ಮಹಲಿಂಗಪುರ

ಪಿಜ್ಜಾ, ಬರ್ಗರ್ ವರ್ಜಿಸಿ, ಪೋಷಕಾಂಶಯುಕ್ತ ದೇಶೀ ಆಹಾರ ಸೇವಿಸಿ: ತಿಪ್ಪಾ

ಪಿಜ್ಜಾ, ಬರ್ಗರ್ ವರ್ಜಿಸಿ, ಪೋಷಕಾಂಶಯುಕ್ತ ದೇಶೀ ಆಹಾರ ಸೇವಿಸಿ: ತಿಪ್ಪಾ

ಮಹಾಲಿಂಗಪುರ 16: ಆಧುನಿಕತೆಯನ್ನೇ ಫ್ಯಾಷನ್ ಮತ್ತು ಹೊಸ ಟ್ರೆಂಡ್ ಎಂದು ಭಾವಿಸಿ ಇಂದಿನ ಮಕ್ಕಳು ಮತ್ತು ಯುವ ಜನಾಂಗ ಪಿಜ್ಜಾ, ಬರ್ಗರ್ ನಂತಹ ಮಾರಕ ಜಂಕ್ ಫುಡ್‌ಗಳಿಗೆ ಮಾರು ಹೋಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ನಮ್ಮ ಶಾಲೆಯ ಮಕ್ಕಳು ನ್ಯೂಟ್ರಿಷನ್ ಡೇ ಮೂಲಕ ಪೋಷಕಾಂಶಯುಕ್ತ ಆಹಾರ ಪದಾರ್ಥಗಳ ಮಹತ್ವ ಸಾರುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಹೇಳಿದರು. 

ಸ್ಥಳೀಯ ಜೆಸಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನ್ಯೂಟ್ರಿಷನ್ ಡೇ ಕಾರ್ಯಕ್ರಮ ವೀಕ್ಷಿಸಿ ಅವರು ಹರ್ಷ ವ್ಯಕ್ತಪಡಿಸಿ ಮಾತನಾಡಿದರು. 

ಮಕ್ಕಳೇ ಮನೆಯಿಂದ ಸೇಬು, ಬಾಳೆ, ಪರಂಗಿ, ಸಪೋಟ, ದಾಳಿಂಬೆ ಮುಂತಾದ ಹಣ್ಣುಗಳ ಪ್ರೂಟ್ ಸಲಾಡ್, ಮಡಿಕೆ, ಕಡ್ಲಿ, ಬಟಾಣಿ, ಶೇಂಗಾ ಮುಂತಾದ ನೆನೆದ ಕಾಳುಗಳು, ರಾಗಿ ಮುದ್ದೆ, ರಾಗಿ ಉತ್ತಪ್ಪ, ಶೇಂಗಾ ಹೋಳಿಗೆ, ಸಜ್ಜಕದ ಹೋಳಿಗೆ, ಶೇಂಗಾ ಚಕ್ಕಿ ಮತ್ತು ಶೇಂಗಾ ಹಾಗೂ ಕೊಬ್ಬರಿ ಉಂಡಿ, ಸೌತೆ, ಮೂಲಂಗಿ, ಮೆಂತೆ, ಪಾಲಕ, ಗಜ್ಜರಿ ಮುಂತಾದ ತರಕಾರಿಗಳ ಸಲಡ್, ಗಜ್ಜರಿ ಹಲ್ವಾ, ನಾನಾ ತರದ ತರಕಾರಿ ಪಲಾವ್, ಸೌತೆ, ಲಿಂಬು, ಸಪೋಟ ಮುಂತಾದ ಹಣ್ಣುಗಳ ಪಾನೀಯ, ಬೇಯಿಸಿದ ತತ್ತಿ ಹೀಗೆ ನಮ್ಮ ಸನಾತನ ದೇಶೀ ಆಹಾರ ಪದ್ಧತಿಯನ್ನು ತಂದು ಪರಿಚಯಿಸಿದ್ದು ವಿಶೇಷವಾಗಿತ್ತು. 

ಶಾಲೆಯ 5 ರಿಂದ 7 ನೇ ತರಗತಿಯ 200 ಕ್ಕೂ ಅಧಿಕ ವಿದ್ಯಾರ್ಥಿಗಳು ಮನೆಯಿಂದಲೇ ತರಹೇವಾರಿ ಆಹಾರ ಪದಾರ್ಥಗಳನ್ನು ತಂದು ಪ್ರದರ್ಶನ ಮಾಡಿದ್ದಲ್ಲದೇ ಅವುಗಳಿಂದಾಗುವ ಉಪಯೋಗದ ಮತ್ತು ಅವುಗಳ ಬಳಕೆಯ ಅನಿವಾರ್ಯತೆಯನ್ನು ಮನದಟ್ಟು ಮಾಡುವಲ್ಲಿ ಯಶಸ್ವಿಯಾದರು. 

ಶಿಕ್ಷಕರಾದ ಶಮಾ ಗಲಗಲಿ, ಪ್ರೇಮಾ ಕರಜಗಿ, ರೂಪಾ ಜಾಡಗೌಡ, ಸುಧಾ ಕೊಂಗವಾಡ, ವೀಣಾ ಹಡಪದ, ಮುತ್ತು ಅಂಗಡಿ ಮಾರ್ಗದರ್ಶನ ಮಾಡಿ ನೇತೃತ್ವ ವಹಿಸಿದ್ದರು. 

ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಪತ್ರಕರ್ತ ಮಹೇಶ ಆರಿ, ಮುಖ್ಯೋಪಾಧ್ಯಾಯ ಎಸ್‌.ಜಿ.ಕೌಜಲಗಿ ಮುಂತಾದವರು ಮಕ್ಕಳ ಪ್ರತಿಭೆ ಕಂಡು ಭೇಷ್ ಎಂದರು, 


ಸುದ್ದಿ ಓದಿ