ಅಕ್ಕ ಮಹಾದೇವಿ ಜಯಂತಿ ಕಾರ್ಯಕ್ರಮ ವೀರಶೈವ ಲಿಂಗಾಯತರು ಪಂಚಮಸಾಲಿ ಸಮಾಜ ಸಂಘಟನೆಗೆ ಮುಂದಾಗಲಿ: ಬಿ.ಸಿ. ಉಮಾಪತಿ
ಅಕ್ಕ ಮಹಾದೇವಿ ಜಯಂತಿ ಕಾರ್ಯಕ್ರಮ ವೀರಶೈವ ಲಿಂಗಾಯತರು ಪಂಚಮಸಾಲಿ ಸಮಾಜ ಸಂಘಟನೆಗೆ ಮುಂದಾಗಲಿ: ಬಿ.ಸಿ. ಉಮಾಪತಿ
ದಾವಣಗೆರೆ 21: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದವರು ಪರಸ್ಪರ ಪ್ರೀತಿ, ಸಹಕಾರ ಬೆಳಸಿಕೊಂಡು, ಸಮಾಜ ಸಂಘಟನೆಗೆ ಮುಂದಾಗಬೇಕು, ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ, ಪಂಚಮಸಾಲಿ ಜಗದ್ಗುರು ಪೀಠದ ಪ್ರಧಾನ ಧರ್ಮದರ್ಶಿ ಶ್ರೀ ಬಿ.ಸಿ. ಉಮಾಪತಿ ಕರೆನೀಡಿದರು. ನಗರದ ಪಿ.ಜೆ. ಬಡಾವಣೆಯಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಕಚೇರಿಯಲ್ಲಿ ದಾವಣಗೆರೆ ಗ್ರಾಮಾಂತರ ಘಟಕದಿಂದ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಸಮಾಜದಲ್ಲಿನ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಹಿಂದೆ ವೀರಶೈವ ಲಿಂಗಾಯತ ಸಮಾಜದವರೇ ಜಮೀನ್ದಾರರಾಗಿದ್ದರು, ಈಗಲೂ ನಮ್ಮವರು ಅನುಕೂಲಸ್ಥರು ಎಂಬ ಭಾವನೆಯಿದೆ. ಉತ್ತರ ಕರ್ನಾಟಕದಲ್ಲಿ ಪಂಚಮಸಾಲಿ ಸಮಾಜದ ಜನತೆ ಈಗ ತೀರಾ ಬಡತನದಲ್ಲಿದ್ದಾರೆ. ಸರ್ಕಾರದ ಸೌಲಭ್ಯ ವಂಚಿತರಾಗಿದ್ದಾರೆ. ವಿದ್ಯಾವಂತರೂ ಮೀಸಲಾತಿ ವಂಚಿತರಾಗಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ರಾಜ್ಯ ಘಟಕದಿಂದ ಒಬಿಸಿ ಮೀಸಲಾತಿ ಕೋರಿ ಮನವಿ ಸಲ್ಲಿಸಿದ್ದೆವು. ಪಂಚಮಸಾಲಿ ಸಮಾಜ ಕರ್ನಾಟಕದ ಹಿಂದುಳಿದ ಜಾತಿ ಪಟ್ಟಿಯಲ್ಲಿ ಇರಲಿಲ್ಲ. ಯಡಿಯೂರ್ಪ ಅವರು ಮುಖ್ಯಮಂತ್ರಿಯಿದ್ದಾಗ 3ಬಿ ಗೆ ಸೇರಿಸಿದರು. ಹಿಂದಿನ ಸರ್ಕಾರ ಮಾಡಿದ 2ಡಿ ಈಗ ನ್ಯಾಯಲಯದಲ್ಲಿದ್ದು, 3ಬಿ ಮೀಸಲಾತಿ ಅಸ್ತಿತ್ವದಲ್ಲಿದ್ದು, ಇದರ ಪ್ರಯೋಜನ ತಮ್ಮ ತಾಲ್ಲೂಕಿನ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ 3ಬಿ ಮೀಸಲಾತಿ ಪಡೆದುಕೊಳ್ಳಬೇಕು, ಎಂದು ಅವರು ಕರೆ ನೀಡಿದರು. ಲಿಂಗಾಯತ ಸಮಾಜದ ಗಾಣಿಗ, ಬಣಜಿಗ, ಹಡಪದ, ಕುಂಬಾರ ಲಿಂಗಾಯತರು, ಲಿಂಗಾಯತನೆಂದು ಬರೆಸದೇ 2ಎ ಮೀಸಲಾತಿ ಪಡೆಯುತ್ತಿದ್ದಾರೆ. ಪಂಚಮಸಾಲಿ ಸಮಾಜ ಬಾಂಧವರು ಒಗ್ಗಟ್ಟಾಗಬೇಕು. ಪರಸ್ಪರ ಪ್ರೀತಿ, ವಿಶ್ವಾಸ ಸಹಕಾರ ಬೆಳಸಿಕೊಂಡು ಸಮಾಜ ಕಟ್ಡಬೇಕು ಎಂದು ಅವರು ಕರೆನೀಡಿದರು. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ದಾವಣಗೆರೆ ಗ್ರಾಮಾಂತರ ಘಟಕದ ಅಧ್ಯಕ್ಷ ಜಯಣ್ಣ ಬಿಸಿಲೇರಿ, ಮಾತನಾಡಿ ಅಕ್ಕ ಮಹಾದೇವಿ ಜೀವನ ಸಮುದ್ರದಂತೆ ಅಧ್ಯಯನವಿಲ್ಲದೇ ಅವರ ಬಗ್ಗೆ ಮಾತನಾಡಲು ಸಾಧ್ಯವೇಯಿಲ್ಲ. ಅಕ್ಕಮಹಾದೇವಿ ಕುರಿತು ಹಲವು ಪುಸ್ತಕ, ಸಂಶೋಧನೆ ನಡೆದಿವೆ. ಅವರ ಜೀವನ ಎಲ್ಲಾ ಮಹಿಳೆಯರಿಗೆ ಸ್ಪೂರ್ತಿಯಾಗಿದೆ. ಜಿಲ್ಲಾ ಘಟಕ, ಮಹಿಳಾ ಘಟಕಗಳ ಸಹಕಾರದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಪಂಚಮಸಾಲಿ ಸಮಾಜದ ನಿಕಟಪೂರ್ವ ಅಧ್ಯಕ್ಷ ಕಿತ್ತೂರು ವೀರಣ್ಣ, ಸಮಾಜದ ಸಂಘಟನೆ ಮತ್ತು ಯಶಸ್ಸಿಗಾಗಿ ಜಿಲ್ಲಾ ಘಟಕ ಶ್ರಮಿಸುತ್ತಿದೆ. ಸಮಾಜದ ಸಣ್ಣಪುಟ್ಟ ವ್ಯತ್ಯಾಸ ಬದಿಗಿಟ್ಟು ಸಂಘಟನೆಯಾಗಬೇಕು ಎಂದರು.ಈಗಿನ ಮಹಿಳೆಯರಿಗೆ ಮತ್ತು ಪುರುಷರಿಗೆ, ಮಕ್ಕಳಿಗೆ ವೀರ ವೈರಾಗ್ಯ ನಿಧಿ ಶಿವಶರಣೆ ಅಕ್ಕಮಹಾದೇವಿಯವರ ವಚನಗಳು ಸ್ಪೂರ್ತಿದಾಯಕವಾಗಿರಲೆಂದು ಹಾಗೂ ನಾವುಗಳು ಅವರ ಆಧ್ಯಾತ್ಮಿಕ ಜೀವನದ ಬಗ್ಗೆ ಜನರಲ್ಲಿ ಮೂಡಿಸಬೇಕು ಪಂಚಮಸಾಲಿ ವಧು ವರರ ಮಾಹಿತಿ ಕೇಂದ್ರದ ನಿರ್ದೇಶಕರಾದ ಮಂಜುನಾಥ್ ಪುರವಂತರ್ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಾ ಪಾಟೀಲ್, ಮಹಿಳೆಯರಿಗೆ ಅಕ್ಕ ಮಹಾದೇವಿ ಜೀವನ ಸಂದೇಶವಾಗಬೇಕು. ಮಹಿಳಾ ದಿನಾಚರಣೆಯೊಂದಿಗೇ ಅಕ್ಕ ಮಹಾದೇವಿ ಜಯಂತಿ ಆಚರಿಸುವಂತಾಗಬೇಕು. ಮುಂದಿನ ದಿನದಲ್ಲಿ ಅಕ್ಕ ಮಹದೇವಿಯ ಜೀವನ ರೂಪಕ ಪ್ರದರ್ಶಿಸಲು ಯೋಜಿಸಲಾಗಿದೆ, ಎಂದರು. ಅಕ್ಕ ಮಹಾದೇವಿ ಭಾವಚತಕ್ಕೆ ಪುಷ್ಪಾರ್ಚನೆ ಮಾಡಿ, ಅಕ್ಕ ಮಹಾದೇವಿಯ ವಚನಗಳನ್ನು ವಾಚಿಸಲಾಯಿತು. ಜಗದೀಶ್ ಸ್ವಾಗತಿಸಿದರು. ಕಿತ್ತೂರು ಚನ್ನಮ್ಮ ಬಳಗದಿಂದ ಪ್ರಾರ್ಥಿಸಿದರು, ಕಾರ್ಯದರ್ಶಿ ಕಾಶೀಪುರ ವಿಶ್ವನಾಥ ನಿರೂಪಿಸಿ ವಂದಿಸಿದರು. ಈ ಸಂಧರ್ಭದಲ್ಲಿ ಬಾಡಾ ನಾಗರಾಜಪ್ಪ, ಕೈದಾಳ್ ರುದ್ರಸ್ವಾಮಿ, ಮಾಯಕೊಂಡ ರುದ್ರೇಶ್, ಅಣಜಿ ಸಂಗನಬಸಪ್ಪ, ಕಾಶೀಪುರ ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷರಾದ ಎಂ. ದೊಡ್ಡಪ್ಪ ವೀಣಾ ನಟರಾಜ್ ಬೆಳ್ಳೂಡಿ, ಮೀನಾ ಪ್ರಸಾದ್ ಅಣಪುರ್, ಉಮಾ ಸೋಮಶೇಖರ ಕಿಚಡಿ, ಬಣಕಾರ ನಾಗರಾಜ್ ಬಿಸಲೇರಿ, ಮತ್ತಿತರರು ಇದ್ದರು.