ಮೊಬೈಲ್ ಟವರ್ ನಿರ್ಮಾಣ ವಿರೋಧಿಸಿ ಸವದಿಗೆ ಮನವಿ
ಶಾಸಕರಿಂದ ಕಾಮಗಾರಿ ಸ್ಥಗಿತಕ್ಕೆ ಆದೇಶ ! ಅಭಿನಂದನೆ ಸಲ್ಲಿಸಿದ ಮಹಿಳೆಯರು
ಮಹಾಲಿಂಗಪುರ : ಗಣೇಶ ನಗರ 15ನೇ ವಾರ್ಡ್ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿರುವ ಏರ್ಟೆಲ್ ಕಂಪನಿಯ ಟವರ್ ನಿಂದ ಬಡಾವಣೆಯ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ ತೆರವುಗೊಳಿಸುವ ಮನವಿಯನ್ನು ಬಡಾವಣೆಯ ಮಹಿಳೆಯರು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿಯವರಿಗೆ ಮನವಿ ನೀಡಿದರು.
ಶಾಸಕರು ಬನಹಟ್ಟಿಯ ತಮ್ಮ ನಿವಾಸದ ಸಭಾಭವನದಲ್ಲಿ ಮನವಿ ಸ್ವೀಕರಿಸಿ ಸ್ಥಳೀಯರಿಗೆ ಆಗುವ ಆರೋಗ್ಯ ನಷ್ಟವನ್ನು ಗಮನಿಸಿ, ಕಾಮಗಾರಿ ಸ್ಥಗಿತಕ್ಕೆ ಭರವಸೆ ನೀಡುತ್ತಾ, ತಕ್ಷಣ ಸಂಬಂಧಿಸಿದ ವ್ಯಕ್ತಿಗೆ ದೂರವಾಣಿ ಮೂಲಕ ಮಾತನಾಡಿ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಆದೇಶ ಮಾಡಿದರು. ಇದಕ್ಕೆ ಉತ್ತರವಾಗಿ ಮಹಿಳೆಯರು ಶಾಸಕರ ಈ ಸ್ಪಂದನಾ ನಡೆಗೆ ಅಭಿನಂದನೆ ಸಲ್ಲಿಸಿದರು.
ಈಗಾಗಲೇ ವಿವಿಧ ಇಲಾಖೆಗಳಾದ ಹೆಸ್ಕಾಂ, ಪೊಲೀಸ್ ಸ್ಟೇಷನ್, ಪುರಸಭೆ, ಜಿಲ್ಲಾಧಿಕಾರಿ, ಪರಿಸರ ಇಲಾಖೆಯನ್ನೊಳಗೊಂಡು ಸಂಬಂಧಿಸಿದ ಇಲಾಖಾ ಮಂತ್ರಿಗಳಿಗೂ ಬಡಾವಣೆಯ ಜನರು ತಮಗಾಗುವ ಹಾನಿಯ ಕುರಿತು ವೈಜ್ಞಾನಿಕ ಮನವರಿಕೆಯನ್ನು ಮಾಡಿ, ಟವರ್ ಕಾಮಗಾರಿ ಸ್ಥಗಿತಗೊಳಿಸುವ ಕುರಿತು ಮನವಿ ಪತ್ರವನ್ನು ಕೂಡ ರವಾನಿಸಲಾಗಿತ್ತು. ಇಷ್ಟಾದರೂ ಕೂಡ ಯಾವ ಅಧಿಕಾರಿಯೂ ಕಾಮಗಾರಿ ಸ್ಥಗಿತಗೊಳಿಸಲು ಕ್ರಮಕೈಗೊಳ್ಳಲಿಲ್ಲವೆನ್ನುವುದು ಅವರ ನಿರ್ಲಕ್ಷ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ. ಹೀಗಾಗಬೇಕಾದರೆ ಇವರು ಯಾರದೋ ಪ್ರಭಾವಿಗಳ ಒತ್ತಡದಲ್ಲಿ ಕೆಲಸ ಮಾಡುವಂತಿದೆ ಎಂದು ಅಧಿಕಾರಿಗಳ ವಿರುದ್ಧ ಆರೋಪಿಸುತ್ತಾ ಈ ಹೋರಾಟದ ನೇತೃತ್ವವಹಿಸಿರುವ ಸಾಮಾಜಿಕ ಕಾರ್ಯಕರ್ತೆ ಸುವರ್ಣ ಆಸಂಗಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಮೊಬೈಲ್ ಟವರ್ ಗಳು ಹೊರಸೂಸುವ ರೆಡಿಯೇಶನ್ ಗಳಿಂದ ಕ್ಯಾನ್ಸರ್, ಬಂಜೆತನ, ಪುರುಷತ್ವ ನಾಶ, ಬುದ್ಧಿ ಮಾಂದ್ಯತೆ ಅಲ್ಲದೆ ಪ್ರಾಣಿ ಮತ್ತು ಪಕ್ಷಿ ಸಂಕುಲಗಳ ಮೇಲೆ ದೈಹಿಕವಾಗಿ ಆರೋಗ್ಯದ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ ಎನ್ನುವುದನ್ನು ನಾವು ವೈಜ್ಞಾನಿಕ ಸತ್ಯವನ್ನು ಅರಿಯಬೇಕಾಗಿರುವುದು ವಾಸ್ತವಾಂಶವಾಗಿದೆ.
ಮನವಿಯನ್ನು ಅರ್ಪಿಸುವ ಸಂದರ್ಭದಲ್ಲಿ ಬಡಾವಣೆಯ ಮಹಿಳೆಯರಾದ ಬಸವ ಬಿಳಿಗಿ, ಸುನಂದಾ ನುಚ್ಚಿ, ಶೋಭಾ ಬಂಡಿಗಣಿ, ಸುಶೀಲವ್ವ ದಢೂತಿ, ಮಹಾನಂದ ಬಾಪುರೆ,ತಂಜಿಂ ಕೇಸರಿ, ರೂಪಾ ಬಾವಿಕಟ್ಟಿ, ಹುಸೇನಮಾ ಶೇಕ್, ನಿಖಿಲ್ ಬಾವಿಕಟ್ಟಿ, ಗುರು ಧಡೂತಿ, ಆನಂದ್ ಬಾಪುರೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.