ಶ್ರೀನಿವಾಸ ಸ್ಕೂಲ್ಸನಲ್ಲಿ ವಾರ್ಷಿಕ ಕ್ರೀಡಾ ದಿನ ಆಚರಣೆ
ಮೂಡಲಗಿ 12: ಇಲ್ಲಿನ ಪ್ರತಿಷ್ಠಿತ ಶ್ರೀನಿವಾಸ ಸ್ಕೂಲ್ಸನಲ್ಲಿ ಇದೇ ಶನಿವಾರ ವಾರ್ಷಿಕ ಕ್ರೀಡಾ ದಿನವನ್ನು ಆಚರಿಸಲಾಯಿತು.
ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಕ್ರೀಡಾ ಧ್ವಜಾರೋಹಣ ನಡೆಸಿದರು. ವಿದ್ಯಾರ್ಥಿಗಳ ಪಥ ಸಂಚಲನ ಪರೀವೀಕ್ಷಿಸಿ, ಗೌರವ ವಂದನೆ ಹಾಗೂ ಕ್ರೀಡಾಜ್ಯೋತಿ ಸ್ವೀಕರಿಸಿದರು.
ಕ್ರೀಡಾ ದಿನಕ್ಕೆ ಚಾಲನೆ ನೀಡಿ ಮಾತನಾಡಿದ ಅಜಿತ್ ಮನ್ನಿಕೇರಿಯವರು, ಕೇವಲ ಸ್ಪರ್ಧೆಗಳಿಗೆ ಸೀಮಿತವಾಗಿರದೇ ಪ್ರತಿನಿತ್ಯ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಸಧೃಡ ದೇಹ ಮತ್ತು ಆರೋಗ್ಯ ಹೊಂದುವಂತೆ ಕರೆ ನೀಡಿದರು. ವಿವಿಧ ಕ್ರೀಡೆಗಳಲ್ಲಿ ಸಾಧನೆ ತೋರಿದ ಮಹನೀಯರು ಹಾಗೂ ವಿದ್ಯಾರ್ಥಿಗಳನ್ನು ಅವರು ಸ್ಮರಿಸಿದರು. ಏಕಾಗ್ರತೆ ಹಾಗೂ ಅಚಲ ಸಾಧನೆಗೆ ಆಟೋಟಗಳ ಮಹತ್ವವನ್ನು ಕುರಿತು ಅವರು ವಿವರಿಸಿದರು.
ಪ್ರಾಚಾರ್ಯ ಮನೋಜ ಭಟ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯದರ್ಶಿ ವೆಂಕಟೇಶ ಪಾಟೀಲ ಅಧ್ಯಕ್ಷತೆ ವಹಿಸಿ, ವಿವಿಧ ಆಟೋಟಗಳಿಗೆ ಚಾಲನೆ ನೀಡಿದರು.
ಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್, ಥ್ರೋಬಾಲ್, ಕಬಡ್ಡಿ, ಅಥ್ಲೆಟಿಕ್ಸ, ರಿಲೇ, ಹಗ್ಗ ಜಗ್ಗಾಟ, ಗುಂಡುಎಸೆತ, ಕರಾಟೆ ಮೊದಲಾದಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಲ್ಲಪ್ಪ ಚಿಪ್ಪಲಕಟ್ಟಿ ಜೀವನದಲ್ಲಿ ಕ್ರೀಡೆಗಳ ಮಹತ್ವವನ್ನು ಕುರಿತು ಮಾತನಾಡಿದರು. ತಮ್ಮ 34 ವರ್ಷಗಳ ಸುದೀರ್ಘ ಕ್ರೀಡಾ ಅನುಭವವನ್ನು ವಿವರಿಸಿದ ಅವರು, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಶಿಕ್ಷಕಿಯರಾದ ಸೌಮ್ಯಾ ಹಾಗೂ ಪೂಜಾ ನಿರೂಪಿಸಿದರು. ಶಿಕ್ಷಕಿಯರಾದ ಗಾಯತ್ರಿ ಹಾಗೂ ಶಾಂತಾ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಸಂಯೋಜಕಿ ನಂದಾ ಹಾಗೂ ಶಾಲಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಹಾಗೂ ಶಿಕ್ಷಕರು ಬಹುಮಾನ ವಿತರಣೆ ಮಾಡಿದರು.