ಜವಾಬ್ದಾರಿಯುತ, ಸುವ್ಯವಸ್ಥಿತ, ಸಶಕ್ತ ಪತ್ರಿಕೋದ್ಯಮದ ಆಶಯದ ಲೇಖನಗಳು
ಪತ್ರಿಕೆಗಳು ಜನಾಂಗದ ಆತ್ಮಸಾಕ್ಷಿಯಂತೆ ಕಾರ್ಯನಿರ್ವಹಿಸುತ್ತ ನಾಡು ಕಟ್ಟುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಮಾಧ್ಯಮ ಲೋಕದಲ್ಲಿಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವೇಗ, ಸ್ಪರ್ಧೆ, ತಂತ್ರಜ್ಞಾನ ಗುಣಮಟ್ಟ, ವಿಷಯ ನಿರೂಪಣೆ ವೈವಿಧ್ಯತೆಗಳು ಕ್ಷಣ ಕ್ಷಣಕ್ಕೂ ತ್ವರಿತವಾಗುತ್ತಿವೆ. ಇದಕ್ಕನುಗುಣವಾಗಿ ಕನ್ನಡ ಪತ್ರಿಕೋದ್ಯಮವು ಬೆಳೆಯುತ್ತಿರುವದು ಸಂತೋಷದ ಸಂಗತಿ. ಕನ್ನಡ ಪತ್ರಿಕೋದ್ಯಮದ ವಿಸ್ತಾರತೆ ಹಾಗೂ ವೈವಿಧ್ಯತೆ ಇಡೀ ಪತ್ರಿಕಾ ಬಳಗ ಹಾಗೂ ಮಾಧ್ಯಮ ಮಿತ್ರರೆಲ್ಲರ ಅವಿರತ ಪರಿಶ್ರಮದಿಂದ ಸಾಧ್ಯವಾಗಿದೆ.
ಕನ್ನಡ ಪತ್ರಿಕೋದ್ಯಮವು ಯಾವುದೇ ಇತರ ಭಾಷೆಗೆ ಕಡಿಮೆ ಇಲ್ಲದಂತೆ ಬೆಳೆದು ದೈತ್ಯವಾಗಿ ಬೆಳೆಯುತ್ತಿದೆ. ಪ್ರಸ್ತುತ ದಿನಮಾನಗಳಲ್ಲಿಯೂ ಕೂಡ ಹಲವಾರು ವರದಿಗಾರರು ಯಾವುದೇಪತ್ರಿಕೋದ್ಯಮದ ಕೋರ್ಸುಗಳ ಹಿನ್ನೆಲೆ ಇಲ್ಲದೆ ಅನುಭವದ ಮೂಲಕ ನುರಿತ ವರದಿಗಾರರಾಗುತ್ತಿದ್ದಾರೆ. ಆದರೆ ಪತ್ರಿಕೋದ್ಯಮದ ಸಾಹಿತ್ಯದ ಅಧ್ಯಯನದಿಂದ ವೃತ್ತಿಯ ಕೌಶಲ್ಯತೆ ಹಾಗೂ ಪರಿಪೂರ್ಣತೆಯನ್ನು ಸಾಧಿಸಬಹುದು, ಈ ನಿಟ್ಟಿನಲ್ಲಿ ಮೂಲತಃ ಪತ್ರಕರ್ತರಾಗಿರುವ ಶ್ರೀ ಗೋನಾಳ ರವರು ತಮ್ಮ ವೃತ್ತಿ ಜೀವನದ ಅನುಭವಗಳೊಂದಿಗೆ ಪತ್ರಿಕೋದ್ಯಮದಲ್ಲಾಗುತ್ತಿರುವ ಇತ್ತೀಚಿನ ಬದಲಾವಣೆಗಳನ್ನು ಒಟ್ಟುಗೂಡಿಸಿ ಹಾಗೂ ಭವಿಷ್ಯದಲ್ಲಿ ಪತ್ರಿಕೋದ್ಯಮಕ್ಕೆ ಎದುರಾಗಬಹುದಾದ ಸವಾಲುಗಳನ್ನು ವಿಶ್ಲೇಷಿಸಿ ಸವಾಲುಗಳ ಸರಮಾಲೆಯಲ್ಲಿ ಪತ್ರಿಕೋದ್ಯಮ ವೆಂಬ ಕೃತಿಯನ್ನು ರಚಿಸಿದ್ದಾರೆ. ಕೃತಿಯಲ್ಲಿ ಒಟ್ಟು 26 ಪತ್ರಿಕೋದ್ಯಮದ ಸಮಸ್ಯೆಗಳು ಜವಾಬ್ದಾರಿಗಳು, ಕಷ್ಟಗಳು ,ಸವಾಲುಗಳೆಂಬ ನಾಲ್ಕು ಪ್ರಮುಖ ಸಂಗತಿಗಳನ್ನು ಚರ್ಚಿಸಿದ್ದಾರೆ.
ಪ್ರಾರಂಭದ ಲೇಖನದಲ್ಲಿ ಪತ್ರಿಕೆ ನಡೆದು ಬಂದ ದಾರಿ ಯಿಂದ ಪ್ರಾರಂಭವಾಗಿ ಮಾಧ್ಯಮದ ವಿವಿಧ ಸಂಗತಿಗಳನ್ನು ಚರ್ಚಿಸುತ್ತಾ ಅಂತಿಮವಾಗಿ, ಸಮಾಜದ ಸ್ವಾಸ್ಥ್ಯಕ್ಕೆ ಪತ್ರಕರ್ತರ ಅವಶ್ಯಕತೆಯನ್ನು ಪ್ರತಿಪಾದಿಸಿ ಮುಕ್ತಾಯಗೊಳಿಸುತ್ತಾರೆ. ಪತ್ರಿಕೆ ಮನುಜರ ಅಪರೂಪದ ಆವಿಷ್ಕಾರಗಳಲ್ಲಿ ಒಂದಾಗಿದೆ, ಮೂಲತಃ ಪತ್ರಕರ್ತರಾಗಿರುವ ಗೋನಾಳ ರವರು ಪತ್ರಿಕೆಯ ಇತಿಹಾಸವನ್ನು ನೆನಪಿಸುತ್ತಲೇ ಕನ್ನಡದ ಪ್ರಥಮ ಪತ್ರಿಕೆ ಮಂಗಳೂರು ಸಮಾಚಾರ ಪ್ರವರ್ತಕರಾದ ಹರ್ಮನ್ ಮೋಗ್ಲಿಂಗರವರ ಯಶೋಗಾಥೆಯನ್ನು ಸ್ಪೂರ್ತಿದಾಯಕವಾಗಿ ವಿವರಿಸಿದ್ದಾರೆ.
ಲೇಖನಗಳ ಪ್ರಾರಂಭದಲ್ಲಿ ಮಾಧ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮಾಧ್ಯಮದ ಮೇಲಿನ ದಬ್ಬಾಳಿಕೆ ನಕಲಿ ಪತ್ರಕರ್ತರು ಠಿಡಿ ಪದದ ದುರ್ಬಳಕೆ, ಮಾಹಿತಿ ಹಕ್ಕಿನ ದುರುಪಯೋಗಗಳಂತಹ ವಿವಿಧ ಲೇಖನಗಳಲ್ಲಿ ಪತ್ರಿಕೋದ್ಯಮ ವಿಸ್ತಾರವಾಗಿ ಲಾಭ ಹೆಚ್ಚಿದಂತೆ ನಿಧಾನವಾಗಿ ಪತ್ರಿಕೋದ್ಯಮವನ್ನು ದುರುಪಯೋಗದ ಸಾಧ್ಯತೆಗಳು ಹೆಚ್ಚಾಗಿ ಪತ್ರಿಕೋದ್ಯಮಕ್ಕೆ ಕಪ್ಪು ಚುಕ್ಕೆಯಾಗುತ್ತಿವೆ. ಇಂತಹ ಸಮಸ್ಯೆಗೆ ಉದ್ಯಮದ ಹಿರಿಯರು ಪ್ರಾರಂಭದಲ್ಲಿಯೇ ನಿಯಂತ್ರಿಸಬೇಕು ಎನ್ನುವುದು ಲೇಖಕರ ಅಭಿಪ್ರಾಯವಾಗಿದೆ. ಪತ್ರಿಕೋದ್ಯಮದ ಸವಾಲುಗಳ ಕಡೆಗೆ ಪಕ್ಷಿ ನೋಟವನ್ನು ಲೇಖಕರು ಪತ್ರಕರ್ತರ ಸವಾಲುಗಳು ಭ್ರಷ್ಟಾಚಾರ ಮುಕ್ತ ಪತ್ರಿಕೋದ್ಯಮ ಸಾಧ್ಯವೇ ಸಂಪಾದಕರ ಸವಾಲುಗಳು ತತ್ವ ನಿಷ್ಠ ಪತ್ರಕರ್ತರ ಸವಾಲುಗಳು, ಈ ಲೇಖನಗಳಲ್ಲಿ ಮೊಬೈಲ್ ಕ್ರಾಂತಿ, ಮುದ್ರಣ ವೆಚ್ಚದಲ್ಲಿನ ಏರಿಕೆ, ಸಣ್ಣ ಪತ್ರಿಕೆಗಳ ಸಂಕಷ್ಟಗಳು, ಟಿವಿ ಚಾನಲ್ಗಳ ಪ್ರಭಾವ, ತಂತ್ರಜ್ಞಾನದ ಪ್ರಗತಿ, ಜಾಹೀರಾತಿನಲ್ಲಿ ತಾರತಮ್ಯತೆ, ತತ್ವ ನಿಷ್ಠ ಪತ್ರಕರ್ತರ ಅನುಭವಿಸುತ್ತಿರುವ ಸಂಕಷ್ಟಗಳನ್ನು ವಿವರಿಸುತ್ತಾ ಸವಾಲುಗಳ ಸುನಾಮಿಯಲ್ಲಿಯೂ ಕೂಡ ಪತ್ರಿಕೋದ್ಯಮವು ವೃತ್ತಿಯ ಘನತೆ, ಪಾವಿತ್ರತೆ, ಪ್ರಾವಿಣ್ಯತೆಯನ್ನು ಕಾಪಾಡಿಕೊಂಡರೆ ಮಾತ್ರ ಜನಸಾಮಾನ್ಯರ ನಿಜ ಧ್ವನಿಯಾಗಬಲ್ಲದು ಎನ್ನುವುದನ್ನು ಹಲವಾರು ಪತ್ರಕರ್ತರ, ಪತ್ರಿಕೆಗಳ ಉದಾಹರಣೆಯೊಂದಿಗೆ ವಿವರಿಸುತ್ತಾರೆ.
ಲೇಖನಗಳ ಮುಂದುವರಿದ ಭಾಗದಲ್ಲಿ ಬದಲಾಗುವ ಕಾಲ ಧರ್ಮದಲ್ಲಿಗೆ ತಕ್ಕಂತೆ ಮಾಧ್ಯಮದ ಜವಾಬ್ದಾರಿಗಳಾದ ಪ್ರಜಾಪ್ರಭುತ್ವದ ಮೆರಗು, ಅನ್ಯಾಯ ವಿರುದ್ಧದ ಧ್ವನಿ, ಸಾಮಾಜಿಕ ಜಾಗೃತಿ, ದೂರ ದೃಷ್ಟಿಕೋನ, ಸತ್ಯದ ಸಂಕಲ್ಪಗಳು, ನೈಜ ಪ್ರಭುತ್ವದ ತಳಹದಿ, ಸ್ವಾಸ್ಥ ಸಮಾಜದ ನಿರ್ಮಾಣದ ಲೇಖನಗಳಲ್ಲಿ ಪತ್ರಕರ್ತರ ನೈಜ ಜವಾಬ್ದಾರಿಗಳ ಬಗೆಗಿನ ಲೇಖನಗಳಲ್ಲಿ ಸಮಸ್ಯೆ ಸವಾಲುಗಳು, ಸಂಕಷ್ಟಗಳು ಹೆಚ್ಚಾದರೂ ಕೂಡ ಜವಬ್ದಾರಿಗಳಿಂದ ವಿಮುಖರಾಗಬಾರದು ಎನ್ನುವ ಧೋರಣೆಯೊಂದಿಗೆ ಮಾಧ್ಯಮರಂಗ ವಿಸ್ತರಣೆಯಾಗುತ್ತಿದ್ದಂತೆ ವಾಣಿಜ್ಯೀಕರಣಗೊಂಡು, ಬೆಳೆಯೊಂದಿಗೆ ಕಳೆ ಸೇರುತ್ತಿರುವುದು ವಿಷಾದಕರ ಸಂಗತಿ ಇಂತಹ ಸಂಕ್ರಮಣದಲ್ಲಿ ಮೂಲ ಜವಾಬ್ದಾರಿಗಳಿಗೆ ಬದ್ದರಾಗಿದ್ದುಕೊಂಡು ಪ್ರಜಾಪ್ರಭುತ್ವದ ಮೂಲ ಆಶಯ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಉನ್ನತೀಕರಿಸುವ ಕಾಳಜಿಗಳನ್ನು ವಿವರಿಸುತ್ತಾರೆ. ರಾಜ್ಯ ರಾಷ್ಟ್ರಮಟ್ಟದ ಪತ್ರಿಕೆಗಳ ಜೊತೆಯಲ್ಲಿ ಚಿಕ್ಕ ಚೋಕ್ಕ, ಪಕ್ಕಾ ಸ್ಥಳೀಯ ಪತ್ರಿಕೋದ್ಯಮ ಜನರ ಜೀವ ದ್ವನಿಯಾಗಬಲ್ಲದು. ಎಲೆಮರೆಯ ಕಾಯಿಯಾಗಿ ಕಾರ್ಯನಿರ್ವಹಿಸುವ, ವಿಶೇಷವಾಗಿ ಗ್ರಾಮೀಣ ಪತ್ರಕರ್ತರ ಪಾಡಂತೂ ಕೇಳುವವರಿಲ್ಲ. ಕನಿಷ್ಠ ಸೌಲಭ್ಯವಿರದ ಸ್ಥಳಗಳಲ್ಲಿದ್ದುಕೊಂಡು ನಿರಂತರವಾಗಿ ಸುದ್ದಿಯನ್ನ ಪತ್ರಿಕೆಗಳಿಗೆ ನಿಷ್ಠೆಯಿಂದ ಸಾಗಿಸುವ ಪತ್ರಕರ್ತರಿಗೆ ಸಿಗುವುದು ಕನಿಷ್ಠ ಸಂಬಳ, ಕನಿಷ್ಠ ಗೌರವ, ಇಂಥಹ ವಿಚಾರಗಳನ್ನು ಮುಂದಿನ ಲೇಖನಗಳಲ್ಲಿ ಪ್ರಸ್ತಾಪಿಸುತ್ತಾ ಆರ್ಥಿಕ ಭದ್ರತೆ ಇಲ್ಲದ ಪತ್ರಕರ್ತ, ಪತ್ರಿಕೋದ್ಯಮದ ತೊಳಲಾಟಗಳು, ತತ್ವನಿಷ್ಠ ಪತ್ರಕರ್ತರ ಕಷ್ಟಗಳನ್ನು ವಿವರಿಸುತ್ತಾ ಪರಿಹಾರಾತ್ಮಕವಾಗಿ ಸರಕಾರದಿಂದ ಇನ್ನೂ ಹೆಚ್ಚಿನ ಆರೋಗ್ಯ ಆರ್ಥಿಕ ಸವಲತ್ತುಗಳು ವಿಸ್ತಾರವಾಗಬೇಕೆಂಬುದು, ಹೆಚ್ಚುತ್ತಿರುವ ಜೀವನದ ವೆಚ್ಚದಲ್ಲಿ ಪತ್ರಕರ್ತರ ಆರ್ಥಿಕ ಅಭದ್ರತೆ, ಪತ್ರಿಕೋದ್ಯಮದ ಬೆಳವಣಿಗೆಗೆ ಸಮಸ್ಯೆಯಾಗುತ್ತಿರುವ ವಿಷಯವನ್ನು ಪ್ರತಿಪಾದಿಸುತ್ತಾರೆ.
ಉಳಿದ ಲೇಖನಗಳೊಂದಿಗೆ ಪತ್ರಕರ್ತರಾಗಲು ಅಗತ್ಯವಾದ ಮಾನದಂಡಗಳ ಬಗ್ಗೆ ವಿವಿಧ ಗಣ್ಯ ಪತ್ರಕರ್ತರ ಉದಾರಣೆಯೊಂದಿಗೆ ವಿವರಿಸುತ್ತಾ, ವೃತ್ತಿಯ ಘನತೆ, ಪಾವಿತ್ರತೆ, ಪ್ರಾವೀಣ್ಯತೆ ಹಾಗೂ ಇತರ ವಿಷಯಗಳ ಬಗ್ಗೆ ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶನಗೈವ ಲೇಖನಗಳಿವೆ.
ಸಾಮಾನ್ಯವಾಗಿ ಮಾಧ್ಯಮದವರು ಬರೆಯುವುದು ಅಪರೂಪ, ಆದರೆ ಗೋನಾಳರವರು ಮೂಲತಃ ಪತ್ರಕರ್ತರು. ಪದಗಳ ರಾಶಿ ಸುರಿಯುವ, ವಿಷಯದ ಬಹುಮುಖತೆಯನ್ನು ಸ್ಪರ್ಶಿಸುವ, ಬರವಣಿಗೆಯ ನಿರಂತರತೆ ಕಾಪಾಡುವ ಶಕ್ತಿಯನ್ನು ಸಿದ್ಧಿಸಿಕೊಳ್ಳುತ್ತಾ ಅವುಗಳೊಂದಿಗೆ ಅಧ್ಯಯನದ ವೈಶಾಲ್ಯತೆ, ಸೂಕ್ಷ್ಮ ಅವಲೋಕನದ ದೃಷ್ಟಿಕೋನ, ಜೀವನದ ವೈವಿಧ್ಯಮಯ ಅನುಭವದಿಂದಾಗಿ ಲೇಖನಗಳ ಶ್ರೀಮಂತಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಗೋನಾಳರವರ ನಿರಂತರ ಬರವಣಿಗೆ, ಪತ್ರಿಕೆ, ಮಾಧ್ಯಮ ಸಂಘಟನೆ, ಸಾಂಸ್ಕೃತಿಕ ಉತ್ಸವಗಳ ಆಯೋಜನೆಗಳೊಂದಿಗೆ ಗೆಳೆಯರ ಬಳಗದ ಸ್ನೇಹಜೀವಿಯಾಗಿದ್ದಾರೆ. ಇಲ್ಲಿಯವರೆಗೆ ಗೋನಾಳರವರು 14 ಸ್ವರಚಿತ ಕೃತಿಗಳು, 4 ಸಂಪಾದಿತ ಕೃತಿಗಳು, 3 ಅಭಿನಂದನಾ ಕೃತಿಗಳೊಂದಿಗೆ ವಿವಿಧ ಜಿಲ್ಲಾ ರಾಜ್ಯ ರಾಷ್ಟ್ರಮಟ್ಟದ ಸಂಘ-ಸಂಸ್ಥೆಗಳ ಹುದ್ದೆಗಳ ಗೌರವ, ರಾಜ್ಯ ಜಿಲ್ಲಾಮಟ್ಟದ ಒಟ್ಟು 32 ಪ್ರಶಸ್ತಿಗಳೊಂದಿಗೆ ನೂರಾರು ಸನ್ಮಾನಗಳನ್ನು ಪಡೆದಿದ್ದಾರೆ.
ಲೇಖನಗಳು ಸಂದರ್ಭೋಚಿತವಾಗಿದ್ದು, ಹಿತ-ಮಿತವಾಗಿದ್ದು, ಅನುಭವ ಅಧ್ಯಯನಗಳ ಹದವರಿತ ಮಿಶ್ರಣವಾಗಿವೆ. ಓದಿನ ನಿರಂತರತೆ ಅಧ್ಯಯನದ ವೈಶಾಲ್ಯತೆ, ಸರಳ ನಿರೂಪಣೆಯ ಶೈಲಿ, ಅವಲೋಕನದ ವೈವಿಧ್ಯತೆ, ಶಬ್ದಾಡಂಬರಗಳಿಲ್ಲದೆ ಸಾಮಾನ್ಯ ಓದುಗನೂ ಕೂಡ ಅರ್ಥೈಸಿಕೊಳ್ಳಬಲ್ಲ ವಿಷಯ ನಿರೂಪಣೆ ಲೇಖನಗಳಲ್ಲಿದೆ. ಸಮಾಜವನ್ನು ವಿಶ್ಲೇಷಿಸುವ ಮಾಧ್ಯಮ ಕ್ಷೇತ್ರದವರ ಒಳ ಹೊರಗುಗಳಲಾಗುತ್ತಿರುವ ಬದಲಾವಣೆಗಳನ್ನು ಅವಲೋಕಿಸುವ, ವಿಶ್ಲೇಷಣೆಯ ಪ್ರಯತ್ನ ಲೇಖನಗಳಿಲ್ಲಿದೆ. ಪತ್ರಿಕೋದ್ಯಮವಿಂದು ಕ್ಷಣ ಕ್ಷಣಕ್ಕೂ ತನ್ನ ಆಳ ಅಗಲವನ್ನು ವಿಸ್ತಾರಗೊಳಿಸುತ್ತಿರುವ ಆಯಾಮಗಳ ಕುರಿತು ಬರೆಯುವುದು ಒಂದು ಸವಾಲೇ ಸರಿ. ಪತ್ರಿಕೋದ್ಯಮದ ವಿಷಯಗಳನ್ನು ಚರ್ಚಿಸುವಾಗ ಕೆಲವೊಂದು ಪುನರಾವರ್ತನೆಯಾಗಿವೆ. ಆದರೆ ಪತ್ರಿಕೋದ್ಯಮವನ್ನು ಪ್ರಾರಂಭಿಸಬೇಕೆನ್ನುವ ಯುವ ಪತ್ರಿಕೋದ್ಯಮಿಗಳಿಗೆ ಅಗತ್ಯವಾದ ಪ್ರಾಥಮಿಕ ಮಾಹಿತಿ ಕೃತಿಯಲ್ಲಿದೆ.
ಪ್ರಜಾವಾಣಿಯ ಹಿರಿಯ ಪತ್ರಕರ್ತರಾಗಿರುವ ಶ್ರೀ ಸಿದ್ದನಗೌಡ ಬೆನ್ನುಡಿಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದಂತೆ ಪತ್ರಕರ್ತ, ಪತ್ರಿಕೆ, ಪತ್ರಿಕೋದ್ಯಮ ಕವಲುದಾರಿಯಲ್ಲಿದೆ ಎಂದು ಗೊಣಗುತ್ತ ಸಿನಿಕತನದಲ್ಲಿರದೆ ಪರಿಹಾರ ಸೂಚಕ ವಿಚಾರಗಳ ಪ್ರಸ್ತಾಪ ಲೇಖನಗಳಲ್ಲಿದೆ. ಸ್ಪರ್ಧಾ ಸ್ಪೂರ್ತಿಯ ಹಿರಿಯ ಪತ್ರಕರ್ತ ಶ್ರೀ ವಸ್ತ್ರದ ವಿವರಿಸಿದಂತೆ ಲೇಖನಗಳು ಅರೆ ಬರೆ, ಭ್ರಷ್ಟ ಬೇಜವಾಬ್ದಾರಿ ಪತ್ರಕರ್ತರಿಗೆ ಛಾಟಿ ಏಟಿನಂತಿದ್ದರೆ, ಹೊಸಬರಿಗೆ ದಾರಿ ದೀಪದಂತಿವೆ. ಗದಗಿನ ಹಿರಿಯ ಚಿಂತಕ, ಲೇಖಕ, ಕೃತಿಕಾರ ಶ್ರೀಯುತ ರಾಜೇಂದ್ರ ಗಡಾದರವರು ಹೇಳಿದಂತೆ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಲ್ಲ, ಪತ್ರಿಕೋದ್ಯಮದ ಸ್ವವಿಶ್ಲೇಷಣೆ ಹಾಗೂ ಸ್ವವಿಮರ್ಶೆಯ ಲೇಖನಗಳ ಸಂಗ್ರಹವಾಗಿದೆ. ಒಟ್ಟಾರೆ ಲೇಖನಗಳು ಪತ್ರಿಕೋದ್ಯಮದ ವಿವಿಧ ಆಯಾಮಗಳಿಗೆ ಸ್ಪರ್ಶಿಸುವ ಪ್ರಯತ್ನದಲ್ಲಿ ಸಂದರ್ಭೋಚಿತ ಗಣ್ಯರ ಉಕ್ತಿ, ಉದಾಹರಣೆಯೊಂದಿಗೆ ವಿವರಿಸುತ್ತಾ, ಹಿರಿಯ ಪತ್ರಕರ್ತರ ತ್ಯಾಗ ಆದರ್ಶಗಳನ್ನು ಸ್ಮರಿಸುತ್ತಾ, ಪತ್ರಿಕೆಯ ನೀತಿ ಸಂಹಿತೆಗಳನ್ನು ಪ್ರಸ್ತಾಪಿಸುತ್ತಾ, ಕ್ಷೇತ್ರದ ಸಮಸ್ಯೆಗಳ ಕಾರಣಗಳನ್ನು ವಿವರಿಸುತ್ತ, ಸಕಾರಾತ್ಮಕ ಪರಿಹಾರಗಳನ್ನು ಸೂಚಿಸಿರುವುದು ಲೇಖನಗಳ ವೈಶಿಷ್ಟವಾಗಿದೆ.
ಜೆ.ಎಂ.ಬ್ರೋಟ್ಸ್ ರವರ ಪ್ರಕಾರ ಮನುಜನ ಅಚ್ಚರಿಯ ಸಂಶೋಧನೆಗಳಲ್ಲಿ ಪತ್ರಿಕೆ ಒಂದಾಗಿದೆ. ಪತ್ರಿಕೆಯ ವಿಸ್ತಾರ ಹೆಚ್ಚಿದಂತೆ ಇನ್ನೂ ಹೆಚ್ಚಿನ ಅಚ್ಚರಿಗಳನ್ನ ಸೃಷ್ಟಿಸಬಲ್ಲದು. ನ್ಯೂಯಾರ್ಕ್ ಟೈಮ್ಸಿನ ಹೇಳಿಕೆಯಂತೆ ಸದಾ ಚೈತನ್ಯಶೀಲತೆ, ಪತ್ರಿಕೋದ್ಯಮದ ಹೆಗ್ಗುರುತು, ಸಮಾಜದ ಚೈತನ್ಯಶೀಲತೆಗೆ ಪತ್ರಿಕೆಗಳೇ ಜೀವ ತಂತುಗಳಿದ್ದಂತೆ. ಅಂತಹ ಪತ್ರಿಕೋದ್ಯಮಕ್ಕೆ ಸವಾಲುಗಳೇನು ಹೊಸದಲ್ಲ, ಸವಾಲುಗಳಿಗೆ ಮುಕ್ತಾಯವೆಂಬುವುದಿಲ್ಲ. ಕ್ಷಣ ಕ್ಷಣದ ಸವಾಲುಗಳ ಮಧ್ಯದಲ್ಲಿಯೇ ಸಾಧನೆಗೈದು, ಹೊಸ ಹೊಸ ಸವಾಲುಗಳಿಗೆ ಸಿದ್ಧವಾಗುತ್ತಿರುವ ಪತ್ರಿಕೋದ್ಯಮ ಇನ್ನಷ್ಟು ಬಲಿಷ್ಠವಾಗಿ ಹೆಚ್ಚು ಜವಾಬ್ದಾರಿಯುತವಾಗಿ, ಒಂದು ಸಮೃದ್ಧ ಸುವ್ಯವಸ್ಥಿತ ಪತ್ರಿಕೋದ್ಯಮ ವಿಸ್ತಾರವಾಗಲಿ ಎನ್ನುವದೇ ಕೃತಿಯ ಒಟ್ಟಾರೆ ಆಶಯವಾಗಿದೆ.
- ಪ್ರೊ. ಶರಣಬಸಪ್ಪ ಬಿಳಿಎಲೆ
ಕೊಪ್ಪಳ
ಸೆಲ್ : 9945467221
- * * * -