ಬಳ್ಳಾರಿ

ವಿವಿಧೆಡೆ ದಾಳಿ; ಐವರು ಬಾಲಕಾರ್ಮಿಕರ ರಕ್ಷಣೆ

ವಿವಿಧೆಡೆ ದಾಳಿ; ಐವರು ಬಾಲಕಾರ್ಮಿಕರ ರಕ್ಷಣೆ

ಬಳ್ಳಾರಿ 14: ನಗರದ ವಿವಿಧೆಡೆ ಅಕಸ್ಮಿಕ ದಾಳಿ ನಡೆಸಿ ಐವರು ಬಾಲಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾಧಿಕಾರಿ ಮೌನೇಶ್ ಅವರು ತಿಳಿಸಿದ್ದಾರೆ. 

ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಜಿಲ್ಲಾ ಬಾಲಕಾರ್ಮಿಕ ಯೋಜನೆ, ಕಾರ್ಮಿಕ ಇಲಾಖೆ,  ಪೋಲಿಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣ ಘಟಕ, ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರಡಿ ನೇಮಕವಾದ ನೀರೀಕ್ಷಕರ ಟಾಸ್ಕ್‌ ಪೋರ್ಸ್‌ ಸಮಿತಿ ಸಭೆ ನಡೆಸಿ ಆಕಸ್ಮಿಕ ದಾಳಿ ನಡೆಸಲಾಗುತ್ತಿದೆ. 

ಅದರಂತೆ, ಮಂಗಳವಾರದಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್‌.ಹೊಸಮನೆ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಟಾಸ್ಕ್‌ ಪೋರ್ಸ್‌ ಸಮಿತಿ ಸಭೆ ನಡೆಸಿ, ನಗರದ ಗುಗ್ಗರಹಟ್ಟಿ, ಮುಂಡ್ರಿಗಿ ಕೈಗಾರಿಕೆ ಪ್ರದೇಶದ ಕಾರ್ಖಾನೆ ಮತ್ತು ಕೆ.ಸಿ ರಸ್ತೆಯಲ್ಲಿನ ಗ್ಯಾರೇಜ್, ಮೆಕ್ಯಾನಿಕ್ ಶಾಪ್ ಇತ್ಯಾದಿ ಉದ್ದಿಮೆಗಳ ಮೇಲೆ ಆಕಸ್ಮಿಕ ದಾಳಿ ಮಾಡಿ ಒಟ್ಟು 05 ಬಾಲಕಾರ್ಮಿಕ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದ್ದು, ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. 

ಮಕ್ಕಳ ವ್ಯಾಸಂಗದ ಶಾಲೆಗಳಲ್ಲಿ ಅವರ ವಯಸ್ಸಿನ ದಾಖಲೆಗಳನ್ನು ಪಡೆದ ನಂತರ ಸಂಬಂಧಿಸಿದ ಮಾಲೀಕರ ವಿರುದ್ದ ಬಾಲಕಾರ್ಮಿಕ ನಿಷೇಧ ಕಾಯ್ದೆ 1986 ರ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.  

ಟಾಸ್ಕ್‌ಫೋರ್ಸ್‌ ಸಮಿತಿಯಲ್ಲಿ ತಹಶೀಲ್ದಾರ ಗುರುರಾಜ್, ಕಾರ್ಮಿಕ ಅಧಿಕಾರಿ  ಸಿದ್ದಪ್ಪ ಖೈನೂರ್, ಕಾರ್ಮಿಕ ನೀರೀಕ್ಷಕರಾದ ಪರಶುರಾಮ್, ರಮೇಶ್, ಹಿರಿಯ ಕಾರ್ಖಾನೆ ನೀರೀಕ್ಷಕ ವರುಣ್, ಶಿಕ್ಷಣ ಅಧಿಕಾರಿ ಮಂಜುನಾಥ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದಯಾನಂದ್, ಶಿಕ್ಷಣ ಇಲಾಖೆಯ ಮನ್ಸೂರ್ ಅಹಮದ್, ಎಸ್‌ಜೆಪಿಯು ಸಿಬ್ಬಂದಿ ಅನಂತಲಕ್ಷ್ಮೀ, ಬಸವ ಜ್ಯೋತಿ, ಸಮಾಜ ಕಲ್ಯಾಣ ಇಲಾಖೆಯ ಗಣೇಶ್, ಮಕ್ಕಳ ಸಹಾಯವಾಣಿ ಮತ್ತು ಚೈಲ್ಡ್‌ಲೈನ್ ಸಿಬ್ಬಂದಿಗಳಾದ ಚಂದ್ರಕಲಾ, ನಿಲೋಫಿಯಾ ಹಾಗೂ ಇತರರು ಹಾಜರಿದ್ದರು. 


ಸುದ್ದಿ ಓದಿ