ಪಂಚಮಸಾಲಿ ಮೀಸಲಾತಿ ಹೋರಾಟದ ಒಂದು ಅವಲೋಕನ
ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಕಾವು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ರಾಜ್ಯದ ಲಿಂಗಾಯತರಲ್ಲಿಯೇ ಪ್ರಬಲ ಸಮುದಾಯ ಸುಮಾರು 90 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಮತ್ತು ರಾಜ್ಯದ ಸುಮಾರು 75 ವಿಧಾನಸಭೆಯ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವಹಿಸಬಲ್ಲ ಪ್ರಮುಖ ಸಮಾಜವಾದ ಪಂಚಮಸಾಲಿ ಮೀಸಲಾತಿ ಹೋರಾಟದ ಒಂದು ಅವಲೋಕನ ಅಗತ್ಯ ಮತ್ತು ಅನಿವಾರ್ಯ ಎನಿಸುತ್ತದೆ. ಹಾಗಾದರೆ ಈ ಪಂಚಮಸಾಲಿಗಳ ಮೀಸಲಾತಿ ಹೋರಾಟ ಅಗತ್ಯವಿದೆಯೇ? ನೈಜವಾಗಿ ಪಂಚಮಸಾಲಿ ಸಮಾಜ ಹಿಂದುಳಿದಿದೆಯೇ? ಪಂಚಮಸಾಲಿಗಳ ಬೇಡಿಕೆ ನ್ಯಾಯಯುತವೇ? ಪಂಚಮಸಾಲಿಗಳನ್ನು 2ಎಗೆ ಸೇರಿಸಿದರೆ ಆಗುವ ಲಾಭಗಳೇನು? ಪಂಚಮಸಾಲಿಗಳಿಗೆ ಇಲ್ಲಿಯವರೆಗೆ ಅನ್ಯಾಯವಾಗಿದೆಯೇ? ಹಾಗಾದರೆ ಇದಕ್ಕೆ ಮೀಸಲಾತಿ ಪರಿಹಾರವೇ ಮತ್ತು ಇದರಲ್ಲಿ ಸರ್ಕಾರದ ಪಾತ್ರವೇನು? ಈ ಹೋರಾಟ ಒಂದು ಹಂತಕ್ಕೆ ಸಫಲವಾಗಿದೆಯೇ? ಎನ್ನುವ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅವುಗಳ ಕುರಿತು ಒಂದು ಚಿಂತನೆ ಇಲ್ಲಿದೆ. ಈ ಪ್ರಶ್ನೆಗಳನ್ನು ನೋಡುವ ಮೊದಲು ರಾಜ್ಯದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿನ ಅವಕಾಶಗಳು ಮತ್ತು ರಾಜ್ಯದಲ್ಲಿ ಮೀಸಲಾತಿಗೆ ಸಂಬಂಧಿಸಿದ ಇತಿಹಾಸವನ್ನು ಒಮ್ಮೆ ಮೆಲಕು ಹಾಕುವುದು ಅಗತ್ಯವೇನಿಸುತ್ತದೆ.
ಮೀಸಲಾತಿಗೆ ಸಂಬಂಧಸಿದಂತೆ ಸಂವಿಧಾನದಲ್ಲಿ ಏನು ಉಲ್ಲೇಖ ಮಾಡಲಾಗಿದೆ ಎಂಬುದನ್ನು ನೋಡಿದಾಗ ಸಂವಿಧಾನದ ನಾಲ್ಕನೆಯ ಭಾಗದಲ್ಲಿರುವ 46ನೇ ವಿಧಿ ಅನ್ವಯ ಸಮಾಜದ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಬೇಕು ಎಂದು ಹೇಳಲಾಗಿದೆ. ಹಾಗೆಯೇ ಸಂವಿಧಾನದ ವಿಧಿ 15(4) ನೇ ಉಪವಿಧಿಯ ಪ್ರಕಾರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪ್ರಜೆಗಳಿಗೆ ರಾಜ್ಯವು ವಿಶೇಷ ನಿಯಮಗಳನ್ನು ರೂಪಿಸಬಹುದೆಂದು ಹೇಳಲಾಗಿದೆ. ಇದಕ್ಕೆ ಪೂರಕವಾಗಿ ಸಂವಿಧಾನದ 16ನೇ ವಿಧಿಯಲ್ಲಿರುವ 1 ಮತ್ತು 2ನೇಯ ಉಪವಿಧಿಗಳು ಕೂಡಾ ರಾಜ್ಯಕ್ಕೆ ಈ ವಿಷಯದಲ್ಲಿ ಅಧಿಕಾರ ನೀಡಿದೆ. ಈ ಸಂವಿಧಾನದ ಆಶಯದಂತೆ ಪಂಚಮಸಾಲಿ ಜನಾಂಗಕ್ಕೆ ನ್ಯಾಯ ಸಿಗಬೇಕಿದೆ. ಈ ನಿಟ್ಟಿನಲ್ಲಿ 2ಎ ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುವುದರಿಂದ ಪಂಚಮಸಾಲಿಗಳ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಬೇಕು ಎನ್ನುವುದು ಬಹುಸಂಖ್ಯಾತ ಪಂಚಮಸಾಲಿಗಳ ಆಗ್ರಹವಾಗಿದೆ.
ರಾಜ್ಯ ಸರ್ಕಾರ ಕಾಲಕಾಲಕ್ಕೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮಾಜಗಳಿಗೆ ನ್ಯಾಯ ಒದಗಿಸಲು ಅನೇಕ ಆಯೋಗಗಳನ್ನು ನೇಮಕ ಮಾಡಿದೆ. 1960ರಲ್ಲಿ ನಾಗನಗೌಡ ಸಮಿತಿ, 1975ರ ಹಾವನೂರ ಆಯೋಗ, 1983ರಲ್ಲಿ ಟಿ.ವೆಂಕಟಸ್ವಾಮಿ ಆಯೋಗ, 1988ರಲ್ಲಿ ಓ. ಚಿನ್ನಪ್ಪರೆಡ್ಡಿ ಆಯೋಗಗಳನ್ನು ಸರ್ಕಾರ ನೇಮಿಸಿತು. ಹಾವನೂರ ಆಯೋಗ ಲಿಂಗಾಯತರನ್ನು ಹಿಂದುಳಿದ ವರ್ಗವೆಂದು ಪರಿಗಣಿಸಲಿಲ್ಲ. ನಂತರ ಟಿ. ವೆಂಕಟಸ್ವಾಮಿ ಆಯೋಗ ಲಿಂಗಾಯತರನ್ನು ಹಿಂದುಳಿದ ಪಟ್ಟಿಗೆ ಸೇರಿಸಲಿಲ್ಲ. ಆಗ ಜನರ ತೀವ್ರ ಪ್ರತಿಭಟನೆಯಿಂದಾಗಿ 1988ರ ಅಕ್ಟೋಬರ್ನಲ್ಲಿ ಸರ್ಕಾರ ಒಕ್ಕಲಿಗರು ಮತ್ತು ಲಿಂಗಾಯತರನ್ನು ಮೀಸಲಾತಿ ಪಟ್ಟಿಗೆ ಸೇರಿಸಿತ್ತು. ಆಗಲೂ ಪಂಚಮಸಾಲಿ ಜನಾಂಗವನ್ನು ಹಿಂದುಳಿದ ಜನಾಂಗವೆಂದು ಗುರುತಿಸಲಿಲ್ಲ. ನಂತರ ಓ. ಚಿನ್ನಪ್ಪರೆಡ್ಡಿ ಆಯೋಗ, ಇದಾದ ನಂತರ 1994 ರಲ್ಲಿ ದೇವೆಗೌಡರು ಮುಖ್ಯಮಂತ್ರಿಯಾಗಿದ್ದಾಗ ಆಗಿನ ಸಚಿವ ಎಂ.ಪಿ. ಪ್ರಕಾಶ ನೇತೃತ್ವದದಲ್ಲಿ ರಚನೆಯಾದ ಸಂಪುಟ ಉಪಸಮಿತಿಯೂ ಪಂಚಮಸಾಲಿಗಳನ್ನು ಹಿಂದುಳಿದ ವರ್ಗವೆಂದು ಪರಿಗಣಿಸದೇ ಹೋಗಿದ್ದು ದುರಂತ. ಹೀಗೆ ಐತಿಹಾಸಿಕವಾಗಿ ಪಂಚಮಸಾಲಿಗಳನ್ನು ನಿರ್ಲಕ್ಷ್ಯಿಸಿದ್ದು ಸ್ಪಷ್ಟವಾಗುತ್ತದೆ. ಇದೇ ಸಮಯದಲ್ಲಿ ಲಿಂಗಾಯತ ಕೆಲ ಪಂಗಡಗಳನ್ನು ಹಿಂದುಳಿದ ವರ್ಗಗಳು ಎಂದು ಗುರುತಿಸಿ ಎಂ.ಪಿ. ಪ್ರಕಾಶ ಶಿಫಾರಸ್ಸು ಮಾಡಿದಾಗ ಆಗ ಯಾವ ಪಂಚಮಸಾಲಿ ಜನಪ್ರತಿನಿಧಿಗಳು ಒತ್ತಡ ಹಾಕದೇ ಹೋಗಿದ್ದು ಈಗಿನ ಪರಿಸ್ಥಿತಿಗೆ ಕಾರಣವೆಂದು ಹೇಳಬಹುದು. ನಂತರ 2008ರಲ್ಲಿ ಪಂಚಮಸಾಲಿಗಳನ್ನು ಹಿಂದುಳಿದ ವರ್ಗಗಳ 3ಬಿ ಪಟ್ಟಿಗೆ ಸೇರಿಸಲಾಯಿತು. ನಂತರ ಬಂದ ಸಿ.ಎಂ. ಉದಾಸಿ ಸಮಿತಿ ವರದಿ ಸೇರಿ ಇಲ್ಲಿಯವರೆಗೆ ಪಂಚಮಸಾಲಿಗಳನ್ನು ಈ ವಿಷಯದಲ್ಲಿ ಕಡೆಗಣಿಸಿದ್ದು ಎದ್ದು ಕಾಣುತ್ತದೆ. ಈ ಸದ್ಯದ ಪರಿಸ್ಥಿತಿಯಲ್ಲಿ ಈಗಲೂ ಹಿಂದುಳಿದ 3ಬಿ ನಲ್ಲಿರುವ ಪಂಚಮಸಾಲಿ ಜನಾಂಗದ ಕುಲಶಾಸ್ತೀಯ ಅಧ್ಯಯನ ಅಗತ್ಯವಿಲ್ಲ. ನೇರವಾಗಿ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಿ ರಾಜ್ಯಪತ್ರದಲ್ಲಿ ಹೋರಡಿಸಿದರೆ ಸಾಕು. ಆದರೆ ಇತರೆ ವ್ಯಕ್ತಿಗಳು ಕೋರ್ಟಿಗೆ ಹೋಗಬಾರದು ಎನ್ನುವ ಕಾರಣವಿದ್ದರೆ ಹಿಂದುಳಿದ ವರ್ಗದ ಆಯೋಗ ಅಧ್ಯಯನ ಮಾಡಿ ವರದಿ ಕೊಟ್ಟ ನಂತರ ಈ ಪಂಚಮಸಾಲಿಗಳಿಗೆ ಮೀಸಲಾತಿಯನ್ನು ಘೋಷಿಸಿಬೇಕು. ಆದರೆ ಇದೇ ಕಾರಣವಿಟ್ಟುಕೊಂಡು ವಿಳಂಬ ಮಾಡುವುದು ಸರಿಯಲ್ಲಾ.
ಮೀಸಲಾತಿಗೆ ಸಂಬಂಧಿಸಿದಂತೆ ಪಂಚಮಸಾಲಿಗರ ಕೂಗು ಇಂದು ನಿನ್ನೆಯದು ಅಲ್ಲಾ. ಸುಮಾರು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಈಗ ಅದು ಪ್ರಬಲ ಧ್ವನಿಯಾಗಿ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಪಂಚಮಸಾಲಿ ಜನಾಂಗದ ಸಂಘಟನೆಗೆ ರಾಜ್ಯದಲ್ಲಿ ಜೀವ ತುಂಬಿದವರು ಹನುಮನಾಳ ಗುರುಗಳು. 1992ರಲ್ಲಿ ಅಂದಿನ ಸಿ.ಎಂ. ವೀರ್ಪ ಮೋಯ್ಲಿ ಅವರನ್ನು ಕೊಪ್ಪಳಕ್ಕೆ ಕರೆಯಿಸಿ ಸಂಘಟನೆಗೆ ಚಾಲನೆ ಕೊಟ್ಟರು. ನಂತರ ಹಲವು ಜನ ಪಂಚಮಸಾಲಿ ಜನಾಂಗದ ಸಂಘಟನೆಗೆ ಶ್ರಮಿಸಿದ್ದಾರೆ. ನಂತರ 2008ರಲ್ಲಿ ಪಂಚಮಸಾಲಿ ಜಗದ್ಗುರು ಪೀಠಗಳನ್ನು ಕೂಡಲ ಸಂಗಮ ಮತ್ತು ಹರಿಹರದಲ್ಲಿ ಸ್ಥಾಪನೆಯಾದವು. ರಾಜ್ಯದಲ್ಲಿ ಲಿಂಗಾಯತರಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಸಮಾಜವು ಮೊದಲಿನಿಂದಲೂ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದು ಹೆಚ್ಚಾಗಿ ಈ ಸಮಾಜದ ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ರೈತಾಪಿ ವರ್ಗದವರಾದ ಈ ಸಮಾಜದಲ್ಲಿ ಬಡವರೇ ಹೆಚ್ಚಾಗಿದ್ದು, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಸಮಾಜದಲ್ಲಿಯ ದಿವಗಂತರಾದ ಎಸ್. ನಿಜಲಿಂಗಪ್ಪ, ಜೆ.ಎಚ್. ಪಟೇಲ, ಪಿ.ಎಂ. ನಾಡಗೌಡ, ಬಿ.ಕೆ. ಗುಡದಿನ್ನಿ, ಬಿ.ಎಸ್.ಪಾಟೀಲ ಮನಗೂಳಿ, ಎಸ್.ಆರ್. ಕಾಶಪ್ಪನವರ ಸೇರಿದಂತೆ ಹಲವು ನಾಯಕರಾಗಿ ಹೋಗಿದ್ದಾರೆ. ಇವತ್ತಿಗೂ ಈ ಸಮಾಜದ ಪ್ರಮುಖ ನಾಯಕರು ಎಲ್ಲಾ ಪಕ್ಷಗಳಲ್ಲಿ ಇದ್ದಾರೆ. ಆದರೆ ಈ ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳು ಮಾತ್ರ ಸಿಗದೇ ಹೋಗಿದ್ದು ಅಚ್ಚರಿಯನ್ನುಂಟು ಮಾಡುತ್ತದೆ. ಇದಕ್ಕೆ ಕಾರಣ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ನಿರ್ಲಕ್ಷ್ಯವೇ ಕಾರಣವೆನ್ನಬಹುದು.
ಪಂಚಮಸಾಲಿಗಳ 2ಎ ಮೀಸಲಾತಿಯ ಬೇಡಿಕೆ ನ್ಯಾಯಯುತವಾಗಿದ್ದು, ಏಕೆಂದರೆ ಲಿಂಗಾಯತರಲ್ಲಿಯೇ ಸುಮಾರು 32 ಉಪಪಂಗಡಗಳು 2ಎ ಮೀಸಲಾತಿಯನ್ನು ಪಡೆದು ಸಾಕಷ್ಟು ಲಾಭವನ್ನು ಪಡೆದಿದ್ದಾರೆ. ಉದಾ: ಗಾಣಿಗ, ನೇಕಾರ, ಮಾಲಗಾರ, ಕುಂಬಾರ ಮತ್ತಿತರರು. 2ಎ ಮೀಸಲಾತಿಯಿಂದ ಶೇ. 15ರಷ್ಟು ಶಿಕ್ಷಣ ಉದ್ಯೋಗದಲ್ಲಿ ಮೀಸಲಾತಿ ಸಿಗುವುದರಿಂದ ಪಂಚಮಸಾಲಿ ಜನಾಂಗಕ್ಕೂ ಅನುಕೂಲವಾಗುತ್ತದೆ. ಈ ಕಾರಣದಿಂದ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಸಮುದಾಯವನ್ನು 2ಎಗೆ ಸೇರಿಸಬೇಕು ಎನ್ನುವ ಕೂಗು ನ್ಯಾಯಸಮ್ಮತವಾದದ್ದು. ಏಕೆಂದರೆ 2ಎ ಮೀಸಲಾತಿಯಿಂದ ವಂಚಿತವಾದ ಪಂಚಮಸಾಲಿಗಳು ಹಲವು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಉದಾ: ರಾಜ್ಯದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್., ಪಿ.ಎಸ್.ಐ., ಪಿ.ಡಿ.ಓ., ಎಸ್.ಡಿ.ಎ., ಎಫ್.ಡಿ.ಎ., ಹೀಗೆ ಅನೇಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದರೂ ಪಂಚಮಸಾಲಿ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿಲ್ಲ. ಈ ಪರೀಕ್ಷೆಗಳಲ್ಲಿ 2ಎ ಮೀಸಲಾತಿಯಲ್ಲಿ ಬರುವ ಅಭ್ಯರ್ಥಿಗಳಿಗಿಂತ 10 ರಿಂದ 15 ಅಂಕಗಳು ಹೆಚ್ಚಿಗೆ ಪಡೆದರೂ ಈ ಸಮಾಜದ ಯುವಕರು ಆಯ್ಕೆಯಾಗುತ್ತಿಲ್ಲ. ಹೀಗೆ ಅನೇಕ ಪಂಚಮಸಾಲಿ ಯುವಕರಿಗೆ ಈ ರೀತಿ ಅನ್ಯಾಯವಾಗುತ್ತಿದ್ದು, ಅಷ್ಟೇ ಅಲ್ಲಾ ರಾಜಕೀಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ, ತಾಲೂಕಾ ಪಂಚಾಯತ, ಜಿಲ್ಲಾ ಪಂಚಾಯತಗಳಲ್ಲಿ ಹೆಚ್ಚಿನ ಅವಕಾಶ ಸಿಗದೇ ವಂಚಿತರಾಗುತ್ತಿದ್ದು ಇದು ಕೂಡಾ ಪಂಚಮಸಾಲಿಗಳಿಗೆ ರಾಜಕೀಯವಾಗಿ ಹಿನ್ನೆಡೆಗೆ ಕಾರಣವಾಗಿದೆ. ಈಗಿನ ಶೇ.3ರಷ್ಟು ಇರುವ ಪ್ರವರ್ಗ-3ಬಿ ನಲ್ಲಿ ಪಂಚಮಸಾಲಿಗಳು ಇದ್ದಾರೆ. ಶೇ. 15ರಷ್ಟು ಮೀಸಲಾತಿ ಇರುವ 2ಎಗೆ ಸೇರಿದರೆ ಹೆಚ್ಚಿನ ಅನುಕೂಲ ಪಂಚಮಸಾಲಿಗಳಿಗೆ ಆಗುತ್ತದೆ. ಈ ಕಾರಣಕ್ಕಾಗಿಯೇ ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಪ್ರಾರಂಭವಾಗಿದ್ದು, ಈಗ ಈ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.
ಈ ಪಂಚಮಸಾಲಿ ಹೋರಾಟಕ್ಕೆ ಇತರೆ ಲಿಂಗಾಯತ ಸಮುದಾಯದ ಮಠಾಧೀಶರು ಬೆಂಬಲ ಕೊಟ್ಟಿದ್ದು ಈ ಹೋರಾಟಕ್ಕೆ ಆನೆಬಲ ಬಂದಿದೆ. ಇಷ್ಟೇ ಅಲ್ಲಾ ಪಂಚಮಸಾಲಿ ಉಭಯ ಪೀಠಗಳು ಈ ಹೋರಾಟದಲ್ಲಿ ಒಂದಾಗಿರುವುದು ಪಂಚಮಸಾಲಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಹರಿಹರದಿಂದ ಇನ್ನೋರ್ವ ಜಗದ್ಗುರು ಶ್ರೀ ವಚನಾನಂದ ಶ್ರೀಗಳು ಈ ಹೋರಾಟಕ್ಕೆ ಕೈ ಜೋಡಿಸಿದ್ದು ಪಂಚಮಸಾಲಿಗಳ ಹೋರಾಟದಲ್ಲಿ ಒಮ್ಮತ ಮೂಡಿದೆ ಎನ್ನುವ ಸಂದೇಶ ರವಾನೆಯಾಯಿತು. ಸುಮಾರು 38 ದಿನಗಳು 700ಕ್ಕೂ ಹೆಚ್ಚು ಕಿ.ಮೀ. ಪಾದಯಾತ್ರೆ. ಅದಕ್ಕೆ ಜನರು ನೀಡಿದ ಬೆಂಬಲ ಹೊಸ ದಾಖಲೆಗೆ ಕಾರಣವಾಯಿತು. ಅಷ್ಟೇ ಅಲ್ಲಾ ಬೆಂಗಳೂರಿನಲ್ಲಿ ನಡೆದ ಬೃಹತ್ ಐತಿಹಾಸಿಕ ಸಮಾವೇಶವು ಸರ್ಕಾರದ ಕಣ್ಣು ತೆರೆಸುವಲ್ಲಿ ಸಫಲವಾಯಿತು. ಅಷ್ಟೇ ಅಲ್ಲಾ ಪಂಚಮಸಾಲಿಗಳು ಒಂದಾಗಿ ನಿಂತರೆ ಸರ್ಕಾರವನ್ನೇ ಅಲುಗಾಡಿಸುವ ಶಕ್ತಿ ಈ ಸಮಾಜಕ್ಕೆ ಇದೆ ಎನ್ನುವ ಸಂದೇಶವು ಈ ಸಮಾವೇಶದ ಮೂಲಕ ಹೋಯಿತು. ಈ ಸಮಾವೇಶದ ಪರಿಣಾಮ ಪಂಚಮಸಾಲಿ ಜನರಲ್ಲಿ ಒಕ್ಕಟ್ಟನ್ನು ತರುವಲ್ಲಿ ಸಫಲವಾಯಿತು. ಪಂಚಮಸಾಲಿ ನಾಯಕರು ಈ ಸಮಾವೇಶದ ಮೂಲಕ ಸಮಾಜಕ್ಕಾಗಿ ನಾವು ಎಲ್ಲರೂ ಒಂದೇ ಎನ್ನುವ ಘೋಷಣೆ ಮಾಡಿ ಜನರಲ್ಲಿ ಹುರುಪು ತುಂಬಿದರು. ಆದರೆ ಸಮಾವೇಶದ ನಂತರ ಭಿನ್ನಸ್ವರ ಕೇಳಿ ಬಂದಿದ್ದು ಮಾತ್ರ ಪಂಚಮಸಾಲಿಗಳ ನೋವಿಗೆ ಕಾರಣವಾಯಿತು.
ಬಹುದೊಡ್ಡ ಸಮಾಜವಾದ ಪಂಚಮಸಾಲಿಗಳು 2ಎಗೆ ಸೇರಿದರೆ ನಮಗೆ ಅವಕಾಶ ಕಡಿಮೆ ಆಗುತ್ತವೆ ಎನ್ನುವ ಭಾವನೆ ಇತರೆ 2ಎ ಯಲ್ಲಿ ಇರುವ ಸಮಾಜಗಳ ಆತಂಕವಾಗಿದೆ. ಹೀಗಾಗಿ ಬಹಿರಂಗವಾಗಿ ವಿರೋಧಿಸದಿದ್ದರೂ ಸರ್ಕಾರದ ಒಳಗೆ ಪಂಚಮಸಾಲಿಗಳಿಗೆ 2ಎ ಮೀಸಲಾತಿ ಸಿಗದಂತೆ ವ್ಯವಸ್ಥಿತ ಪ್ರಯತ್ನಗಳು ನಡೆದಿವೆ. ಈ ಬಗ್ಗೆ ಪಂಚಮಸಾಲಿ ಹೋರಾಟಗಾರರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ.
ಒಟ್ಟಿನಲ್ಲಿ ಈಗ ಪಂಚಮಸಾಲಿಗಳು ಸಂಘಟಿತರಾಗಿದ್ದು ಸಮಾಜದ ಜನರು ಎಚ್ಚೆತ್ತುಗೊಂಡಿದ್ದಾರೆ. ಅದಕ್ಕೆ ಸಾಕ್ಷಿ ಮೊನ್ನೆ ಬೆಂಗಳೂರಿನಲ್ಲಿ ನಡೆದ ಬೃಹತ್ ಸಮಾವೇಶ. ಈಗಲಾದರೂ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರ್ಪನವರು ಈ ಸಮಾಜದ ಬಹುದಿನಗಳ ಬೇಡಿಕೆಗೆ ಸ್ಪಂದಿಸಬೇಕು. ಏಕೆಂದರೆ ಸಿ.ಎಂ. ಯಡಿಯೂರ್ಪನವರ ಮೇಲೆ ಪಂಚಮಸಾಲಿಗಳ ಋಣಭಾರವಿದೆ ಪಂಚಮಸಾಲಿಗಳ ಬೆಂಬಲದಿಂದ ಇವತ್ತು ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದಿದೆ. ಪಂಚಮಸಾಲಿ ಜನಾಂಗದ 16 ಶಾಸಕರು ಆಡಳಿತ ಪಕ್ಷದಲ್ಲಿ ಇದ್ದಾರೆ. ಹೀಗಾಗಿ ಇದೊಂದು ಮುಖ್ಯಮಂತ್ರಿ ಯಡಿಯೂರ್ಪನವರಿಗೆ ಒಳ್ಳೆಯ ಅವಕಾಶವಿದೆ. ಈ ಕಾರಣಕ್ಕಾಗಿ ರೈತರನ್ನು ಮತ್ತು ಕೂಲಿಕಾರ್ಮಿಕರನ್ನು, ಬಡವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಈ ಹಿಂದುಳಿದ ಪಂಚಮಸಾಲಿಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಗಾಗಿ ಸರ್ಕಾರವು ಶೀಘ್ರವಾಗಿ ಮತ್ತು ಸೂಕ್ತ ತೀರ್ಮಾನ ಕೈಗೊಂಡು ಪಂಚಮಸಾಲಿ ಸಮಾಜವನ್ನು 2ಎ ಪ್ರವರ್ಗಕ್ಕೆ ಸೇರಿಸಬೇಕು. ಆ ಮೂಲಕ ಸಿ.ಎಂ. ಯಡಿಯೂರ್ಪನವರು ಈ ಬೃಹತ್ ಸಮಾಜದ ಜನರ ಪ್ರೀತಿ ಅಭಿಮಾನಕ್ಕೆ ಪಾತ್ರರಾಗಬೇಕು ಎನ್ನುವುದು 90 ಲಕ್ಷ ಪಂಚಮಸಾಲಿಗಳ ಆಶಯವಾಗಿದೆ.
- ಡಾ. ಸತೀಶ ಕೆ. ಪಾಟೀಲ
ಚಡಚಣ (ವಿಜಯಪುರ)
- * * * -