ವೈದ್ಯರಿಲ್ಲದೆ ಅನಾಥವಾದ ಹೆರಿಗೆ ವಿಭಾಗ ಮಹಿಳೆಯರ ಪರದಾಟ
ಶೀಘ್ರ ವೈದ್ಯರ ನೇಮಕಾತಿಗೆ ನೊಂದ ಜನತೆಯಿಂದ ಸರ್ಕಾರಕ್ಕೆ ಮತ್ತು ಶಾಸಕ ಸಿದ್ದು ಸವದಿ ಅವರಿಗೆ ಒತ್ತಾಯ.
ಹನಮಂತ ಎಚ್ ನಾವಿ
ಮಹಾಲಿಂಗಪುರ : ಪಟ್ಟಣ ಸಮುದಾಯ ಆರೋಗ್ಯ ಕೇಂದ್ರ ವಿವಿಧ ರೋಗಿಗಳಿಗೆ ಎಲ್ಲ ಸೌಲಭ್ಯಗಳು ಮತ್ತು ಪೂರಕ ಸಿಬ್ಬಂದಿಗಳನ್ನು ಹೊಂದಿ ಹೆರಿಗೆ ವಿಭಾಗದಲ್ಲಿ ಮಾತ್ರವೇ ಸಮ್ಮಂಧಿಸಿದ ವೈದ್ಯರಿಲ್ಲದೆ ಅನಾಥವಾಗಿದೆ ಮತ್ತು ಹೆರಿಗೆಗೆ ಬರುವ ಮಹಿಳೆಯರ ಪರದಾಟವಂತೂ ಹೇಳ ತೀರದು.
ಕಳೆದ ಸುಮಾರು 5 ತಿಂಗಳಾಚೆ, ಹೆರಿಗೆ ಮಹಿಳಾ ತಜ್ಞ ವೈದ್ಯರೊಬ್ಬರು ಉತ್ತಮ ಕಾರ್ಯ ನಿರ್ವಹಿಸಿ ಪ್ರತಿ ತಿಂಗಳಿಗೆ 25 ರಿಂದ 30 ಹೆರಿಗೆಗಳನ್ನು ಮಾಡಿಸಿಕ್ಕೊಂಡು ಬಡ ಕುಟುಂಬಗಳಿಗೆ ಆಸರೆಯಾಗಿದ್ದರು.ಅವರಿಲ್ಲದ ಹೆರಿಗೆ ವಿಭಾಗ ಬಿಕೋ ಎನ್ನುತ್ತಿದೆ.
ಕಳೆದ ಅವಧಿ ಮತ್ತು ಈಗ ಸಿದ್ದು ಸವದಿ ಭಾಜಪ ಶಾಸಕರಾಗಿದ್ದಾರೆ. ಚುನಾವಣಾ ಪೂರ್ವದಿಂದಲೂ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದೆ ಇದೆ. ಇದನ್ನು, ಸರಿಯಾಗಿ ನಿಭಾಯಿಸಲು ಶಾಸಕರೇ ಅಸಮರ್ಥರಾದರೇ ಎಂಬ ಪ್ರಶ್ನೆಗಳು ಜನತೆಯಲ್ಲಿ ಉದ್ಭವವಾಗಿವೆ.
ವೈದ್ಯರ ಅಳಲು: ಅವರ ವರ್ಗಾವಣೆ ನಂತರ ಕಾಯಂ ಪ್ರಸವ ತಜ್ಞರಿಲ್ಲದೆ ತಿಂಗಳಿಗೆ ಒಂದೋ ಎರಡೋ ಹೆರಿಗೆಗಳು ಮಾತ್ರ ಆಗುತ್ತಿವೆ. ಅದು ಸ್ಥಳೀಯ ವೈದ್ಯರಿಗೆ ಮನವಿ ಮಾಡಿಕ್ಕೊಂಡು ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯ ಸಂಜು ತೇಲಿ ತಮ್ಮ ಅಳಲು ತೋಡಿಕ್ಕೊಂಡು ಈ ವಿಚಾರವಾಗಿ ಮೂರು ತಿಂಗಳ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಕಾಯಂ ವೈದ್ಯರನ್ನು ನೇಮಕ ಮಾಡಲು ಮನವಿ ಸಹ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಆರೋಗ್ಯಕರ ಕಾರ್ಯ: ಇದು ಕಳೆದೆರಡು ವರ್ಷಗಳ ಹಿಂದೆಯೂ ಇದೆ ರೀತಿಯ ಸಮಸ್ಯೆ ತಲೆದೋರಿತ್ತು. ಇದನ್ನರಿತು ಔಷಧ ವಿಭಾಗ ದುರುಸ್ಥಿ, ರಕ್ತ ಸಂಗ್ರಹಗಾರ ಶೀತಲ ಘಟಕಕ್ಕೂ ಒತ್ತಾಯಿಸಿ ಉದಯಕಾಲ ದಿನ ಪತ್ರಿಕೆ ಸರಣಿ ಸುದ್ದಿಗಳನ್ನು ಪ್ರಕಟಿಸಿ ಆರೋಗ್ಯ ಇಲಾಖೆ ಕಣ್ಣು ತೆರೆಸಿತ್ತು. ಇದರ ಫಲ ಶೃತಿಯಾಗಿ ಕಾಯಂ ಮಹಿಳಾ ವೈದ್ಯೆ ನೇಮಕ, ಔಷಧ ವಿಭಾಗ ದುರುಸ್ಥಿ ಕಾರ್ಯ ಕೈಗೆತ್ತಿಕೊಂಡು ಇಲಾಖೆ ಆರೋಗ್ಯಕರವಾಗಿ ಕಾರ್ಯ ನಿರ್ವಹಿಸಿತು.
ಉತ್ತಮ ಆರೋಗ್ಯ ಸಾಂವಿಧಾನಿಕ ಹಕ್ಕು: ಬಡವರಿಗೆ, ಮಧ್ಯಮಸ್ಥರಿಗೆ, ಅನಾಥರಿಗೆ ಅನುಕೂಲವಾಗಲಿ ಎಂದೆ ಸರ್ಕಾರ ಉಚಿತ ಸೌಲಭ್ಯಗಳನ್ನು ನೀಡಿರುತ್ತದೆ.ಅದರಲ್ಲಿ ಹೆರಿಗೆ ವಿಭಾಗ ಮಹತ್ವದ್ದು. ಆರ್ಥಿಕ ಅಸಮಾನತೆಯ ಈ ಕಾಲದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಆಗುವ ಹೆರಿಗೆಗಳು ದುಬಾರಿ ವೆಚ್ಚ ಉಳ್ಳವಾಗಿವೆ.ಇದನ್ನು ಭರಿಸಲು ಬಡವರು ಹೆಣಗಾಡಿ ಸಾಲದು ಸುಳಿಗೂ ಸಿಲುಕಬೇಕಾಗುತ್ತದೆ.ಸಮಾಜದಲ್ಲಿ ಇಂತಹ ನೂರಾರು ಉದಾಹರಣೆಗಳಿವೆ. ಉತ್ತಮ ಆರೋಗ್ಯ ಎಲ್ಲರ ಸಾಂವಿಧಾನಿಕ ಹಕ್ಕಾಗಿದೆ.
ಮಹಿಳೆಯರ ವೇದನೆ : ಪಟ್ಟಣದ ಸುತ್ತಮುತ್ತ ಇರುವ ಸುಮಾರು 20 ಹಳ್ಳಿಗಳಿಂದ ಆರೋಗ್ಯ ಅರಸಿ ಜನ ಬರುತ್ತಾರೆ. ಹೆರಿಗೆಗೆ ಆಗಮಿಸುವ ಮಹಿಳೆಯರ ಪ್ರಸವ ವೇದನೆಯಂತೂ ನೋಡುಗರ ಕರುಳು ಕಿತ್ತು ಬಂದಂತಾಗುತ್ತದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದಿದ್ದರೆ ನೀವೇ ಊಹಿಸಿ ಆ ಮಹಿಳೆಯ ಕಷ್ಟ. ಈ ಕಷ್ಟದ ನೋವನ್ನು ಅಧಿಕಾರಿಗಳು ಅರಿತು ನುರಿತ ಹೆರಿಗೆ ವೈದ್ಯರ ನೇಮಕಾತಿಗೆ ಸರ್ಕಾರಕ್ಕೆ ಒತ್ತಾಯಿಸಬೇಕು.
ಆರೋಗ್ಯ ಇಲಾಖೆ ಬಡವರ ಬಗ್ಗೆ ಇನ್ನಷ್ಟು ಕಾಳಜಿ ವಹಿಸಿ ಕೆಲಸ ಮಾಡಿದರೆ ಬಡ ಪರಿವಾರಗಳು ನೆಮ್ಮದಿಯ ಜೀವನ ಸಾಗಿಸುವಂತವರಾಗುತ್ತಾರೆ. ಆದ್ದರಿಂದ ಮಹಾಲಿಂಗಪುರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಯಂ ಹೆರಿಗೆ ವೈದ್ಯರ ನೇಮಕಾತಿ ಅತಿ ಶೀಘ್ರದಲ್ಲಿ ಮಾಡಲು ನೂತನ ಕಾಂಗ್ರೆಸ್ ಸರ್ಕಾರ ಮನಸು ಮಾಡಬೇಕಾಗಿದೆ ಮತ್ತು ತೇರದಾಳ ಮತ ಕ್ಷೇತ್ರದ ಭಾಜಪ ಶಾಸಕ ಸಿದ್ದು ಸವದಿಯವರಿಗೆ ನೊಂದ ಜನತೆಯ ಒತ್ತಾಯವಾಗಿದೆ.