ಬೆಳಗಾವಿಗೆ ಬಂದಿಳಿದ ಪ್ರಧಾನಿ ಮೋದಿ ಅವರಿಗೆ ಸ್ವಾಗತ ಕೋರಿದ ಬಿಜೆಪಿ ಮುಖಂಡರು
ಬೆಳಗಾವಿ : ಶನಿವಾರ ರಾತ್ರಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರಿಗೆ ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್, ಚಿಕ್ಕೋಡಿ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಸೇರಿದಂತೆ ಗಣ್ಯರು ಸ್ವಾಗತ ಕೋರಿದರು.
ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿ ನಾಯಕರ ಜತೆಗೆ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 15 ಕಾರ್ಯಕರ್ತರಿಗೆ ಅವಕಾಶ ನೀಡಲಾಗಿತ್ತು. ಬಾಳೇಶ ಚವ್ವನ್ನವರ್, ರಾಜೇಶ್ವರಿ ಒಡೆಯರ್, ಸುಭಾಷ್ ಸಣ್ಣ ವೀರಪ್ಪನವರ್ ಸೇರಿ ಬೆಳಗಾವಿಯ 15 ಹಲವು ಸಮುದಾಯಗಳ ಮುಖಂಡರು ಮೋದಿ ಅವರನ್ನು ಸ್ವಾಗತಿಸಿದರು.
ನಗರದ ಕಾಕತಿಯಲ್ಲಿರುವ ಐಟಿಸಿ ವೆಲ್‌ಕಮ್ ಹೋಟೆಲ್‌ನಲ್ಲಿ ಮೋದಿ ಅವರು ವಾಸ್ತವ್ಯ ಮಾಡಿದ್ದು, ಅವರಿಗಾಗಿ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಗುಜರಾತಿ ಸೇರಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಶೈಲಿಯ ಖಾದ್ಯಗಳನ್ನು ಸಿದ್ಧಪಡಿಸಿದ್ದು, ಮೂವತ್ತಕ್ಕೂ ಹೆಚ್ಚು ಬಗೆಯೆ ಪದಾರ್ಥಗಳನ್ನು ತಯಾರಿಸಲಾಗಿದೆ.
ಇವುಗಳಲ್ಲಿ ರಾಗಿ ಮುದ್ದೆ, ಜೋಳದ ರೊಟ್ಟಿ, ಟೊಮ್ಯಾಟೊ ಸಾರು, ದಾಲ್ ಕೂಡ ಸೇರಿವೆ. ಊಟಕ್ಕಾಗಿ ಸುಮಾರು ಮೂವತ್ತಾರು ನಮೂನೆಯ ಆಹಾರಕ್ಕಾಗಿ ಸಿದ್ಧಪಡಿಸಲಾಗಿತ್ತು. ಆದರೆ ಮೋದಿ ಅವರು ಎಳನೀರು ಮಾತ್ರ ಸೇವಿಸಿದರು ಎಂದು ಮೂಲಗಳು ತಿಳಿಸಿವೆ.
ಆದರೆ, ರಾತ್ರಿ ಆಗಮಿಸಿದ ಕಾರಣ ಅವರು ಯಾವ ನಾಯಕರ ಜೊತೆ ಯಾವ ರಾಜಕೀಯ ಚರ್ಚೆಯನ್ನು ನಡೆಸಿಲ್ಲ.
ಮೋದಿಯವರು ಕೊಲ್ಲಾಪುರದಿಂದ ನೇರವಾಗಿ ಬೆಳಗಾವಿಗೆ ಆಗಮಿಸುವರು ಎಂದು ಹೇಳಲಾಗಿತ್ತು. ಆದರೆ ಅವರು ಕೊಲ್ಲಾಪುರದಿಂದ ಗೋವಾಕ್ಕೆ ತೆರಳಿ, ಅಲ್ಲಿ ಚುನಾವಣಾ ಪ್ರಚಾರ ನಡೆಸಿ ರಾತ್ರಿ ಬೆಳಗಾವಿಗೆ ಆಗಮಿಸಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಬಂದ ಅವರು ನೇರವಾಗಿ ಕಾಕತಿ ಬಳಿಯ ಐಟಿಸಿ ವೆಲ್ ಕಮ್ ಹೋಟೆಲ್ ಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸುಮಾರು ಒಂದು ಗಂಟೆ ಕಾಲ ಸಂಚಾರ ವ್ಯವಸ್ಥೆ ನಿಲುಗಡೆಯಾಗಿತ್ತು.
ಬೆಳಗಾವಿ ಮಾರ್ಗದಲ್ಲಿ ಮೋದಿ ತೆರಳುತ್ತಿದ್ದಾಗ ಭಾರೀ ಸಂಖ್ಯೆಯಲ್ಲಿ ಜನ ನಿಂತು ಕಣ್ತುಂಬಿಕೊಂಡರು.
ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸಿದ ನಂತರ ಜಿಲ್ಲೆಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದೆ.