ಮಹಲಿಂಗಪುರ

ಕಲಾವಿದರಿಗೆ ಸಹಾಯಹಸ್ತ ಕಾರ್ಯಕ್ರಮ

ಕಲಾವಿದರಿಗೆ ಸಹಾಯಹಸ್ತ ಕಾರ್ಯಕ್ರಮ

ಮಹಾಲಿಂಗಪುರ 21: ಎರಡು ವರ್ಷಗಳಿಂದ ಕೋವಿಡ್‌-19 ಮಹಾಮಾರಿಯು ಎಲ್ಲ ವರ್ಗ, ಸಮುದಾಯಗಳ ಜನರನ್ನೇಲ್ಲ ಕಾಡಿದ್ದು, ಇದಕ್ಕೆ ಕಲಾವಿದರೂ ಕೂಡ ಹೊರತಾಗಿಲ್ಲ ಎಂದು ಜಾನಪದ ಗಾರುಡಿಗ, ಚಲನಚಿತ್ರ ಹಾಸ್ಯ ಹಾಗೂ ಪೋಷಕ ನಟ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುರಾಜ ಹೊಸಕೋಟೆ ಹೇಳಿದರು. 

ನಗರದ ಬಸವ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಕಲಾವಿದರಿಗೆ ಸಹಾಯಹಸ್ತ ಕಾರ್ಯಕ್ರಮದಡಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 

ಮತ್ತೊಂದು ಕೆಲಸವನ್ನು ಅರಿಯದ ರಾಜ್ಯಾದ್ಯಂತ ಇರುವ ಈ ಮುಗ್ಧರು ಹಣಕಾಸಿನ ತೊಂದರೆಯನ್ನು ಅನುಭವಿಸುತ್ತ ಬಹಳ ತೊಂದರೆಯಲ್ಲಿದ್ದಾರೆ. ಅಲ್ಲೋ ಇಲ್ಲೋ ಒಂದಿಷ್ಟು ಜನ ಕಲಾವಿದರ ಸಹಾಯಕ್ಕೆ ಬರುತ್ತಿದ್ದಾರೆ. ರಾಜಕಾರಣಿ ಹಾಗೂ ಸಿ.ಎಂ ಹುರಕಡ್ಲಿ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷ ಚನಬಸು ಹುರಕಡ್ಲಿಯವರೂ ಸಹ ತಮ್ಮ ಮತದಾರರಿಗೆ ಮಾತ್ರ ಸಹಕಾರ ನೀಡಿರುವುದಲ್ಲದೆ ನಗರದ ಬಡ ಕಲಾವಿದರನ್ನೂ ಸೇರಿಸಿ ಆಹಾರ ಕಿಟ್ ಗಳನ್ನು ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. 

ಮಹಾಲಿಂಗಪುರದವರೇ ಆದ ಪುಟ್ಟಗೌರಿ ಧಾರಾವಾಹಿ ಮತ್ತು ಕಾಮಿಡಿ ಕಿಲಾಡಿ ಪ್ರಖ್ಯಾತಿಯ ದಾನಪ್ಪ ಮೂಡಲಗಿ ಮತ್ತು ಸಿಂಡಿಕೇಟ್ ಕಲಾವಿದ ಡಿ.ಕೆ ರಂಗನಾಥ ಮಾತನಾಡಿ ಕಷ್ಟ ಕಾಲದಲ್ಲಿ ಜನರಿಗೆ ಸಹಕರಿಸುವವರು ಬಹಳ ಕಡಿಮೆ. ಇಂತಹದರಲ್ಲಿ ಎಲ್ಲ ವರ್ಗದವರಲ್ಲಿ ಸಂಕಷ್ಟಕ್ಕೊಳಗಾದ ಜನರನ್ನು ಗುರುತಿಸಿ ಸಹಾಯ ಹಸ್ತ ನೀಡಿರುವ ಸಿ.ಎಂ ಫೌಂಡೇಶನ್ ಕಾರ್ಯ ಶ್ಲಾಘನೀಯವೆಂದರು. ಗಾಯಕ ಎಂ. ಡಿ ಆನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. 

ದಿನಸಿ ಸಾಮಗ್ರಿಗಳ ಕಿಟ್ಟ್‌, ಆಯುರ್ವೇದಿಕ ಕಷಾಯ ಪುಡಿ, ಸ್ಯಾನಿಟೈಸರ್, ಮಾಸ್ಕ್‌ ಹಾಗೂ ಕನ್ನೇರಿಮಠದ ಓಷಧಜಲ ಕಲಾವಿದರಿಗೆ ವಿತರಿಸಲಾಯಿತು. 

ಸಿ.ಎಂ ಫೌಂಡೇಶನ್ ಅಧ್ಯಕ್ಷ ಚನಬಸು ಹುರಕಡ್ಲಿ, ಬಸವರಾಜ್ ಗಿರಿಸಾಗರ, ಅರುಣಾ ಪಾಣಶೆಟ್ಟಿ ಅಲ್ಲದೆ ಕಲಾವಿದರಾದ ಪಂಡಿತ ಬಡಿಗೇರ, ಮೇಹಬೂಬ ಸನದಿ, ರೇಣುಕಾ ಹಲಸಪ್ಪಗೊಳ, ಗಣಪತಿ ಶಿಕ್ಕಲಗಾರ, ಮಹಾದೇವ ಕರಡಿ, ಲಕಪ್ಪ ಭಜಂತ್ರಿ, ಮಹಾದೇವ ಕೌಜಲಗಿ ಇನ್ನು ಮುಂತಾದವರು ಉಪಸ್ಥಿತರಿದ್ದರು. 

ಸುದ್ದಿ ಓದಿ