ಬಳ್ಳಾರಿ

ಅನೀತಿಯೇ ಅರಸನ ಅಡ್ಡದಾರಿಗೆ ಕಾರಣ: ಆದಿನಾರಾಯಣರೆಡ್ಡಿ

ಅನೀತಿಯೇ ಅರಸನ ಅಡ್ಡದಾರಿಗೆ ಕಾರಣ: ಆದಿನಾರಾಯಣರೆಡ್ಡಿ

ಬಳ್ಳಾರಿ 30: ಸಮಾಜದ ಅಧಃಪತನಕ್ಕೆ ಆಡಳಿತ ನಡೆಸುವ ನಾಯಕ ಮತ್ತು ಅವನ ಕೈಕೆಳಗಿನ ಅಧಿಕಾರಿಗಳೇ ಪ್ರಮುಖ ಕಾರಣ. ನಾಯಕರಲ್ಲಿ ನೈತಿಕತೆಯೇ ಮಾಯವಾಗಿ ಲೋಲುಪತೆ ಅಧಿಕವಾಗಿರುವುದರಿಂದ ಜನತೆ ಅವರನ್ನು ಕಂಡು, ಅದೇ ರುಜು ಮಾರ್ಗವೆಂದು ತಿಳಿದು, ಅದರಂತೆ ವರ್ತಿಸುವ ಮೂಲಕ ಸಮಾಜದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆಂಧ್ರಪ್ರದೇಶದ ದೊಡ್ಡ ಹರಿವಾಣದ ಹಿರಿಯ ವಿಚಾರವಾದಿ  ಹೆಚ್. ಆದಿನಾರಾಯಣರೆಡ್ಡಿ ಅಭಿಪ್ರಾಯಪಟ್ಟರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹವಂಭಾವಿಯ ರಾಮನಗರ 1ನೇ ಅಡ್ಡರಸ್ತೆಯಲ್ಲಿಯ ವಕೀಲ ರಮಾದೇವಿ ಶ್ರೀನಿವಾಸಮೂರ್ತಿ ಇವರ ‘ವಿಚಾರ ಕುಟೀರ’ ನಿವಾಸದಲ್ಲಿ ಏರ್ಪಡಿಸಿದ್ದ 253ನೇ ಮಹಾಮನೆ ಕಾರ್ಯಕ್ರಮ ಜರುಗಿತು. ವಚವ ವೈಭವ ಎಂಬ ವಿಶೇಷ ಕಾರ್ಯಕ್ರಮ ಸಂಯೋಜಿಸಿದ್ದು, ವಚನ ಗಾಯ ಮತ್ತು ವಿಶ್ಲೇಷಣೆಯನ್ನು 8 ಗಾಯಕರೊಂದಿಗೆ ಮಾಡಿಸಲಾಯಿತು. ಗೃಹಿಣಿ ಕವಿತ, ರಮಾದೇವಿ, ಪದವಿಪೂರ್ವ ವಿದ್ಯಾರ್ಥಿಗಳಾದ ರಾಜಾಭಕ್ಷ, ಆಭಿಷೇಕ್, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಪಂಚಾಕ್ಷರಿ, ಜಯಲಕ್ಷ್ಮಿ, ಯೋಗೇಶ್ವರಿ ಮತ್ತು ಯು.ಕೆ.ಜಿ. ವಿದ್ಯಾರ್ಥಿ ಎ.ಅಮೋಘ್‍ರವರು ಒಂದೊಂದು ವಚನವನ್ನು ವಾಚನ ಮಾಡಿ, ಸುಶ್ರಾವ್ಯವಾಗಿ ಹಾಡಿ, ಆ ವಚನದ ವಿಶ್ಲೇಷಣೆಯನ್ನು ಮಾಡಿ ಶೋತೃಗಳನ್ನು ಅಚ್ಚರಿಗೊಳಿಸಿದರು. 

ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಪ್ರಾಧ್ಯಾಪಕಡಾ. ಜಗದೀಶ ಬಸಾಪೂರ ರವರು ವಚನ ಸಮನ್ವಯ ಮಾಡುವ ಮೂಲಕ ದತ್ತಿ ಉಪನ್ಯಾಸ ನೀಡಿದರು. ಹಿರಿಯ ಸಾಹಿತಿ, ಪುರಾಣಿಕರು ಶಂಕ್ರಪ್ಪ ಶಾಸ್ತ್ರಿಯವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ದೊಡ್ಡಬಸವ ಗವಾಯಿಗಳಿಂದ ವಚನ ಗಾಯನ ಏರ್ಪಡಿಸಲಾಗಿತ್ತು. ದತ್ತಿ ದಾಸೋಹಿ ರೇಣುಕಮ್ಮನವರ ಮಕ್ಕಳಾದ ಆದರ್ಶ ಮತ್ತು ಅಭಿಷೇಕ್ ವೇದಿಕೆಯಲ್ಲಿದ್ದರು. ದೊಡ್ಡಬಸವ ಗವಾಯಿಗಳು ವಚನ ಪ್ರಾರ್ಥನೆ ಮಾಡಿದರು. ಯು. ಶ್ರೀನಿವಾಸ್ ಮೂರ್ತಿ ಸ್ವಾಗತ ಕೋರಿದರು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ.ಸಿದ್ದಲಿಂಗಪ್ಪ ಪ್ರಾಸ್ತಾವಿಕ ನುಡಿಗಳೊಂದಿಗೆ ದತ್ತಿ ದಾತೃಗಳನ್ನು ಪರಿಚಯಿಸಿ ಶರಣು ಸಮರ್ಪಣೆ ಮಾಡಿದರು. ವಕೀಲ ರಮಾದೇವಿ ಮೂರ್ತಿ, ಉಪನ್ಯಾಸಕ ಶ್ರೀನಿವಾಸಮೂರ್ತಿ ದಂಪತಿಗಳು ಭಕ್ತಿಸೇವೆ ಕೈಗೊಂಡಿದ್ದರು. ಸಭೆಯಲ್ಲಿ ಪುಟ್ಟರಾಜ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು, ಉಪನ್ಯಾಸಕ ಮಲ್ಲಿಕಾರ್ಜುನ ಗೌಡ, ಕೆ.ಬಿ.ಕೊಟ್ರೇಶ್, ಸಿ.ರಘುರಾಜ್, ಚೇತನ, ಶಾಂತಕುಮಾರಿ, ಕವಿತ, ಸಿ.ಕೊಟ್ರಪ್ಪ ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ