ಸಮರ್ಕ ಬಸ್, ಸೌಲಭ್ಯಕ್ಕೆ ಎಬಿವಿಪಿ ಆಗ್ರಹ
ರಾಯಬಾಗ 25: ಗ್ರಾಮೀಣ ಭಾಗಗಳಿಂದ ಶಾಲಾ-ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಮರ್ಕ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಬಾಲಕಿಯರ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ರಾಯಬಾಗ ಶಾಖೆ ವತಿಯಿಂದ ಶುಕ್ರವಾರ ಗ್ರೇಡ್-2 ತಹಸೀಲ್ದಾರ್ ಪರಮಾನಂದ ಮಂಗಸೂಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮೀಣ ಭಾಗಗಳಿಂದ ಪಟ್ಟಣದ ಪದವಿ ಪೂರ್ವ, ಪದವಿ, ವೃತ್ತಿಪರ ಹಾಗೂ ಇತರೆ ಶಿಕ್ಷಣ ಸಂಸ್ಥೆಗಳಿಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಗೂ ಸೂಕ್ತ ಸಮಯದಲ್ಲಿ ಬಸ್ಗಳು ಸಂಚರಿಸದ ಕಾರಣ ತೊಂದರೆ ಅನುಭವಿಸುವಂತಾಗಿದೆ.ಬಸ್ ಸಿಗದ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವುದರಿಂದ ಬಡ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಬಾಲಕಿಯರ ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ, ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳ ಅನುಕೂಲಕ್ಕೆ ಹೆಚ್ಚುವರಿ ಬಸ್ಗಳನ್ನು ಒದಗಿಸಿ, ಅಗತ್ಯವಿರುವ ಗ್ರಾಮಗಳಲ್ಲಿ ಬಸ್ ನಿಲುಗಡೆ ಕಲ್ಪಿಸಬೇಕು. ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ಸಮಸ್ಯೆಗಳು ಮುಂದುವರಿದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧವಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. ಇದಕ್ಕೂ ಮುನ್ನ ಪಟ್ಟಣದ ಅಭಾಜಿ ವೃತ್ತದ ಬಳಿ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಒಂದು ಗಂಟೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ನಾಗರಾಜ ನಾಯಿಕ, ಸಿದ್ಧರಾಮ ಮಂಡೋಳೆ, ಶಿವಯ್ಯ ಹಿರೇಮಠ, ಸೂರಜ ಭಿರಡಿ, ದೇವು ಗಲಗಲಿ, ಲಕ್ಷ್ಮಣ ಉಪ್ಪಿನ, ಮಹಾದೇವ ಚೌಗುಲಾ, ಸೃಷ್ಟಿ ಸಲಗರೆ, ಸಂಜನಾ ಕಾಂಬಳೆ, ಪೂಜಾ ಗರವಾಡೆ, ಕಾವೇರಿ ಕರಿಗಾರ, ಭಾರತಿ ಚೌಗುಲಾ, ಅಂಕಿತಾ ಚೌಗುಲಾ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.