ನಟಿ ದಿವ್ಯಶ್ರೀ ಸೀಮಂತದಲ್ಲಿ ನಟ ಪುನೀತ್ಗೆ ನೇತ್ರದಾನ ಗೌರವ.
ಮಹಾಲಿಂಗಪುರ :: ನೇತ್ರದಾನದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ಹೃದಯವಂತ ನಟ ಪುನೀತ್ ರಾಜಕುಮಾರ್ ಅವರಿಗೆ ಕೃತಜ್ಞತಾಪೂರ್ವಕವಾಗಿ ಕಾಮಿಡಿ ಕಿಲಾಡಿ ಖ್ಯಾತಿಯ ನಟ ಗೋವಿಂದೇಗೌಡ ಅವರ ಪತ್ನಿ ದಿವ್ಯಶ್ರೀಯವರ ಸೀಮಂತ ಕಾರ್ಯದಲ್ಲಿ ಡಾ. ರಾಜಕುಮಾರ್ ಐ ಬ್ಯಾಂಕ್ ನ ಚೇರ್ಮನ್ ಡಾ. ಭುಜಂಗ ಶೆಟ್ಟಿ ಅವರ ಸಹಕಾರದೊಂದಿಗೆ ಏರಿ್ಡಸಲಾಗಿತ್ತು.
ನೇತ್ರದಾನ ಶಿಬಿರದಲ್ಲಿ ವ್ಯವಸ್ಥಾಪಕ ವೀರೇಶ ಸಮ್ಮುಖದಲ್ಲಿ ಚಲನಚಿತ್ರ ನಟ ಹಾಗೂ ಕಾಮಿಡಿ ಕಿಲಾಡಿ ಗೋವಿಂದೇಗೌಡ (ಜಿಜಿ) ಮತ್ತು ಅವರ ಪತ್ನಿ ಚಲನಚಿತ್ರನಟಿ ದಿವ್ಯಶ್ರೀ ಹಾಗೂ ಬಂಧು ಬಳಗದವರು ನೇತ್ರದಾನ ಮಾಡಿ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸಿದರು.
ಬಿಇಎಲ್ ಗಣೇಶ ದೇವಸ್ಥಾನದ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಟ ಗೋವಿಂದೇಗೌಡ ಮತ್ತು ಅವರ ಪತ್ನಿ ನಟಿ ದಿವ್ಯಶ್ರೀ ಮಾತನಾಡಿ, ನಟ ರಾಜ್ ಕುಮಾರ್ ಮತ್ತು ಅವರ ಕುಟುಂಬದವರ ಸಮಾಜಸೇವೆ, ಮಾನವೀಯತೆಗೆ ಪುನೀತ್ ರಾಜಕುಮಾರ್ ಹೊಸ ಭಾಷ್ಯ ಬರೆದರು.
ತಾವೊಬ್ಬ ಮೇರು ನಟನೆಂಬ ಯಾವುದೇ ಬಿಗುಮಾನವಿಲ್ಲದೆ ಸರಳವಾಗಿ ಬೆರೆಯುವ ಸರಳ ಸಜ್ಜನಿಕೆಯ ಹೃದಯವಂತರಾಗಿದ್ದರು. ತಮ್ಮ ಇಡೀ ಜೀವನದಲ್ಲಿ ಯಾವುದೇ ಪ್ರಚಾರವನ್ನು ಬಯಸದೆ ಗೌಪ್ಯವಾಗಿ ಅನಾಥ ಮಕ್ಕಳ ಪಾಲನೆ-ಪೋಷಣೆ, ನಿರ್ಗತಿಕರಿಗೆ ಸಹಾಯ ಹಸ್ತ, ಬಡ ಮಕ್ಕಳಿಗೆ ಉಚಿತ ಶಿಕ್ಷಣ ಅದರ ಜೊತೆ ನೇತ್ರದಾನದಂತಹ ಸತ್ಕಾರ್ಯಗಳನ್ನು ತೆರೆಮರೆಯಲ್ಲಿಯೇ ಮಾಡುತ್ತಿದ್ದರು. ಪುನೀತ್ ರಾಜಕುಮಾರ್ ಅವರ ಮಾನವೀಯತೆ, ಸಾಮಾಜಿಕ ಸೇವೆ ಜಗತ್ತಿಗೆ ತಿಳಿದದ್ದು ಅವರ ಅಗಲಿಕೆಯ ನಂತರ. ಒಟ್ಟಾರೆಯಾಗಿ ರಾಜಕುಮಾರ್ ಅವರ ಸೇವೆ ಮತ್ತು ದಾನದ ಮಹತ್ವವನ್ನು ಉನ್ನತೀಕರಿಸಿದ ಅವರ ಅಗಲಿಕೆಯಿಂದ ಚಿತ್ರರಂಗವೇ ಬಡವಾಗಿದೆ ಆದರೆ ಅವರ ಆದರ್ಶಗಳು ಬಡವಾಗಿಲ್ಲ ಎಂದರು.
ಡಾ. ರಾಜಕುಮಾರ್ ಐ ಬ್ಯಾಂಕ್ ನ ವ್ಯವಸ್ಥಾಪಕ ವೀರೇಶ ಮಾತನಾಡಿ, ಇದಕ್ಕೂ ಮೊದಲು ಪುನೀತ್ ರಾಜಕುಮಾರ್ ಅವರ ಆಶಯ ನೇತ್ರದಾನದ ಮಹತ್ವ ಸಾರುವ ಅಕ್ಷಿ ಚಲನಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಗೋವಿಂದೇಗೌಡ ಅವರ ಮನೋಜ್ಞ ಅಭಿನಯ ಮತ್ತು ಸಾಮಾಜಿಕ ಕಳಕಳಿಯ ಸಂದೇಶದಿಂದಾಗಿ ಚಲನಚಿತ್ರ ರಾಷ್ಟ್ರ ಪ್ರಶಸ್ತಿಗೆ ಭಾಜನವಾಯಿತು.
ಚಿತ್ರವನ್ನು ನೋಡಿದ ಸಾಕಷ್ಟು ಜನ ಕುಟುಂಬ ಸಮೇತರಾಗಿ ನೇತ್ರದಾನ ಮಾಡಿದ್ದು ಅವಿಸ್ಮರಣೀಯ. ಈಗ ಅಂಥದೇ ಮತ್ತೊಂದು ಸಾಮಾಜಿಕ ಕಳಕಳಿಯನ್ನು ಸೀಮಂತ ಕಾರ್ಯದಲ್ಲಿ 30 ಕ್ಕೂ ಹೆಚ್ಚು ಜನ ನೇತ್ರದಾನ ಮಾಡಲು ವೇದಿಕೆ ಕಲ್ಪಿಸಿದ್ದು ನಟ ಗೋವಿಂದೇಗೌಡ ಮತ್ತು ಅವರ ಪತ್ನಿ ದಿವ್ಯಶ್ರೀಯವರ ಕಾರ್ಯ ಶ್ಲಾಘನೀಯ ಎಂದರು.