ಬೆಳಗಾವಿ

ಸೀಳು ತುಟಿ ಮಕ್ಕಳಿಗೆ ಪೌಷ್ಟಿಕ ಆಹಾರ ಜಾಗೃತಿ

ಸೀಳು ತುಟಿ ಮಕ್ಕಳಿಗೆ ಪೌಷ್ಟಿಕ ಆಹಾರ ಜಾಗೃತಿ

ಲೋಕದರ್ಶನ ವರದಿ 

           ಬೆಳಗಾವಿ 01 : 9ನೇ ರಾಷ್ಟ್ರೀಯ ಪೋಷಣ ಮಾಸಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಪ್ಲಾಸ್ಟಿಕ್ ಮತ್ತು ರಿಕನ್ಸ್ಟ್ರಕ್ಟಿವ್ ಶಸ್ತ್ರಚಿಕಿತ್ಸಾ ವಿಭಾಗ, ಕೆಎಲ್‌ಇ ಸ್ಮೈಲ್ ಟ್ರೇನ್ ಪ್ರಾಜೆಕ್ಟ್‌ ಹಾಗೂ ಕಾಹೆರದ ಸ್ಕೂಲ್ ಆಫ್ ಅಲೈಡ್ ಹೆಲ್ತ್‌ ಸೈನ್ಸಸ್ನ ಪೌಷ್ಟಿಕಾಂಶ ಮತ್ತು ಆಹಾರ ವಿಜ್ಞಾನ ವಿಭಾಗದ ಸಹಯೋಗದಲ್ಲಿ ಸೀಳು ತುಟಿ ಹೊಂದಿರುವ ಮಕ್ಕಳಿಗಾಗಿ ಪೌಷ್ಟಿಕ ಆಹಾರ ಜಾಗೃತಿ ಕಾರ್ಯಕ್ರಮವನ್ನು ಸೆ. 28ರಂದು ಆಯೋಜಿಸಲಾಗಿತ್ತು.

ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಕೆಎಲ್‌ಇ ಸ್ಮೈಲ್ ಟ್ರೇನ್ ಪ್ರಾಜೆಕ್ಟ್‌ ನಿರ್ದೇಶಕ ಡಾ. ರಾಜೇಶ ಪವಾರ ಸ್ವಾಗತಿಸಿ ಮಾತನಾಡಿ, ಸ್ಮೈಲ್ ಟ್ರೇನ್ ಸಹಯೋಗದಲ್ಲಿ 10 ಸಾವಿರಕ್ಕೂ ಅಧಿಕ ಸೀಳು ತುಟಿ ಮತ್ತು ಅಂಗಳದ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ತಿಳಿಸಿದರು.

ಸೀಳು ತುಟಿ ಹಾಗೂ ಅಂಗಳದ ಸಮಸ್ಯೆ ಹೊಂದಿರುವ ಮಕ್ಕಳನ್ನು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಧಿಕಾರಿಗಳು ಶೀಘ್ರವಾಗಿ ಗುರುತಿಸಿ ಸೂಕ್ತ ಚಿಕಿತ್ಸೆಗೆ ಕಳುಹಿಸುವುದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಕ್ಲಿನಿಕಲ್ ಸರ್ವಿಸಸ್ ನಿರ್ದೇಶಕ ಡಾ. ಮಾಧವ ಪ್ರಭು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಅವರು ಸೀಳು ತುಟಿ ಮಕ್ಕಳ ಪೋಷಕರನ್ನು ಅಭಿನಂದಿಸಿ, ಮಕ್ಕಳಿಗೆ ಸಮಗ್ರ ಆರೈಕೆ ಒದಗಿಸುತ್ತಿರುವ ವೈದ್ಯಕೀಯ ತಂಡದ ಕಾರ್ಯವನ್ನು ಶ್ಲಾಘಿಸಿದರು. ಪ್ಲಾಸ್ಟಿಕ್ ಮತ್ತು ರಿಕನ್ಸ್ಟ್ರಕ್ಟಿವ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ದರ್ಶನ್ ರಾಜಪೂತ ಅವರು ಉತ್ತಮ ಪೌಷ್ಟಿಕಾಂಶದ ಮಹತ್ವದ ಕುರಿತು ಮಾತನಾಡಿದರು.

ಪೌಷ್ಟಿಕಾಂಶ ಮತ್ತು ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಶುಕ್ರಾಣಿ ಶಿಂಧೆ ಹಾಗೂ ಮಕ್ಕಳ ಫಿಸಿಯೋಥೆರಪಿಸ್ಟ್‌ ಡಾ. ವಿನುತಾ ದೇಶಪಾಂಡೆ ಅವರು ಮಕ್ಕಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಸಮತೋಲಿತ ಆಹಾರ ಮತ್ತು ವ್ಯಾಯಾಮದ ಅಗತ್ಯವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಸೀಳು ತುಟಿ ಹೊಂದಿರುವ ಸುಮಾರು 70 ಮಕ್ಕಳು ಹಾಗೂ ಅವರ ಪೋಷಕರು ಭಾಗವಹಿಸಿದ್ದರು. 


ಸುದ್ದಿ ಓದಿ