ಬೆಳಗಲಿ ಪಟ್ಟಣ ಪಂಚಾಯಿತಿಗೆ ಪ್ರದೇಶಗಳು ಕಾನೂನುರೀತ್ಯವಾಗಿಯೇ ಸೇರ್ಪಡೆ
ಮಹಾಲಿಂಗಪುರ 30: ನಗರದ ಜನತೆಗೆ ಧಾರ್ಮಿಕ ಹಾಗೂ ಮಾನಸಿಕವಾಗಿ ತೊಂದರೆ ನೀಡಬೇಕೆಂಬ ಉದ್ದೇಶ ನಮ್ಮದಲ್ಲ, ಇತ್ತೀಚಿಗೆ ಬೆಳಗಲಿ ಪಟ್ಟಣ ಪಂಚಾಯಿತಿಗೆ ಪ್ರದೇಶಗಳು ಕಾನೂನುರೀತ್ಯವಾಗಿಯೇ ಸೇರೆ್ಡಯಾಗಿವೆ. ಪ್ರಜ್ಞಾವಂತರಾದವರು ದಾಖಲೆಗಳನ್ನು ಪರೀಶೀಲಿಸಿ ಮಾತನಾಡಲಿ ಎಂದು ಬೆಳಗಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸಿದ್ದುಗೌಡ ಪಾಟೀಲ್ ಮಹಾಲಿಂಗಪುರ ನಗರದ ಕೆಲ ನಾಯಕರು ನೀಡಿರುವ ಇತ್ತೀಚಿನ ಹೇಳಿಕೆಗೆ ತಿರುಗೇಟು ನೀಡಿದರು.
ಜೂನ್ 30ರಂದು ಬುಧವಾರ ಪಟ್ಟಣ ಪಂಚಾಯತ್ ಸಮುದಾಯಭವನದಲ್ಲಿ, ವಾರ್ಡ್ ನಂಬರ್ 6 ಮತ್ತು7 ಸರ್ವೇ ನಂಬರ್ ಗಳ ಪ್ರತಿಶತ 75ರಷ್ಟು ಪ್ರದೇಶಗಳು, ಇತ್ತೀಚೆಗೆ ಬೆಳಗಲಿ ಪಟ್ಟಣಕ್ಕೆ ಸೇರಿರುವ ವಿಷಯದಲ್ಲಿ, ಬಿಜೆಪಿಯ ಹಿರಿಯ ನಾಯಕರ ವಿರುದ್ಧ ಮಹಾಲಿಂಗಪುರದ ಕೆಲ ರಾಜಕೀಯ ನಾಯಕರು, ವಿನಾಕಾರಣ ಆಪಾದನೆ ಮಾಡಿರುವುದನ್ನು ಖಂಡಿಸುವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು. ಇವೊತ್ತಿಗೂ ನಾವು ಭಾವನಾತ್ಮಕವಾಗಿ ಮಹಾಲಿಂಗಪುರದ ಜನತೆ ಜೊತೆಗಿದ್ದೇವೆ. ಇದಕ್ಕೆ ಯಾವುದೇ ಧಾರ್ಮಿಕ ಬಣ್ಣ ಬಳಿಯಲು ಹೋಗಬೇಡಿ. ಈ ವಿಷಯದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ತೇರದಾಳ ಶಾಸಕ ಸಿದ್ದು ಸವದಿಯವರ ಯಾವುದೇ ಹಸ್ತಕ್ಷೇಪವಿಲ್ಲ, ವಿನಾಕಾರಣ ಅವರ ಹೆಸರಿಗೆ ಕಳಂಕ ತರಬೇಡಿ ಹಾಗೂ ಎರಡೂ ಪಟ್ಟಣಗಳ ಜನತೆಯ ಮಧುರ ಸಮ್ಮಂಧ ಹಾಳು ಮಾಡಬೇಡಿ ಎಂದರು.
ಏಬಿಜೆಪಿ ಧುರೀಣ ಪಂಡಿತ ಪೂಜಾರಿ ಹಾಗೂ ಶಿವನಗೌಡ ಪಾಟೀಲ ಮಾತನಾಡಿ, ಸನ್1995ರ ಆಚೆಯೂ ಕೆಲ ಸರ್ವೆ ನಂಬರ್ ಗಳ ಕಂದಾಯ ಭೂಭಾಗ ಹಾಗೂ ಪವಿತ್ರ ಲಿಂಗಮುದ್ರೆ, ಅಗಸಿ ಬಾಗಿಲು, ಮಲ್ಲಯ್ಯನ ಗುಡಿ ಬೆಳಗಲಿ ಪಟ್ಟಣಕ್ಕೆಯೇ ಸೇರಿರುವ ದಾಖಲೆಗಳಿದ್ದು, ವಿವಾದಕ್ಕೆ ಎಡೆ ಮಾಡುತ್ತಿರುವ ಜನ ಇದನ್ನು ಕೂಲಂಕುಶವಾಗಿ ಪರೀಶೀಲಿಸಿ ತಮ್ಮ ಗೊಂದಲ ನಿವಾರಿಸಿಕೊಳ್ಳಲಿ ಎಂದರು.
1995ರಲ್ಲಿ ಮಹಾಲಿಂಗಪುರ ಪುರಸಭೆ ನಗರ ಸಭೆಯಾಗಿ ಮೇಲ್ದರ್ಜೆಗೇರಲು ಬೆಳಗಲಿ ಗ್ರಾಮಪಂಚಾಯಿತಿ ವತಿಯಿಂದಲೂ ಸಹಕರಿಸಲು ಕೋರಿದ್ದೇವು, ಆದರೆ ಅಂದಿನ ಪುರಸಭೆ ನಮ್ಮ ಆಹ್ವಾನವನ್ನು ತಿರಸ್ಕರಿಸಿತ್ತು. ಆದರೆ ಈಗಲೂ ಕೂಡ ತಾಲೂಕು ಸಹಿತವಾಗಿ ರಚನೆಯಾಗಲು ರನ್ನ ಬೆಳಗಲಿಯ ನಾಗರೀಕರು ಸಂಪೂರ್ಣ ಸಹಕಾರ ನೀಡುತ್ತಾರೆ ಇದರಲ್ಲಿ ಯಾವುದೇ ಸಂಶಯವಿಲ್ಲ ತಮ್ಮ ಸ್ಪಷ್ಟಿಕರಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಧುರೀಣರಾದ ಚಿಕ್ಕಪ್ಪ ನಾಯಕ್. ಅಪ್ಪನಗೌಡ ಪಾಟೀಲ್, ಮುತ್ತಪ್ಪ ಸಿದ್ದಾಪುರ, ಸಂಗಪ್ಪ ಅಮಾತಿ, ಲಕ್ಕಪ್ಪ ಹಾರೂಗೇರಿ, ಪುಟ್ಟು ಕುಲಕರ್ಣಿ, ಸಂಗನಗೌಡ ಪಾಟೀಲ್, ಮಹಾಲಿಂಗ ಪುರಾಣಿಕ, ಸಿದ್ದು ಹೆಗ್ಗಾಣಿ ಇನ್ನು ಮುಂತಾದವರಿದ್ದರು.