ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಕಠಿಣ ಶಿಕ್ಷೆಗೊಳಪಡಿಸಲು ಮನವಿ
ಬಳ್ಳಾರಿ 09: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಚಳುವಳಿ, ಪ್ರತಿಭಟನೆ, ಹೋರಾಟ ಖಂಡಿಸಿ, ಜಾಥಾ, ಮೆರವಣಿಗೆ, ಸತ್ಯಾಗ್ರಹ, ಪಿಕೆಟಿಂಗ್, ಬಂದ್, ಮುಂತಾದ ಕಾರ್ಯಕ್ರಮಗಳಿಂದ ತಮ್ಮ ವೈಫಲ್ಯ ಬಯಲಿಗೆ ಬಂದಾಗಲೆಲ್ಲಾ, ಸರ್ಕಾರ ಮತ್ತು ಅಧಿಕಾರಶಾಹಿಯು ಕ.ರಾ.ದ.ಸಂ.ಸಮಿತಿ ಹೋರಾಟಗಾರರ ಮೇಲೆ ಸುಳ್ಳು ಕೇಸು ಹಾಕಿ, ವಿನಾಕಾರಣ ಹಾಗೂ ಅನ್ಯಾಯವಾಗಿ ಕೋರ್ಟಿನ ಹೊರೆಯನ್ನು ಹೆಚ್ಚಿಸಿವೆ. ವರ್ಷಾನುಗಟ್ಟಲೆ ಕೇಸುಗಳು ಎಳೆದಾಡಲ್ಪಟ್ಟು ಮೊಕದ್ದಮೆಗಳಲ್ಲಿ ಹುರಳಿ ಇಲ್ಲಾ ಎಂಬುದಾಗಿ ಕೋರ್ಟಿನಲ್ಲಿ ಛೀಮಾರಿಗೂ ಒಳಗಾಗಿದೆ.
ದ.ಸಂ.ಸಮಿತಿ ಮುಖಂಡ ವಾಯ್ಸಿ ಮಯೂರ ಹೋರಾಟಗಾರನ ಮೇಲೆ ಹಿಂದಿನ ಇಂಡಿ ಹಾಗೂ ಇಂದಿನ ಧಾರವಾಡ ಗ್ರಾಮೀಣ ಉಪ ವಿಭಾಗದ ಡಿ.ವೈ.ಎಸ್.ಪಿ. ಎಂ.ಬಿ. ಸಂಕದ ರವರು ಸುಳ್ಳು ಕೇಸುಗಳನ್ನು ಹಾಕಿದ್ದಾರೆ. ಇದನ್ನು ಮಾನ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ವಿಚಾರಣೆ ನಡೆದು, ಎರಡು ಕೇಸುಗಳನ್ನು ರದ್ದು ಮಾಡಿ ಪೊಲೀಸ್ ಇಲಾಖೆಗೆ ಕೋರ್ಟ್ ಛೀಮಾರಿ ಹಾಕಿದೆ.
ಅನ್ಯಾಯ, ಅಸಮಾನತೆ, ವ್ಯವಸ್ಥೆಯಲ್ಲಿ ಸ್ವಾಭಿಮಾನಿ ಹಾಗೂ ನ್ಯಾಯಪರ ವ್ಯಕ್ತಿ-ಸಂಘಟನೆಗಳು-ಹೋರಾಟಕ್ಕಿಳಿಯುವುದು ಅನಿವಾರ್ಯ, ಮೂಲಭೂತ ಹಾಗೂ ಮಾನವೀಯ ನಡುವಳಿಕೆಯಾಗಿದೆ. ಇಂಥಹ ಸಹಜ ಪ್ರತಿಕ್ರಿಯೆಯನ್ನು ಹತ್ತಿಕ್ಕುವ ಹಕ್ಕು ಯಾವ ಪೊಲೀಸರಿಗೂ, ಸರ್ಕಾರಕ್ಕೂ ಇಲ್ಲ.
ಆದರೆ ವಿಜಯಪುರ ಜಿಲ್ಲೆಯ ಹಿಂದಿನ ಇಂಡಿ ಉಪ ವಿಭಾಗದ ಡಿ.ವೈ.ಎಸ್.ಪಿ. ಶ್ರೀ ಎಂ.ಬಿ. ಸಂಕದ ಎಂಬುವವರು ತನ್ನ ಅಧಿಕಾರದ ಅವಧಿಯಲ್ಲಿ ಮಾಡಬಾರದ ಅನಾಚಾರ ಎಲ್ಲವನ್ನೂ ಮಾಡಿದ್ದಾರೆ. ತನ್ನ ಕರ್ತವ್ಯದುದ್ದಕ್ಕೂ ದಲಿತರ ಮೇಲೆ ದೌರ್ಜನ್ಯ ನಡೆಯಲು ನೇರವಾಗಿ ಕಾರಣರಾಗಿದ್ದಾರೆ. ಅಲ್ಲದೇ ಅವರ ಕರ್ತವ್ಯದ ವ್ಯಾಪ್ತಿಯಲ್ಲಿ ಬಹುತೇಕ ದೌರ್ಜನ್ಯ ಪ್ರಕರಣಗಳು ‘ಬಿ’ ರಿಪೋರ್ಟ್ ಹಾಕಿದ್ದಾರೆ. ಇದರ ಬಗ್ಗೆ ರಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿರುವುದಿಲ್ಲ.
ಅದೇ ರೀತಿಯಾಗಿ ಸಿಂಧಿಗಿ ಮತ್ತು ಆಲಮೇಲ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ರಾಂಪುರ ಪಿ.ಎ. ಗ್ರಾಮದಲ್ಲಿ ಡಾ. ಬಾಬಾಸಾಹೇಬರ ಸರ್ಕಲ್ ಮಾಡಿ ಅವರ ಪೂರ್ಣ ಪ್ರಮಾಣದ ನಿಂತ ಪ್ರತಿಮೆ ಇದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಸದರಿ ಪ್ರತಿಮೆ ಸ್ಥಾಪನೆಗಾಗಿ ಸುಮಾರು ವರ್ಷಗಳೇ ಕಳೆದಿವೆ.
ಆದರೆ ಹಿಂದಿನ ಇಂಡಿ ಡಿ.ವೈ.ಎಸ್.ಪಿ. ಮತ್ತು ಇಂದಿನ ಧಾರವಾಡ ಗ್ರಾಮೀಣ ವಿಭಾಗದ ಡಿ.ವೈ.ಎಸ್.ಪಿ. ಎಂ.ಬಿ. ಸಂಕದ ಅವರು ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆ ಅಲ್ಲಿಂದ ತೆಗೆದು ಹಾಕಲು, ಹಗಲು ರಾತ್ರಿ ಎನ್ನದೆ ವಿಫಲ ಪ್ರಯತ್ನ ಮಾಡಿದ್ದರು.
ಹಿಂದಿನ ಇಂಡಿ ಡಿ.ವೈ.ಎಸ್.ಪಿ. ಎಂ.ಬಿ. ಸಂಕದರವರು ಮಾತ್ತೆತ್ತಿದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಬಗ್ಗೆ ಕೀಳಾಗಿ ಮಾತನಾಡುವುದು, ಕೀಳಾಗಿ ಕಾಣುವುದು ಎಸ್.ಸಿ., ಎಸ್.ಟಿ. ಯವರ ಮೇಲೆ ದೌರ್ಜನ್ಯವಾದರೆ, ಅವರ ದೂರನ್ನು ಸ್ವೀಕಾರ ಮಾಡದೇ ಠಾಣೆಯಲ್ಲಿ ವಿಳಂಬ ಮಾಡುವುದು, ಕೇಸ್ ಆಗದ ಹಾಗೆ ನೋಡಿಕೊಳ್ಳುವುದು.
ಇಂತಹ ಜಾತಿವಾದಿ, ಕೋಮುವಾದ, ಡಾ.ಬಿ.ಆರ್.ಅಂಬೇಡ್ಕರ್ ರವರ ಹಾಗೂ ದಲಿತರ ವಿರೋಧಿಯಾದ ಹಿಂದಿನ ಇಂಡಿ ವಿಭಾಗದ ಹಾಗೂ ಈಗಿನ ಧಾರವಾಡ ಗ್ರಾಮೀಣ ವಿಭಾಗದ ಡಿವೈಎಸ್ಪಿ ಎಂ.ಬಿ. ಸಂಕದರವರನ್ನು ಕೂಡಲೇ ಅಮಾನತ್ತುಗೊಳಿಸಿ, ವಿಚಾರಣೆಗೆ ಗುರಿಪಡಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸರ್ಕಾರಕ್ಕೆ ಆಗ್ರಹಿಸುತ್ತದೆ.
ಸರ್ಕಾರ ಇದೆಲ್ಲವನ್ನು ವಿಚಾರಣೆಗೆ ಒಳಪಡಿಸಿ, ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ, ದಲಿತರ ಮೇಲೆ ಪೊಲೀಸರು ದೌರ್ಜನ್ಯ, ದಬ್ಬಾಳಿಕೆ, ಸುಳ್ಳು ಕೇಸು ಹಾಕಿರುವುದನ್ನು ಖಂಡಿಸಿ ಈ ಕೆಳಗಿನ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿ ದಿ.09ರಂದು ಬೆಳಿಗ್ಗೆ 11ಗಂಟೆಗೆ ಬಳ್ಳಾರಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಕಛೇರಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಬೃಹತ್ ಪ್ರತಿಭಟನೆ, ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.