ಮೂಡಲಗಿ

ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ಕಟಕಭಾವಿ

ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ಕಟಕಭಾವಿ

ಮೂಡಲಗಿ 18: ಜಾತೀಯತೆ, ಮೌಢ್ಯ ಕಂದಾಚಾರಗಳನ್ನು ಸಮಾಜದಲ್ಲಿ ಪ್ರಚಲಿತವಾಗಿದ್ದು, ಅಸಮಾನತೆ ತೊಲಗಿ ಎಲ್ಲರೂ ಗೌರವದಿಂದ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕೆಂಬ ದಿಸೆಯಲ್ಲಿ ಬಸವಣ್ಣನವರು ಶ್ರಮಿಸಿದರು ಎಂದು ತಹಶೀಲ್ದಾರ ಬಿ.ಎಸ್‌.ಕಟಕಭಾವಿ ಹೇಳಿದರು. 

ಶನಿವಾರದಂದು ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಜರುಗಿದ, ಕರ್ನಾಟಕ ಸಾಂಸ್ಕೃತಿಕ ನಾಯಕಾರದ ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಜೊತೆಗೆ ಸಾಂಸ್ಕೃತಿಕ ನಾಯಕ ಎಂಬ ಘೋಷವಾಕ್ಯದೊಂದಿಗೆ ಆನಾವರಣಗೊಳಿಸಲು ಸರ್ಕಾರ ಆದೇಶ ಮಾಡಿದ ಹಿನ್ನೆಲೆ ತಾಲೂಕಿನ ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಆನಾವರಣಗೊಳಿಸುವ ಮೂಲಕ ಬಸವಣ್ಣನವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. 

ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಭಾರತ ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಗುರು ಬಸವಣ್ಣನವರು. ಅಸ್ಪೃಶ್ಯತೆ ವಿರುದ್ದ ಚುಳುವಳಿ ರೂಪಿಸಿ, ದೀನ, ದಲಿತ ಶೋಷಿತ ಸಮಾಜದ ಸಮಾಜನತೆಗೆ ಧ್ವನಿ ಎತ್ತಿದ ಇತಿಹಾಸದ ಮೊದಲ ನಾಯಕ ಆ ನಿಟ್ಟಿನಲ್ಲಿ ಇಂದಿನ ಕಲುಷಿತ ವಾತಾವರಣದಲ್ಲಿ ಬಸವಣ್ಣ ತತ್ವ ಆದರ್ಶ ಎಲ್ಲಡೆ ಪಸರಿಸಬೇಕು ಎನ್ನುವ ಉದ್ದೇಶದಿಂದ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದೆ ಎಂದರು. 

ಬಸವಣ್ಣನವರು ಹುಟ್ಟಿ ಬೆಳೆದು ಸಾಧಿಸಿದ್ದೆಲ್ಲ 12ನೇ ಶತಮಾನದಲ್ಲಿ ಆದರೆ ಅವರ ವಚನಗಳು ಇಣದಿಗೂ ಆದರ್ಶ, ಅವರು ನೀಡಿದ ಮಾರ್ಗದರ್ಶನ ಇಂದಿಗೂ ಅನುಸರಣೀಯ. ಅಗಿನ ಕಾಲದಲ್ಲಿ ಸಾಮಾನ್ಯವಾಗಿದ್ದ ಜಾತಿ ತಾರಮ್ಯ, ಢಾಂಬಿಕ ಭಕ್ತ ಎಲ್ಲದರ ವಿರುದ್ದ ತಿರುಗಿ ಬಿದ್ದು ತಮ್ಮದೇ ಆದ ರೀತಿಯಲ್ಲಿ ಇಷ್ಟಲಿಂಗ ಮೂರ್ತಿಯ ಪರಿಕಲ್ಪನೆಯನ್ನು ನೀಡಿ ದೇವರನ್ನು ಎಲ್ಲರ ಕರಸ್ಥಲಕ್ಕೆ ತಂದು ಕಾಯಕವೇ ಕೈಲಾಸ ಎಂದು ಹೇಳಿ, ಎಲ್ಲರಲ್ಲೂ ದುಡಿಯವ ಛಲ ಹುಟ್ಟು ಹಾಕಿದ ಮಹಾತ್ಮರು ಎಂದರು.  

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನಪ್ರಸಾದ ಕಟ್ಟಿಮನಿ, ಸಿಪಿಐ ಅಬ್ದುಲ್ ವಾಜೀದ್ ಪಟೇಲ್, ಸಿಡಿಪಿಒ ಯಲ್ಲಪ್ಪ ಗದಾಡಿ, ಹೆಸ್ಕಾಂ ಅಧಿಕಾರಿ ಎಮ್‌.ಎಸ್‌.ನಾಗನವರ, ಉಪನೋಂದಣಾಧಿಕಾರಿ ಓ ಹರಿಯಪ್ಪ, ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿ ಸಿ.ವಿ ಪಾಟೀಲ್, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ