ಎಲ್ಲಾ ಸರ್ಕಾರಗಳು ಕಾರ್ಮಿಕರ ಹಿತವನ್ನು ಬಲಿಕೊಟ್ಟು ಉದ್ಯಮಪತಿಗಳ ಸೇವೆ ಮಾಡುತ್ತಾ ಬಂದಿವೆ
ಬಳ್ಳಾರಿ10: ಇಂದು ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಪ್ರಥಮ ಆಶಾ ಕಾರ್ಯಕರ್ತೆಯರ ಸಮ್ಮೇಳನ ಗಾಂಧಿ ಭವನದಲ್ಲಿ ನಡೆಯಿತು. ಐಯುಟಿಯುಸಿ ಜಿಲ್ಲಾ ಅಧ್ಯಕ್ಷರು ಎ.ದೇವದಾಸ್ ಮಾತನಾಡುತ್ತಾ"ದೇಶವನ್ನಾಳಿದ ಎಲ್ಲಾ ಸರ್ಕಾರಗಳು ಕಾರ್ಮಿಕರ ಹಿತವನ್ನು ಬಲಿಕೊಟ್ಟು ದೊಡ್ಡ ದೊಡ್ಡ ಉದ್ಯಮಪತಿಗಳ ಸೇವೆ ಮಾಡುತ್ತಾ ಬಂದಿವೆ. ಹೋರಾಟದಿಂದ ಗಳಿಸಿಕೊಂಡ ಎಲ್ಲಾ ಕಾರ್ಮಿಕ ಹಕ್ಕುಗಳನ್ನು ಒಂದೊಂದಾಗಿ ಕಿತ್ತುಕೊಳ್ಳುತ್ತಾ, ಕಾರ್ಮಿಕರ ಹಾಗೂ ದುಡಿಯುವ ಜನರ ಬದುಕನ್ನು ಮೂರಾಬಟ್ಟೆ ಮಾಡಿವೆ. 1991ರಲ್ಲಿ ಅಂದಿನ ಕೇಂದ್ರ ಸರ್ಕಾರ ಜಾಗತೀಕರಣ ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳನ್ನು ಜಾರಿಗೆ ತಂದು ಗುತ್ತಿಗೆ ಹೊರಗುತ್ತಿಗೆ ಪದ್ಧತಿಯನ್ನು ಕಾನೂನುನಾತ್ಮಕಗೊಳಿಸಿತು.
ಇದೇ ನೀತಿಗಳನ್ನು ಇಂದಿನ ಕೇಂದ್ರ ಸರ್ಕಾರ ಮುಂದುವರೆಸಿ, ಮತ್ತಷ್ಟು ವೇಗವಾಗಿ ಜಾರಿಗೆ ತರುತ್ತಿದೆ .’ ಕಾರ್ಯಕರ್ತೆಯರು’ ಎಂದು ನಾಮಕರಣ ಮಾಡುತ್ತಾ, ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ನೌಕರರನ್ನು ನ್ಯಾಯ ಬದ್ಧ ಕಾರ್ಮಿಕ ಹಕ್ಕುಗಳಿಂದ ಎಲ್ಲಾ ಸರ್ಕಾರಗಳು ವಂಚಿತರನ್ನಾಗಿ ಮಾಡಿವೆ." ಎಂದರು ಮುಂದುವರೆಯುತ್ತಾ "ಇಂತಹ ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯರು ಸೇರಿದಂತೆ ಇಡೀ ಕಾರ್ಮಿಕ ವರ್ಗ ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ಕಟ್ಟುತ್ತಾ, ಬಂಡವಾಳಶಾಹಿ ಪರ ನೀತಿಗಳ ವಿರುದ್ಧವೂ ಧ್ವನಿಯೆತ್ತಬೇಕಾಗಿದೆ. "ಎಂದರು
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಎ.ಶಾಂತಾ ಅವರು ಮಾತನಾಡುತ್ತಾ "ಆಶಾ ಕಾರ್ಯಕರ್ತೆಯರಿಗೆ ಏನೇ ಬಿರುದು, ಸನ್ಮಾನ ಲಭಿಸಿದರೂ, ಅವರ ಜೀವನ ನೀರೀಕ್ಷಿತ ಮಟ್ಟದಲ್ಲಿ ಸುಧಾರಣೆಯಾಗಿಲ್ಲ. ಅತ್ಯಂತ ಕನಿಷ್ಟ ವೇತನಕ್ಕೆ ಹಗಲಿರುಳು ದುಡಿಯುತ್ತಿದ್ದಾರೆ. ಪ್ರೋತ್ಸಾಹ ಧನದ ಹೆಸರಲ್ಲಿ ಅವರ ಶೋಷಣೆ ನಿತ್ಯ ನಿರಂತರವಾಗಿ ನಡೆಯುತ್ತಿದೆ. 10-15 ವರ್ಷಗಳಿಂದ ದುಡಿಯುತ್ತಿದ್ದರೂ, ಸರ್ಕಾರ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ತಯಾರಿಲ್ಲ, .ಕನಿಷ್ಟ ಪಕ್ಷ ಕಾರ್ಮಿಕರೆಂದೂ ಪರಿಗಣಿಸಲು ಸಹ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಹಾಗಾಗಿ ಅವರು ಜೀವನ ಪೂರ್ತಿ ಅಭದ್ರತೆಯಲ್ಲಿ ಕಳೆಯುವಂತಾಗಿದೆ. ಇದು ಕೇಂದ್ರ ರಾಜ್ಯ ಸರ್ಕಾರಗಳ ಕಡು ಕಾರ್ಮಿಕ ವಿರೋಧಿ ನೀತಿಯಾಗಿದೆ"ಎಂದರು.