ಬಳ್ಳಾರಿ

ಇಂಜಿನಿಯರಿಂಗ್ ಶುಲ್ಕ ಹೆಚ್ಚಳ ಹಿಂಪಡೆಯ ಎಐಡಿಎಸ್‌ಓ ಆಗ್ರಹ

ಇಂಜಿನಿಯರಿಂಗ್ ಶುಲ್ಕ ಹೆಚ್ಚಳ ಹಿಂಪಡೆಯ ಎಐಡಿಎಸ್‌ಓ ಆಗ್ರಹ

ಬಳ್ಳಾರಿ 21: ಸರ್ಕಾರಿ ಇಂಜಿನಿಯರಿಂಗ್ ಶುಲ್ಕ ಹೆಚ್ಚಳದ ಕುರಿತು"ಕರ್ನಾಟಕ ರಾಜ್ಯ ಸರ್ಕಾರವು ಈ ಬಾರಿ ಕೂಡ ಕ್ರೂರವಾಗಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಶುಲ್ಕದಲ್ಲಿ ರೂ 1,400/-ರಷ್ಟು ಹೆಚ್ಚಿಸಿದೆ. ಮತ್ತು ಪ್ರತಿಷ್ಠಿತ ಯುವಿಸಿಇ ( ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್) ಶುಲ್ಕದಲ್ಲಿ ರೂ 2000/-ರಷ್ಟು ಹೆಚ್ಚಿಸಿದೆ.  

ಸರ್ಕಾರದ 3 ವರ್ಷಗಳ ಈ ಪಾತಕಿ ಕೃತ್ಯದಿಂದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕವು ದ್ವಿಗುಣಗೊಂಡು ರೂ42,000/-ಕ್ಕೆ ಏರಿದೆ. ತನ್ನನ್ನು ಬಡಜನರ ಪರ, ದಮನಿತರ ಪರ ಎಂದು ಕರೆದುಕೊಳ್ಳುವ ಯಾವುದೇ ಸರ್ಕಾರ ಕೂಡ ಈ ರೀತಿ ಶುಲ್ಕ ಹೆಚ್ಚಿಸಲು ಸಾಧ್ಯವಿಲ್ಲ. ಕುತಂತ್ರದಿಂದ ಯುವಿಸಿಇಯನ್ನು ಪ್ರತ್ಯೇಕವಾಗಿರಿಸಿ ಶುಲ್ಕವನ್ನು ಹೆಚ್ಚಿಸಿರುವುದು, ಈ ಮಹಾನ್ ಸಂಸ್ಥೆಯನ್ನು ಸ್ವ ಹಣಕಾಸು ಸಂಸ್ಥೆಯನ್ನಾಗಿಸುವುದರ ವಿರುದ್ಧ ಧ್ವನಿಯೆತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರ ಪ್ರತಿಭಟನೆಯ ಕೂಗಿಗೆ ಸರ್ಕಾರ ಕಿವುಡಾಗಿರುವುದನ್ನು ಸಾಬೀತುಪಡಿಸುತ್ತದೆ. ಸರ್ಕಾರದ ಈ ಶುಲ್ಕ ಹೆಚ್ಚಳವು ಅಪರಾಧ ಎಂದು ಎಐಡಿಎಸ್‌ಓ ಪರಿಗಣಿಸುತ್ತದೆ. ಮತ್ತು ಕೂಡಲೇ ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸುತ್ತದೆ.  

ರಾಜ್ಯದ ಶಿಕ್ಷಣ ಪ್ರೇಮಿ ಜನತೆಯು ಸಂಘಟಿತರಾಗಿ ವೃತ್ತಿಪರ ಕೋರ್ಸ್‌ಗಳನ್ನು ಹಣ ಗಳಿಕೆಯ ಅಸ್ತ್ರವಾಗಿ ಬಳಸುವುದರ ವಿರುದ್ಧ ಧ್ವನಿ ಎತ್ತಬೇಕೆಂದು ಎಐಡಿಎಸ್‌ಓ ಕರೆ ನೀಡುತ್ತದೆ. 


ಸುದ್ದಿ ಓದಿ