ಶಾಲಾ ಮಟ್ಟದಲ್ಲೇ ಪ್ರಶ್ನೆ ಪತ್ರಿಕೆಗಳನ್ನು ರಚಿಸಲು ಎಐಡಿಎಸ್ಓ ಆಗ್ರಹ
ಬಳ್ಳಾರಿ 05: ಎಸ್ಸೆಸ್ಸೆಲ್ಸಿ ಮಧ್ಯವಾರ್ಷಿಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳನ್ನು ರೂಪಿಸಿ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ನಿರ್ಧರಿಸಿದೆ. ಮಧ್ಯವಾರ್ಷಿಕ ಪರೀಕ್ಷೆಗಳಿಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇಲಾಖೆಯ ಮತ್ತು ಸರ್ಕಾರದ ಈ ಹಠಾತ್ ಹಾಗೂ ಅಪ್ರಜಾತಾಂತ್ರಿಕ ನಿರ್ಧಾರವನ್ನು ಎಐಡಿಎಸ್ಓ ಖಂಡಿಸುತ್ತದೆ.ಶಿಕ್ಷಣದಲ್ಲಿ ಯಾವುದೇ ಬದಲಾವಣೆಗಳನ್ನು ತರಬೇಕಾದರೆ ಅದನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಾಡಬೇಕು. ಅರ್ಧವಾರ್ಷಿಕ ಪರೀಕ್ಷೆಗೆ ಯಾರು ಪ್ರಶ್ನೆ ಪತ್ರಿಕೆ ತಯಾರಿಸಬೇಕು ಎಂಬ ನಿರ್ಧಾರವನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಕೈಗೊಳ್ಳಬೇಕು. ಈಗ, ಪರೀಕ್ಷೆಗಳನ್ನು ಶಾಲಾ ಮಟ್ಟದಲ್ಲೇ ನಡೆಸಿದರು ಕೂಡ, ಮಂಡಳಿಯಿಂದ ಬರುವ ಪ್ರಶ್ನೆ ಪತ್ರಿಕೆಯು, ಈಗಾಗಲೇ ಪರೀಕ್ಷೆಗಳ ಒತ್ತಡದಲ್ಲಿರುವ ವಿದ್ಯಾರ್ಥಿಗಳ ಮೇಲೆ ಇನ್ನಷ್ಟು ಭಾರವನ್ನುಂಟುಮಾಡುತ್ತದೆ.ಪ್ರಸ್ತುತ ರಾಜ್ಯ ಸರ್ಕಾರವು ಶೈಕ್ಷಣಿಕ ವರ್ಷದ ನಡುವೆ ಈ ರೀತಿ ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ವಿದ್ಯಾರ್ಥಿ, ಶಿಕ್ಷಕರ ಹಾಗೂ ತಜ್ಞರ ಅಭಿಪ್ರಾಯಗಳನ್ನು ಪಡೆಯದೆ ಈ ರೀತಿ ಅಪ್ರಜಾತಾಂತ್ರಿಕ ಹಾಗೂ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದನ್ನು ಸರ್ಕಾರವು ಕೈಬಿಡಬೇಕು. ಕೂಡಲೇ ಮಂಡಳಿ ಪ್ರಶ್ನೆ ಪತ್ರಿಕೆಗಳನ್ನು ಕೈಬಿಟ್ಟು ಶಾಲಾ ಮಟ್ಟದಲ್ಲೇ ಪ್ರಶ್ನೆ ಪತ್ರಿಕೆಗಳನ್ನು ರಚಿಸಬೇಕೆಂದು ಎಐಡಿಎಸ್ಓ ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ.