ಬಳ್ಳಾರಿ

ಕೆಲಸದ ಜೊತೆಗೆ ಸಾಂಸ್ಕೃತಿಕ ಸಂಬಂಧವನ್ನು ನಿರಂತರವಾಗಿ ಉಳಿಸಿಕೊಳ್ಳುಬೇಕು: ವೀರೇಶ

ಕೆಲಸದ ಜೊತೆಗೆ ಸಾಂಸ್ಕೃತಿಕ ಸಂಬಂಧವನ್ನು ನಿರಂತರವಾಗಿ ಉಳಿಸಿಕೊಳ್ಳುಬೇಕು: ವೀರೇಶ

ಬಳ್ಳಾರಿ 27: ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಉಡಸಲಮ್ಮ ದೇವಸ್ಥಾನದ ಆವರಣದಲ್ಲಿ ನೇತ್ರ ಕಲಾ ಸಂಘ ಸಿರುಗುಪ್ಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗ್ರಾಮೀಣ ಸಾಂಸ್ಕೃತಿಕ ಸಂಗಮ 2024"ರ ಕಾರ್ಯಕ್ರಮವನ್ನು ಡೋಲಾಕ್ ವಾದ್ಯ ನುಡಿಸುವ ಮೂಲಕ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಜಿಲ್ಲಾಧ್ಯಕ್ಷರಾದ ಶಂಕರಬಂಡೆ ಯಲ್ಲನಗೌಡ ಉದ್ಘಾಟಿಸಿದರು. ಇದೇ ವೇಳೆಯಲ್ಲಿ  ಮಾತನಾಡಿದ ಅವರು ಜನಪದ ಕಲೆ, ನಾಟಕ ಕಲೆ ಜೀವಂತಿಕೆಯಿಂದ ಉಳಿದಿವೆ, ಎಂಬುದಕ್ಕೆ ಇವತ್ತಿನ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಜನಗಳೇ ಸಾಕ್ಷಿಯಾಗಿದೆ.  

ಇತ್ತೀಚಿನ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಮನುಷ್ಯ ತನ್ನ ಅಸ್ತಿತ್ವವನ್ನೇ ಒತ್ತೆಯಾಗಿಸಿ ಮಾನವೀಯ ಸಂಬಂಧಗಳನ್ನು ಮರೆತು ಒಂಟಿಯಾಗಿ ಬದುಕುತ್ತಿದ್ದಾನೆ. ಇಷ್ಟೆಲ್ಲ ಕಾರಣಕ್ಕೆ ಆಸೆ. ಆಸೆಯೇ ದುಃಖಕ್ಕೆ ಮೂಲ ಎನ್ನುವ ಗಾದೆಯಂತೆ ಮನುಷ್ಯನ ಮನಸ್ಸಿಗೆ ನೆಮ್ಮದಿ ಇಲ್ಲದೆ ರೋಗ ರುಜುನಗಳಿಗೆ ತುತ್ತಾಗಿ ನರಳುತ್ತಿದ್ದಾರೆ. ಈಗಲೂ ನಮ್ಮ ಹಳ್ಳಿಯ ಜನರು ಇರುವಷ್ಟರಲ್ಲಿ ನೆಮ್ಮದಿ ಜೀವನ ಮಾಡುವುದನ್ನು ಕಾಣುತ್ತೇವೆ. ಏಕೆಂದರೆ ಹಳ್ಳಿಯ ಸೊಗಡಿನಲ್ಲಿ ಹೊಸ ಚೈತನ್ಯ ಜೊತೆಗೆ ಬಯಲಾಟ ನಾಟಕ ಜನಪದ ಸಂಗೀತ ಕೋಲಾಟ ಡೊಳ್ಳು ಕುಣಿತ ವಿಶೇಷವಾಗಿ ಮಹಿಳೆಯರು ಅಂತಿ ಪದ,ಸೋಬಾನ ಪದ,ಬೀಸುವ ಪದ,ಗೀಗಿ ಪದ,ಸುಗ್ಗಿ ಹಾಡು,ಗೌರಿ ಮಕ್ಕಳ ಪದ, ಬಜನಾ ಪದಗಳಂತ ಕಲೆಗಳನ್ನ ಉಳಿಸಿ ಬೆಳೆಸಿ ಸಾಂಸ್ಕೃತಿಕ ನೆಲೆಗಟ್ಟನ್ನು ಗಟ್ಟಿಗೊಳಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಹೇಳಿದರು. ಇತ್ತೀಚಿಗೆ ಬಯಲಾಟ ಕಲೆ, ಅಳಿವಿನ ಹಂಚಿನಲ್ಲಿದೆ ಎಂದು ವೇದಿಕೆ ಮೇಲೆ ಭಾಷಣ ಮಾಡುವವರೇ ಹೆಚ್ಚು ಆದರೆ ಅದು ಸುಳ್ಳು ಬಯಲಾಟ ಸದಾ ಹರಿಯುವ ನೀರಿನಂತೆ ವರ್ಷದ 365 ದಿನಗಳಲ್ಲಿ 450ಕ್ಕೂ ಹೆಚ್ಚು ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಪ್ರದರ್ಶನ ಗೊಳ್ಳುತ್ತವೆ ಎಂಥಾ ಶತ್ರುವನ್ನಾದರೂ ಮಿತ್ರರನ್ನಾಗಿಸುವ ಕಲೆ ಅಂತ ಯಾವುದಾದರೂ ಇದ್ದರೆ ಅದು ಬಯಲಾಟ ಪ್ರಮುಖವಾಗಿದೆ. 

ಈ ಬಯಲಾಟಕ್ಕಿರುವ ಶಕ್ತಿಯೇ ಅಂತದ್ದು ಎಂದು ಬಯಲಾಟ ಅಕಾಡೆಮಿ ಮಾಜಿ ಸದಸ್ಯರಾದ ಮುದ್ದಟನೂರು ಹೆಚ್ ತಿಪ್ಪೇಸ್ವಾಮಿಯವರು ಹೇಳಿದರು. ನೇತ್ರ ಕಲಾ ಸಂಘದ ಕಾರ್ಯದರ್ಶಿಯಾದ ವೀರೇಶ್ ದಳವಾಯಿ ಮಾತನಾಡುತ್ತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರು ಸಂಘ ಸಂಸ್ಥೆಗಳಿಗೆ ಧನಸಹಾಯ ಮೂಲಕ ನಾಡಿನ ಕಲೆ ಸಂಸ್ಕೃತಿ ಹಾಗೂ ಸಾಹಿತ್ಯ ಸಂಗೀತ ನಾಟಕದಂತಹ ಸಾಂಸ್ಕೃತಿಕ ವಾತಾವರಣವನ್ನ ನಿರ್ಮಿಸಿ ಎಲೆಮರೆಕಾಯಿಯಂತಿರುವ ಕಲಾವಿದರನ್ನು ಗುರುತಿಸಿ ಒಂದು ವೇದಿಕೆಗೆ ತರುವ ಕೆಲಸಕ್ಕೆ ಸಂಘ-ಸಂಸ್ಥೆಗಳಿಂದ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಹಳ್ಳಿ ಹಳ್ಳಿಗಳಿಗೂ ನಮ್ಮನ್ನು ಗುರುತಿಸುವ ಕೆಲಸದ ಜೊತೆಗೆ ಸಾಂಸ್ಕೃತಿಕ ಸಂಬಂಧವನ್ನು ನಿರಂತರ ಉಳಿಸಿಕೊಳ್ಳುವಂತೆ ಮಾಡುತ್ತದೆ ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾದನಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕರಿಬ್ಯಾಡರ ಕರಿಯಪ್ಪ ವಹಿಸಿದರೆ ಮುಖ್ಯತಿಗಳಾಗಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಕರಿಬಸಮ್ಮ, ಮುಖಂಡರಾದ ಕೆ. ಕರಿಬಸವನಗೌಡ, ಗಾಳಿ ಕರಿಬಸಪ್ಪ, ದಾಸರ ನಾಗರಾಜ, ಬೂದುಗುಂಪ ವೀರೇಶ, ಹಿರಿಯ ಕಲಾವಿದರಾದ ಗಾಳಿ ಮಲ್ಲಯ್ಯ, ಹಿರೇಓಣಿ ವಿರುಪಣ್ಣ, ಏಳು ರೊಟ್ಟಿ ಓಬಳೇಶ, ಅಂಕಾಳಿ ಈರಯ್ಯ ಹಾಗೂ ತೊಗಲಗುಂಬೆ ಕಲಾವಿದರಾದ ಸುಬ್ಬಣ್ಣ ಉಪಸ್ಥಿತರಿದ್ದರು. ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಸಂಗೀತವನ್ನು ಹೆಚ್‌.ಜಿ. ಸುಂಕಪ್ಪ ತಂಡ ಯರಗುಡಿ. ಸುಗಮ ಸಂಗೀತ ಎಚ್‌. ತಿಮ್ಮಪ್ಪ ತಂಡ ಬಿ.ಎಂ. ಸೂಗೂರು. ವಚನ ಸಂಗೀತ ಜಿ. ದೊಡ್ಡ ಹುಸೇನಪ್ಪ ಅರಳಿಗಾನೂರು. ರಂಗಗೀತೆ ಯರಿ ನಾಗೇಶ ಬಾದನಹಟ್ಟಿ ಮತ್ತು ಹೆಚ್‌. ತಿಪ್ಪೇಸ್ವಾಮಿ ಮುದ್ದಟನೂರು ತಂಡದವರಿಂದ ಪಾಂಡು ವಿಜಯ ಬಯಲಾಟ ಪ್ರದರ್ಶನ ಕಿಕ್ಕಿರಿದು ಸೇರಿದ ಜನ ಸಮೂಹವನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು. ಕಾರ್ಯಕ್ರಮದ ನಿರೂಪಣೆ ಹುಸೇನಪ್ಪ ನೆರವೇರಿಸಿದರು. 


ಸುದ್ದಿ ಓದಿ