ಮಹದಾಯಿ ಯೋಜನೆಗೆ ಮತ್ತೊಂದು ಕಂಟಕ : ಕರ್ನಾಟಕ ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದ ಗೋವಾ ಸರ್ಕಾರ ಈಗ ತಾನು ತೋಡಿದ ಬಾವಿಯಲ್ಲಿ ತಾನೇ ಬಿದ್ದಿದೆ
ಪಾರೇಶ ಭೋಸಲೆ
ಬೆಳಗಾವಿ : ಉತ್ತರ ಕರ್ನಾಟಕದ ಮಹತ್ವಕಾಂಕ್ಷಿಯ ಮಹದಾಯಿ ಯೋಜನೆಗೆ ಮತ್ತೊಂದು ಕಂಟಕ ಎದುರಾಗಿದ್ದು, ಮಹದಾಯಿ ಅರಣ್ಯ ವ್ಯಾಪ್ತಿಯ ಪ್ರದೇಶ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಮಾಡಲು ಹೈಕೋರ್ಟ್ ಸೂಚನೆ ನೀಡಿರುವದರಿಂದ ಕಳಸಾ-ಬಂಡೂರಿ ನಾಲಾ ಮಲಪ್ರಭಾ ನದಿ ಜೋಡಣೆಗೆ ಅಡ್ಡಿಯಾಗುವ ಸಾಧ್ಯತೆ ಎದ್ದು ಕಾಣುತ್ತಿದೆ. ಹೈಕೊರ್ಟನ ಈ ಆದೇಶದ ವಿರುದ್ದ ಗೋವಾ ಸರಕಾರ ಸುಪ್ರೀಂ ಕೋರ್ಟ್‍ನ ಕದ ತಟ್ಟುವ ತಯಾರಿ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ಸನ್ನಿವೇಶಗಳನ್ನು ಗಮನಿಸಿದರೆ ತಾನು ತೋಡಿದ ಬಾವಿಯಲ್ಲಿ ಗೋವಾ ಸರಕಾರ ತಾನೆ ಬಿದ್ದಿದೆ. ಕರ್ನಾಟಕದ ಕಳಸಾ-ಬಂಡೂರಿ ಯೋಜನೆಗೆ ಅಡ್ಡಗಾಲು ಹಾಕಲು ನಡೆಸಿದ್ದ ಹುನ್ನಾರವೇ ಗೋವಾ ಸರಕಾರಕ್ಕೆ ಈಗ ತಿರುಮಂತ್ರವಾಗಿದೆ.

ಗೋವಾ ಫೌಂಡೇಶನ್ ಎಂಬ ಎನ್‍ಜಿಒ ಸಂಸ್ಥೆಯು ಬಾಂಬೆ ಹೈಕೋರ್ಟ್ ಮೊರೆ ಹೋಗಿತ್ತು. ಈ ಹಿನ್ನಲೆಯಲ್ಲಿ ಕೆಲವು ದಿನಗಳ ಹಿಂದಷ್ಠೇ ಬಾಂಬೆ ಹೈಕೋರ್ಟ್‍ನ ಗೋವಾ ಪೀಠದಿಂದ ಗೋವಾ ಸರ್ಕಾರಕ್ಕೆ ಮಹದಾಯಿ ಅರಣ್ಯ ವ್ಯಾಪ್ತಿಯ ಪ್ರದೇಶ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಮಾಡಲು ಸೂಚನೆ ನೀಡಿದೆ. ಈ ಬಗ್ಗೆ ಮೂರು ತಿಂಗಳ ಒಳಗಾಗಿ ಕ್ರಮಕೈಗೊಳ್ಳುವಂತೆ ಗೋವಾ ಸರ್ಕಾರಕ್ಕೆ ಸೂಚಿಸಿದೆ. ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಗೋವಾ ಸರ್ಕಾರವೇ ಸುಪ್ರೀಂ ಕೋರ್ಟ್‍ಗೆ ಹೋಗಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಗೋವಾ ಸರ್ಕಾರ ಮತ್ತು ಪರಿಸರವಾದಿಗಳ ತಿಕ್ಕಾಟದಿಂದ ಇದೀಗ ಮತ್ತೆ ಈ ಮಹದಾಯಿ ಯೋಜನೆಗೆ ಧಕ್ಕೆ ಉಂಟಾಗಿದೆ.

ಕರ್ನಾಟಕವನ್ನ ಇಕ್ಕಟ್ಟಿಗೆ ಸಿಲುಕಿಸಲು ಹೋದ ಗೋವಾ ಸರ್ಕಾರ ತಾನೇ ಈಗ ಪೇಚಿಗೆ ಸಿಲುಕಿದ್ದು, ಇದರಿಂದ ಬಚಾವ್ ಆಗಲು ಕೆಲವು ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಹೇಳಲಾಗಿದೆ. ಇದರಿಂದ ಈಗಾಗಲೇ ನೆನಗುದಿಗೆ ಬಿದ್ದಿರುವ ಮಹದಾಯಿ ಯೋಜನೆಗೆ ಮತ್ತೊಂದು ಕಂಟಕ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮತ್ತಷ್ಟು ವಿಳಂಬ ಆಗಲಿದೆಯಾ ಮಹದಾಯಿ ಯೋಜನೆ ಎನ್ನುವ ಆತಂಕ ರಾಜ್ಯದ ಜನತೆಯನ್ನು ಚಿಂತೆಗೀಡು ಮಾಡಿದೆ.
ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯದ ನೀರಾವರಿ ಯೋಜನೆಗಳಿಗೆ ಈಗ ಸಂಕಷ್ಟ ಎದುರಾಗಿದೆ. ಗೋವಾ ಮಹಾರಾಷ್ಟ್ರ ನಡುವಿನ ಜಂಟಿ ಯೋಜನೆಯಾದ ತಿಲಾರಿ ಯೋಜನೆಗೂ ಇದರ ಎಪೇಕ್ಟ್ ಆಗಲಿದೆ. ಒಂದು ವೇಳೆ ಮಹದಾಯಿ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಅರಣ್ಯವೆಂದು ಘೋಷಣೆ ಮಾಡಿದ್ದಲ್ಲಿ ಮೂರು ರಾಜ್ಯಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಬಾಂಬೆ ಹೈಕೋರ್ಟ್ ಗೋವಾ ಪೀಠದ ಆದೇಶದ ವಿರುದ್ಧ ಗೋವಾ ಸರಕಾರ ಮೇಲ್ಮನವಿ ಹೋಗಲು ಮುಂದಾಗಿದೆ ಎಂದು ಹೇಳಲಾಗಿದೆ.

ಈಗಾಗಲೇ ಕರ್ನಾಟಕ ಮಹದಾಯಿ ಯೋಜನೆ ಸ್ವರೂಪವನ್ನೇ ಬದಲಾಯಿಸಿದೆ. ಆಗಸ್ಟ್ 14, 2018ರಂದು ಮಹದಾಯಿ ನ್ಯಾಯಾಧೀಕರಣ ತೀರ್ಪು ಪ್ರಕಟವಾಗಿತ್ತು. 13.7 ಟಿಎಂಸಿ ನೀರು ಕರ್ನಾಟಕ ಬಳಸಬಹುದು ಎಂದು ಅನುಮತಿ ನೀಡಿತ್ತು. ಇದಾದ ಬಳಿಕ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಂದು ಸಾವಿರ ಕೋಟಿ ರೂ. ಬಜೆಟ್‍ನಲ್ಲಿ ಮೀಸಲು ಮಾಡಿತ್ತು. ಯೋಜನೆ ಪರಿಷ್ಕೃತ ಡಿಪಿಆರ್ ಸಿದ್ದಪಡಿಸಿ ಅನುಮತಿಗಾಗಿ ಸಲ್ಲಿಕೆ ಮಾಡಿದನ್ನು ಇಲ್ಲಿ ಸ್ಮರೀಸಬಹುದಾಗಿದೆ.