ಧಾರವಾಡ - ಹುಬ್ಬಳ್ಳಿ

ಎಐಡಿಎಸ್‌ಒ ಪ್ರತಿಭಟನೆ; ಎನ್ಟಿಎ ಸುಧಾರಣಾ ಸಮಿತಿಗೆ ವಿರೋಧ

ಎಐಡಿಎಸ್‌ಒ ಪ್ರತಿಭಟನೆ; ಎನ್ಟಿಎ ಸುಧಾರಣಾ ಸಮಿತಿಗೆ ವಿರೋಧ

ಲೋಕದರ್ಶನ ವರದಿ 

ಧಾರವಾಡ 27: ಎಐಡಿಎಸ್‌ಒ ಧಾರವಾಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಎಲ್‌ಐಎ ಹಾಗೂ ಆರ್‌ಎಲ್‌ಎಸ್ ಪಿಯು ಕಾಲೇಜು ಸೇರಿದಂತೆ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರ ರಚಿಸಿರುವ ಪರೀಕ್ಷಾ ಸುಧಾರಣಾ ಕಾರ್ಯಪಡೆ (ಟಾಸ್ಕ್‌ ಫೋರ್ಸ) ಹಾಗೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಕಾರ್ಯವೈಖರಿಯನ್ನು ಖಂಡಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ, ನೀಟ್  ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳು ನಡೆಸಿದ ಹೋರಾಟವು ಐತಿಹಾಸಿಕ ಜಯ ಸಾಧಿಸಿದೆ. ಆದರೆ ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಪರೀಕ್ಷಾ ಸುಧಾರಣೆಯ ಹೆಸರಿನಲ್ಲಿ ಹೊಸ ಕಾರ್ಯಪಡೆಯನ್ನು ರಚಿಸಿರುವುದು ವಿದ್ಯಾರ್ಥಿಗಳ ಬೇಡಿಕೆಗಳಿಗೆ ನ್ಯಾಯ ಒದಗಿಸುವ ಕ್ರಮವಲ್ಲ ಎಂದು ಆರೋಪಿಸಿದರು.  

ಯಾವುದೇ ಹೊಸ ಸಮಿತಿ ರಚಿಸುವುದರಿಂದ ಅಥವಾ ಆಡಳಿತಾತ್ಮಕ ಬದಲಾವಣೆಗಳಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಪರೀಕ್ಷಾ ವ್ಯವಸ್ಥೆಯಲ್ಲಿ ಉಂಟಾಗಿರುವ ದೋಷಗಳನ್ನು ಸರಿಪಡಿಸಲು ಎನ್ಟಿಎಯ ಕಾರ್ಯವೈಖರಿಯನ್ನು ಸಮಗ್ರವಾಗಿ ಪರೀಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.  

ನೀಟ್ ಪರೀಕ್ಷೆಯನ್ನು ಆನ್ಲೈನ್ ಮಾದರಿಗೆ ಪರಿವರ್ತಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ ಅವರು, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಇಂಟರ್ನೆಟ್, ವಿದ್ಯುತ್ ಮತ್ತು ಡಿಜಿಟಲ್ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಇದರಿಂದ ಡಿಜಿಟಲ್ ಅಂತರ  ಮತ್ತಷ್ಟು ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.  

ವೈದ್ಯಕೀಯ ಶಿಕ್ಷಣವು ಶ್ರೀಮಂತ ವರ್ಗಕ್ಕೆ ಮಾತ್ರ ಸೀಮಿತವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವ ರೀತಿಯ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಎಐಡಿಎಸ್‌ಒ ಒತ್ತಾಯಿಸಿತು.  

ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಮರುಪರೀಶೀಲಿಸಿ ವಿದ್ಯಾರ್ಥಿ ಹಿತಾಸಕ್ತಿಗೆ ಅನುಗುಣವಾದ ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಜಾರಿಗೆ ತರಬೇಕು. ಅಗತ್ಯವಿದ್ದರೆ ವಿದ್ಯಾರ್ಥಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿತು.  

ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಸಿಂಧೂ ಕೌದಿ, ಸಂಘಟಕರಾದ ಶಾಂತೇಶ್ ನಂದಿಕೋಳಮಠ, ಸಿದ್ದು ಚಿಪ್ಪಲಕಟ್ಟಿ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ