ಮಹಾಲಿಂಗಪುರ ತಾಲೂಕು ಕೇಂದ್ರಕ್ಕಾಗಿ ವಿಪ ಸಭಾಪತಿ ಹೊರಟ್ಟಿ ಅವರಿಗೆ ಮನವಿ.
ಮಹಾಲಿಂಗಪುರ : ಮಹಾಲಿಂಗಪುರ ತಾಲೂಕು ಕೇಂದ್ರ ಘೋಷಣೆಗೆ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಆ. 4ರಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಪಟ್ಟಣದ ಹೋರಾಟ ಸಮಿತಿ ಪರವಾಗಿ ನ್ಯಾಯವಾದಿ ಮಲ್ಲು ಸಂಗಣ್ಣವರ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ವಿಪ ಸಭಾಪತಿ ಅವರು ಕರ್ನಾಟಕ ರಾಜ್ಯ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ನಡವಳಿ ಪತ್ರದ ಮೂಲಕ ಮಹಾಲಿಂಗಪುರ ಪಟ್ಟಣ ಉತ್ತಮ ಭೌಗೋಳಿಕ ಹಿನ್ನೆಲೆ, ನೀರಾವರಿ ವ್ಯವಸ್ಥೆ ಮತ್ತು ಇತರೆ ದೈನಂದಿನ ಬದುಕಿಗೆ ಸಹಕಾರಿಯಾಗುವ ಸಕಲ ಸೌಲಭ್ಯಗಳನ್ನು ಹೊಂದಿ ಸಂಪತ್ಭರಿತವಾಗಿದೆ. ಅಲ್ಲದೆ ಸರ್ಕಾರಕ್ಕೆ ಅತಿ ಹೆಚ್ಚಿನ ಆದಾಯ ನೀಡುವ ಕೃಷಿ ಮಾರುಕಟ್ಟೆಯ ಬೆಲ್ಲದ ವಹಿವಾಟು ರಾಷ್ಟ್ರೀಯ ಮಾನ್ಯತೆಯನ್ನೂ ಸಹ ಪಡೆದುಕ್ಕೊಂಡಿದೆ.
14 ಹಳ್ಳಿಗಳು ಪಟ್ಟಣದಿಂದ ಅಂದಾಜು ಕೇವಲ 3ಕಿಮೀ ದಿಂದ 8 ಕಿಮೀ ಅಂತರದಲ್ಲಿದ್ದು ಮಹಾಲಿಂಗಪುರ ಸೇರಿದಂತೆ ಒಟ್ಟು 1ಲಕ್ಷ 52ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಈ ದೃಷ್ಟಿಯಿಂದ ಅಧಿಕಾರ ವಿಕೇಂದ್ರೀಕರಣ ಅಡಿಯಲ್ಲಿ ರಾಜ್ಯದಲ್ಲಿ ಈಗಾಗಲೇ ಜಿಲ್ಲೆ, ತಾಲೂಕುಗಳನ್ನು ರಚಿಸಿದಂತೆ ಮಹಾಲಿಂಗಪುರ ಪಟ್ಟಣವನ್ನೂ ಕೂಡ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು. ಇದರಿಂದ ಅಕ್ಕಪಕ್ಕದ ಹಳ್ಳಿಗರಿಗೆ ಸರ್ಕಾರಿ ಸೌಲಭ್ಯಗಳು ಮತ್ತು ಮನೆ, ಜಮೀನುಗಳ ಅಗತ್ಯ ದಾಖಲಾತಿಗಳು ಸುಲಭವಾಗಿ ಕೈಗೆಟಕುವಂತಾಗಿ ದೂರದ ತಾಲೂಕಿಗೆ ಅಲೆದಾಟ ತಪ್ಪುತ್ತದೆ.
ಈ ದೃಷ್ಟಿಯಲ್ಲಿ ಸರ್ಕಾರಕ್ಕೆ ಹೆಚ್ಚಿನ ಆದಾಯ ನೀಡುವ ಮಹಾಲಿಂಗಪುರ ತಾಲೂಕು ಕೇಂದ್ರಕ್ಕಾಗಿ 479 ದಿವಸಗಳಿಂದ ಸರಣಿ ಧರಣಿ ಸತ್ಯಾಗ್ರಹ ನಡೆದಿದ್ದು ಇಷ್ಟು ದೀರ್ಘ ಸತ್ಯಾಗ್ರಹ ನಡೆದರೂ ಸರ್ಕಾರಗಳು ಸ್ಪಂದಿಸದೆ ಇರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. ಈ ಭಾಗದ ಜನತೆಯ ಆಶೋತ್ತರಗಳಿಗೆ ಸರ್ಕಾರ ಸ್ಪಂದಿಸಿ ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರ ಮುಖೇನ ಮನವಿ ಮಾಡಿದ್ದಾರೆ