ಬಿಜೆಪಿಯಲ್ಲಿ ಪ್ರಾಮಾಣಿಕ ಕಾರ್ಯಕರ್ತರ ಅವಗಣನೆಯಾಗುತ್ತಿದೆ: ಮಹಮ್ಮದ್ ಫಾರೂಕ್
ಬಳ್ಳಾರಿ 03: ಭಾರತೀಯ ಜನತಾ ಪಾರ್ಟಿಗೆ ತನ್ನದೇ ಆದ ಅಸ್ತಿತ್ವ, ಅಸ್ಮಿತೆ ಹಾಗೂ ಘನತೆ ಇದೆ. ಈ ಪಕ್ಷವು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುತ್ತಿದೆ. ಪಕ್ಷದ ಹಿಡಿತ ಹೊಂದಿರುವ ಕೆಲ ನಾಯಕರ ಇಚ್ಛಾಶಕ್ತಿ ಕೊರತೆ ಹಾಗೂ ಕಾರ್ಯಕರ್ತರ ಮೇಲಿನ ನಿಷ್ಕಾಳಜಿಯಿಂದಾಗಿ ಪ್ರಾಮಾಣಿಕ ಕಾರ್ಯಕರ್ತರ ಅವಗಣನೆ ನಿರಂತರವಾಗಿ ನಡೆಯುತ್ತಿದೆ ಎಂದು ಬಿಜೆಪಿ ನಗರ ಘಟಕದ ಪೇರೆಂಟ್ ವಿಭಾಗದ ಕಾರ್ಯಕರ್ತ ಮಹಮ್ಮದ್ ಫಾರೂಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಭಾರತದ ಹೆಮ್ಮೆಯ ಪುತ್ರ ಅಟಲ್ ಬಿಹಾರಿ ವಾಜಪೇಯಿ, ಹೆಮ್ಮೆಯ ಪ್ರಧಾನಿ ಮೋದಿ, ಧೀಮಂತ ನಾಯಕರಾದ ಎಲ್.ಕೆ.ಅಡ್ವಾಣಿ ಅವರಂತಹ ಮೇರು ನಾಯಕರ ಗರಡಿಯಲ್ಲಿ ಪಕ್ಷವು ಸುಪುಷ್ಠವಾಗಿ ಬೆಳೆದಿದೆ. ರಾಜ್ಯದಲ್ಲಿಯೂ ಯಡಿಯೂರಪ್ಪ, ಕೆಎಸ್ ಈಶ್ವರಪ್ಪ, ಜನಾರ್ಧನರೆಡ್ಡಿ, ಬಿ.ಶ್ರೀರಾಮುಲು ಹಾಗೂ ಜಿ.ಸೋಮಶೇಖರ್ ರೆಡ್ಡಿ ಅವರಂತಹ ನಾಯಕರಿಂದ ಪಕ್ಷವು ಬಲಿಷ್ಠವಾಗಿದೆ. ಸ್ಥಳೀಯವಾಗಿ ಪಕ್ಷಕ್ಕಾಗಿ ದುಡಿಯುತ್ತಿರುವ ಪ್ರಾಮಾಣಿಕ ಕಾರ್ಯಕರ್ತರನ್ನು ಪಕ್ಷದವನ್ನು ಅಧಿಕಾರದಲ್ಲಿಟ್ಟುಕೊಂಡವರು ಸಂಪೂರ್ಣವಾಗಿ ನಿರ್ಲಕ್ಷಕೀಡು ಮಾಡುತ್ತಿರುವುದು ಶೋಚನೀಯವಾಗಿದೆ ಎಂದು ಅವರು ಹೇಳಿದ್ದಾರೆ.
ನಗರದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಘಟಕದ ವಿಭಾಗದಲ್ಲಿ ಕಳೆದ 25 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ನನ್ನಂತೆಯೇ ಅನೇಕ ಅಲ್ಪಸಂಖ್ಯಾತ ಮುಖಂಡರು ಸಹ ಪಕ್ಷ ನಿಷ್ಠೆಯೊಂದಿಗೆ ನಾಯಕರ ಸೂಚನೆಯ ಮೇರೆಗೆ ಪಕ್ಷ ಸಂಘಟನೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆ, ವಿಧಾನ ಸಭೆ, ಸಂಸತ್ ಚುನಾವಣೆಗಳಲ್ಲಿ ಹಗಲೂ ರಾತ್ರಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದೇವೆ. ಪಕ್ಷವೇ ನಮ್ಮ ಉಸಿರು. ಪಕ್ಷದ ನಾಯಕರೇ ನಮ್ಮ ಪ್ರಾಣ ಎಂಬ ಧ್ಯೇಯದೊಂದಿಗೆ ಮನೆ ಮನೆಗೂ ತೆರಳಿ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದೇವೆ. ನಮ್ಮಂತಹ ನಿಷ್ಠರನ್ನು ವ್ಯವಸ್ಥಿತವಾಗಿ ಕಡೆಗಣಿಸಲಾಗುತ್ತಿದೆ. ಇದು ನನ್ನ ಅಭಿಪ್ರಾಯವೊಂದೇ ಅಲ್ಲ. ನನ್ನಂತೆ ನೋವುಂಡ ಪಕ್ಷದ ಅಲ್ಪಸಂಖ್ಯಾತ ಘಟಕದ ಎಲ್ಲ ಕಾರ್ಯಕರ್ತರದ್ದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ನಾಯಕರ ನಡುವೆ ವಿವಾದಗಳು ನಡೆದು ನಮ್ಮನ್ನು ಮಂಕು ಮಾಡಿದೆ. ಪಕ್ಷದಲ್ಲಿನ ನಾಯಕರಲ್ಲಿ ಯಾವುದೂ ಸರಿಯಿಲ್ಲ ಎನ್ನುವ ಭಾವನೆ ಮೂಡುತ್ತಿದೆ. ದೇಶ ಮೊದಲು, ಪಕ್ಷ ನಂತರ, ಸ್ವಹಿತ ಕೊನೆಯದು ಎಂದು ಹೇಳಿದ್ದ ನಮ್ಮ ನಾಯಕರ ನಡೆ ನಮಗೆ ದುಃಖವನ್ನುಂಟು ಮಾಡುತ್ತಿದೆ. ಅತ್ತ ನಮ್ಮ ಪ್ರಧಾನಿಯವರು ದೇಶಕ್ಕಾಗಿ ದಿನದ 24ಗಂಟೆಯೂ ದುಡಿಯುತ್ತಿದ್ದಾರೆ. ಇತ್ತ ಯಡಿಯೂರ್ಪನವರೂ ಸಹ ಮುಖ್ಯಮಂತ್ರಿಗಳಾಗಿ ಕೊರೊನಾ ವೇಳೆ ಅಹರ್ನಿಶಿ ಶ್ರಮಿಸುತ್ತಿದ್ದಾರೆ. ರಾಜ್ಯದ ಜನತೆ ಹಿತವನ್ನು ಕಾಪಾಡಲು ಹೋರಾಟ ಮಾಡುತ್ತಿದ್ದಾರೆ. ಅವರ ಆದರ್ಶ ಪಕ್ಷದ ಮುಖಂಡರಲ್ಲಿ ಏಕೆ ಕ್ಷೀಣಿಸುತ್ತಿದೆ? ಇದರಿಂದ ಕಾರ್ಯಕರ್ತರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಎನ್ನುವ ಕಲ್ಪನೆ ನಾಯಕರಲ್ಲಿ ಬಾರದೇ ಇರುವುದು ನೋವಿನ ಸಂಗತಿಯಾಗಿದೆ ಎಂದೂ ಅವರು ಹೇಳಿದ್ದಾರೆ.