ಮಹಲಿಂಗಪುರ

ಯುದ್ಧ ಬಂದಾಗ ಮಾತ್ರ ಯೋಧ ನೆನಪಾಗಬಾರದು: ಶಿವಲಿಂಗ ಸಿದ್ನಾಳ

ಯುದ್ಧ ಬಂದಾಗ ಮಾತ್ರ ಯೋಧ ನೆನಪಾಗಬಾರದು: ಶಿವಲಿಂಗ ಸಿದ್ನಾಳ

ಲೋಕದರ್ಶನ ವರದಿ 

ಮಹಾಲಿಂಗಪುರ 14: ಭಾರತದ ತ್ರಿವರ್ಣ ಧ್ವಜ ಬಾನೆತ್ತರದಲ್ಲಿ ಹಾರಾಡುತ್ತಿರುವುದು ಗಾಳಿಯಿಂದಲ್ಲ, ಯೋಧರ ಉಸಿರಿನಿಂದ ಎಂದು ಪತ್ರಕರ್ತ ಶಿವಲಿಂಗ ಸಿದ್ನಾಳ ಹೇಳಿದರು.  

 ಸಮೀಪದ ಮೂಡಲಗಿ ತಾಲೂಕಿನ ಹೊಸ ಯರಗುದ್ರಿ ಗ್ರಾಮದ ಯೋಧ ವೆಂಕಪ್ಪ 22 ವರ್ಷ ಭಾರತೀಯ ಸೇನಾ ಸೇವಾ ನಿವೃತ್ತಿಯ ಪ್ರಯುಕ್ತ ಅಖಿಲ ಕರ್ನಾಟಕ ಮಾಜಿ ಯೋಧರ ಸಂಘ, ರಬಕವಿ ಬನಹಟ್ಟಿ ತಾಲೂಕು ವತಿಯಿಂದ ಸ್ಥಳೀಯ ಗೋಕುಲ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ  ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಯೋಧನಿಗೂ ಹೆತ್ತ ತಾಯಿ ಮತ್ತು ಹೊತ್ತ ತಾಯಿ ಈ ಇಬ್ಬರು ತಾಯಂದಿರ ರಕ್ಷಣೆಯ ಜವಾಬ್ದಾರಿ ಇರುತ್ತದೆ, ಯೋಧ ರಾಷ್ಟ್ರೀಯತೆಯ ಜೀವಂತ ಸಂಕೇತ.ಕುಟುಂಬ, ಬಂಧು, ಬಳಗ, ಹೆಂಡತಿ, ಮಕ್ಕಳಿಂದ ದೂರವಿದ್ದು ಹಗಲಿರುಳೆನ್ನದೆ ಗಡಿಯಲ್ಲಿ ನಿಂತು ದೇಶ ಸೇವೆ ಮಾಡುವ ಯೋಧನನ್ನು ಕೇವಲ ಯುದ್ಧ ಬಂದಾಗ ಮಾತ್ರ ನೆನೆಯಬಾರದು ಎಂದರು.  

ಪುರಸಭಾ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಮಾತನಾಡಿ 22 ವರ್ಷ ಭಾರತಾಂಬೆಯ ಸೇವೆ ಮಾಡಿದ ಯೋಧ ವೆಂಕಪ್ಪ ಅವರ ನಿವೃತ್ತ ಜೀವನ ಸುಖ, ಶಾಂತಿ, ಸಮೃದ್ಧಿಯಿಂದ ಕೂಡಿರಲಿ ಎಂದರು.  

ಹಲವಾರು ಸಂಘ ಸಂಸ್ಥೆಗಳಿಂದ ಯೋಧನನ್ನು ಕುಟುಂಬ ಸಮೇತ ಸನ್ಮಾನಿಸಲಾಯಿತು. ಇದೇ ವೇದಿಕೆಯಲ್ಲಿ ತಾಯಂದಿರ ದಿನ ಆಚರಿಸಲಾಯಿತು.  

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು, ಯೋಧನ ತಂದೆ ಹನುಮಂತ, ತಾಯಿ ಶಾಂತವ್ವ, ಪತ್ನಿ ಗೀತಾ ವೇದಿಕೆ ಮೇಲಿದ್ದರು.ಮಾಜಿ ಯೋಧರ ಸಂಘದ ತಾಲೂಕು ಅಧ್ಯಕ್ಷ ಬಸಪ್ಪ ಮುಂಗರವಾಡಿ, ರಾಹುಲ ಜಂಬಗಿ, ಬಸವರಾಜ ದಲಾಲ, ಲಕ್ಷ್ಮಿ ಜಂಬಗಿ, ಸುಮಾ ಜಂಬಗಿ, ಭಾಗೀರಥಿ ಯಡಳ್ಳಿ ಇತರರಿದ್ದರು.  

ಸಮೃದ್ಧಿ ನಾಡಗೌಡ ಪ್ರಾರ್ಥಿಸಿ, ಮಾಜಿ ಯೋಧ ಶಿವಾನಂದ ಪರ​‍್ಪನವರ ಸ್ವಾಗತಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು. 


ಸುದ್ದಿ ಓದಿ