ಮಾಲವಿ ಜಲಾಶಯದ ಶಾಶ್ವತ ನೀರಿಗೆ ಬಿಎಸ್ವೈ ಅನುದಾನ ನೀಡಿದ್ದಾರೆ: ಮಲ್ಲಿಕಾರ್ಜುನನಾಯ್ಕ
ಹಗರಿಬೊಮ್ಮನಹಳ್ಳಿ 27: ಕ್ಷೇತ್ರದ ಬಹು ಕನಸಿನ ಯೋಜನೆಯಾದ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ಕಲ್ಪಿಸುವ ಯೋಜನೆಯ ಪ್ರಾತ್ಯಾಕ್ಷಿಕೆ ಸಫಲತೆ ಕಂಡಿರುವುದು ಸಂತೋಷದಾಯಕ ವಿಷಯ ಎಂದು ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಜಿಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಯ್ಕ್ ಹೇಳಿದರು.
ಪಟ್ಟಣದ ಕೂಡ್ಲಗಿ ರಸ್ತೆಯಲ್ಲಿರುವ ಬಿಜೆಪಿ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮಾಲವಿ ಜಲಾಶಯಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರು ಭೂಮಿಪೂಜೆ ನೆರವೇರಿಸಿ, ಯೋಜನೆಗೆ ಅನುಮೋದನೆ ನೀಡಿದ್ದು ಸ್ವಾಗತಾರ್ಹ. ತಾಲೂಕಿನ ರೈತಪರ ಹೋರಾಟಗಾರರು, ಕರವೇ ಸಂಘಟನೆಗಳು, ಮಠಾಧೀಶರು, ವರ್ತಕರು, ಅಟೋ ಚಾಲಕರು ಹೋರಾಟಗಳನ್ನು ಮಾಡಿದ ಫಲವಾಗಿ ಇಂದು ಮಾಲವಿ ಜಲಾಶಯಕ್ಕೆ ನೀರುಬಂದಿದೆ. ಪ್ರಸ್ತುತ ಬಿಜೆಪಿ ಸರಕಾರದ ಅವಧಿಯಲ್ಲಿ ಮಾಲವಿ ಜಲಾಶಯಕ್ಕೆ ಯಡಿಯೂರ್ಪನವರು ಅನುದಾನ ಬಿಡುಗಡೆಗೊಳಿಸಿ ಜಾರಿಗೊಳ್ಳಲು ಕಾರಣಿಕರ್ತರಾಗಿದ್ದಾರೆ. ಕ್ಷೇತ್ರದ ಶಾಸಕರು ಕೂಡ ಕಾಳಜಿವಹಿಸಿ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ಕಲ್ಪಿಸುವ ನಿಟ್ಟಿನಲ್ಲಿ ಶ್ರಮವಹಿಸಿದ್ದಾರೆ. ಯೋಜನೆ ಸಕಾರವಾಗುದರಲ್ಲಿ ಎಕ ಮುಖ ಪಾತ್ರವಲ್ಲದೇ, ಎಲ್ಲರ ಹೋರಾಟದ ಶ್ರಮದಿಂದ ಆಗಿದೆ. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರಕಾರವಿದ್ದಾಗ ಮತ್ತು ಬಿಜೆಪಿ ಸರಕಾರದ ಅವಧಿಯಲ್ಲಿ ಮಾಲವಿ ಜಲಾಶಯದ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ನಾಗರಾಜ ಜನ್ನು, ಜೋಗಿ ಹನುಮಂತ, ದೀಪಕ್ ಕಠಾರೆ, ಬೋವಿ ವೀರೇಶ್, ಬಣಕಾರ ಸುರೇಶ, ನವೀನ್, ಮುಖಂಡರಾದ ಈಡಿಗರ ಭರತ್, ಸಂದೀಪ್ ಶಿವಮೊಗ್ಗ ಇದ್ದರು.