಾಕ್ಸ್ ಹೆಚ್ಚಳ ಒಂದೆಡೆಯಾದರೆ ನೇಯ್ದ ಸೀರೆಗೆ ಮಾರುಕಟ್ಟೆಯಿಲ್ಲ.ಎರಡು ವರ್ಷಗಳಿಂದ ಕೊರೋನಾ ಲಾಕ್ಡೌನ್ ನ್ನಿಂದಾಗಿ ಪ್ರತಿಶತ 50ರಷ್ಟು ನೇಕಾರ ಪರಿವಾರಗಳು ಕೆಲಸವಿಲ್ಲದೆ ತತ್ತರಿಸಿ ಹೋಗಿ ಅವರ ಭವಿಷ್ಯದಲ್ಲಿ ಅಂಧಕಾರ ಕವಿದಿದೆ.ಇನ್ನಾದರೂ ಕರ್ನಾಟಕ ಸರ್ಕಾರ ಎಚ್ಚೆತ್ತು ನೇಕಾರರ ಆತ್ಮಹತ್ಯೆಗಳನ್ನು ತಡೆಯಲು ಆರ್ಥಿಕ ಪ್ಯಾಕೇಜ್ ಗಳನ್ನು, ಕೈತುಂಬಾ ಕೆಲಸಕ್ಕೆ ಕಚ್ಚಾ ನೂಲು, ಇನ್ನಿತರ ಸಾಮಗ್ರಿಗಳು ಮತ್ತು ದುಡಿಮೆಗೆ ತಕ್ಕ ವೈಜ್ಞಾನಿಕ ಕೂಲಿ ಒದಗಿಸಿ ಎಂದು ಸರ್ಕಾರವನ್ನು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡ ರಬಕವಿ-ಬನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ನಗರ ಘಟಕ ಅಧ್ಯಕ್ಷ ಈಶ್ವರ ಚಮಕೇರಿ, ರಾಜು ಭಾವಿಕಟ್ಟಿ, ಹೊಳೆಪ್ಪ ಬಾಡಗಿ, ಮಹಾದೇವ ಬರಗಿ, ಶಂಕರ ಸೊನ್ನದ, ಬಸವರಾಜ ಧಡೂತಿ, ಬಸವರಾಜ ಕಂಪು, ಬಸವರಾಜ ಹಾಗೂ ಮಹಾದೇವ ಹೊಸಕೋಟಿ, ರಾಚು ಧಡೂತಿ, ಎಂ.ಜಿ.ಹುಣಶ್ಯಾಳ, ಮಹಾಲಿಂಗ ಕಂದಗಲ್ಲ, ಉಮೇಶ ಭಾವಿಕಟ್ಟಿ, ದುಂಡಪ್ಪ ಕರಡಿ, ಮಹಾಲಿಂಗ ಭಜಂತ್ರಿ ಮುಂತಾದವರಿದ್ದರು.
1) ಮೃತ ಕುಟುಂಬಗಳಿಗೆ ಉಮಾಶ್ರೀ ಭೇಟಿ : ಮಹಾಲಿಂಗಪುರದ ಕಲ್ ಪಡ ನಿವಾಸಿ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಎಸೆಸೆಲ್ಸಿ ವಿದ್ಯಾರ್ಥಿನಿ ಸ್ನೇಹಾ ಪರೀಟ್ ಅವರ ಮನೆಗೆ ಭೇಟಿ ನೀಡಿ ಕಡು ಬಡತನದಲ್ಲಿರುವ ಅಂಗವಿಕಲ ತಾಯಿಗೆ ಆರ್ಥಿಕ ಸಹಾಯ ನೀಡಿ ಅವರಲ್ಲಿ ಧೈರ್ಯ ತುಂಬಿದರು. ನಗರದ ಹ್ಯಾಗಾಡಿ ಪ್ಲಾಟ್ ನ ದಿ.ಸರಸ್ವತಿ ಆನಂದ ಮರೆಗುದ್ದಿ ಹಾಗೂ ಗಡಾದ ಓಣಿಯ ದಿ. ಸಂಗಪ್ಪ ಪರೀಠ್ ಅವರ ಮನೆಗಳಿಗೂ ಭೇಟಿ ನೀಡಿ ಪರಿವಾರಗಳ ದುಃಖದಲ್ಲಿ ಪಾಲ್ಗೊಂಡು ಸಾಂತ್ವನ ಹೇಳಿದರು.
2) ಜುಲೈ 18ರಂದು ಭಾನುವಾರ ಮುಂಜಾನೆ 9ಗಂಟೆಗೆ ಬನಹಟ್ಟಿ ಬಿದರಿ ಕಲ್ಯಾಣ ಮಂಟಪದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷಾತೀತವಾಗಿ ನೇಕಾರರ ಸಮಸ್ಯೆಗಳನ್ನು ಆಲಿಸಲಿದ್ದಾರೆ ನೇಕಾರ ಬಾಂಧವರು, ಮುಖಂಡರು ಇದರ ಸದುಪಯೋಗಪಡಿಸಿಕೊಳ್ಳಬೇಕು.