ಪುರಸಭೆಯಿಂದ ಸಂದಾಯವಾಗದ ಬಾಕಿ ಹಣ ಕಲಾವಿದನಿಂದ ಪ್ರತಿಷ್ಠಾಪಿಸಿದ ಕಂಚಿನ ಪುತ್ಥಳಿ ತೆಗೆದುಕೊಂಡು ಹೋಗುವುದಾಗಿ ಮುಖ್ಯಾಧಿಕಾರಿಗೆ ಮನವಿ.
ಮಹಾಲಿಂಗಪುರ : ಪಟ್ಟಣದ ಪುರಸಭೆಯ ಆಧೀನದಲ್ಲಿ ಗಾಂಧಿ ವೃತ್ತದಲ್ಲಿ ಇತ್ತಿಚೆಗೆ ಮಹಾತ್ಮ ಗಾಂಧಿಜೀ ಕಂಚಿನ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಇದನ್ನು ತಯಾರಿಸಿದ ಬಾಕಿ ಹಣ ಸಂದಾಯವಾಗದ ಕಾರಣದಿಂದ ಬೇಸರಗೊಂಡು ತೆರವುಗೊಳಿಸಿಕೊಂಡು ಹೋಗುತ್ತೇನೆ ಎಂದು ಸಿಂಡಿಕೇಟ್ ಕಲಾವಿದ ಡಿ.ಕೆ. ರಂಗನಾಥ ಅವರು ಸ್ಥಳೀಯ ಪುರಸಭೆಯ ಮುಖ್ಯಾಧಿಕಾರಿ ಜಗದೀಶ ಈಟಿ ಅವರಿಗೆ ಮನವಿ ಸಲ್ಲಿಸಿದರು.
ಬುಧವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ಬಡ ಕಲಾವಿದ ಮತ್ತು ಮಹಾಲಿಂಗಪುರದ ನಿವಾಸಿಯಾಗಿ ಊರಿನ ಋಣಾನುಬಂಧದಿಂದ ಇವರ ಕಡೆಯಿಂದ ಕಂಚಿನ ಮೂರ್ತಿಗೆ ತಗಲುವ ಎಲ್ಲ ಹಣವನ್ನು ನಾನು ಸಂದಾಯ ಮಾಡಿಕೊಳ್ಳದೆ ಮಾ. 25ರಂದು ಇವರ ಸುಪರ್ದಿಗೆ ಒಪ್ಪಿಸಿರುತ್ತೇನೆ.
ಅಂದಿನಿಂದ ಇಂದಿನವರೆಗೂ ಪುರಸಭೆಯ ಅಂದಿನ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಮತ್ತು ಸಂಬಂಧಿಸಿದ ಎಲ್ಲರಿಗೂ 3.5ಲಕ್ಷ ಬಾಕಿ ಉಳಿದ ಹಣವನ್ನು ಸಂದಾಯ ಮಾಡಲು ಮನವಿ ಮಾಡುತ್ತಾ ಬಂದಿದ್ದೇನೆ. ನನ್ನ ಮನವಿಗೆ ಯಾರೂ ಸ್ಪಂದಿಸದೆ ಇರುವುದರಿಂದ ಬೇಸರಗೊಂಡ ನಾನು ಪುರಸಭೆ ಮುಖ್ಯ ಅಧಿಕಾರಿಗೆ ತೆರವುಗೊಳಿಸಿಕೊಂಡು ಹೋಗುವ ಮನವಿಯನ್ನು ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
* ತೇರದಾಳ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಹಾಗೂ ಸ್ಥಳೀಯ ಆಡಳಿತಾರೂಢ ಬಿಜೆಪಿ ಪಕ್ಷ ಚುನಾವಣೆಗೆ ಹೋಗುವ ಆತುರದಲ್ಲಿ ಮಹಾಲಿಂಗಪುರ ಪಟ್ಟಣದಲ್ಲಿ ಗಾಂಧೀಜಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈಗ ಹಣ ಕೊಡದ ಕಾರಣ ಬೇಸರಗೊಂಡಿರುವ ಕಲಾವಿದ ಪ್ರತಿಮೆಯನ್ನು ತೆರುವುಗೊಳಿಕೊಂಡು ಹೋಗುತ್ತೇನೆ ಎನ್ನುತ್ತಿರುವುದಕ್ಕೆ ನೇರ ಹೊಣೆ ಅಂದಿನ ಅಧ್ಯಕ್ಷ ಮತ್ತು ಪುರಸಭೆ ಅಧಿಕಾರಿಗಳು ಕಾರಣ. ಬಾಪೂಜಿಗೆ ನಾವು ಸಲ್ಲಿಸುತ್ತಿರುವ ಅಗೌರವವೂ ಆಗಿದೆ.ಒಂದೆರಡು ದಿನಗಳಲ್ಲಿ ಪುರಸಭೆ ಅಧಿಕಾರಿಗಳು ಕಲಾವಿದನಿಗೆ ಹಣ ಸಂದಾಯ ಮಾಡಬೇಕು ತಪ್ಪಿದಲ್ಲಿ ಅಂದಿನ ಭಾಜಪ ಆಡಳಿತ ಮತ್ತು ಪುರಸಭೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ.
- ಯಲ್ಲನ್ನಗೌಡ ಪಾಟೀಲ್, ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು.
* ಮುಸ್ತಾಖ ಚಿಕ್ಕೋಡಿ, ಪುರಸಭೆ ಸದಸ್ಯರು.
* ಅಂದು ನನ್ನ ಅಧ್ಯಕ್ಷತೆಯಲ್ಲಿ ಪುರಸಭೆಯ ಸರ್ವ ಸದಸ್ಯರ ಸಭೆಯಲ್ಲಿ ಸಾಮಾನ್ಯ ಅನುದಾನದಲ್ಲಿ ಗಾಂಧಿ ವೃತ್ತದಲ್ಲಿ ಮಹಾತ್ಮ ಗಾಂಧೀಜಿಯವರ ಕಂಚಿನ ಪುತ್ಥಳಿಯನ್ನು ಸ್ಥಾಪಿಸಲು ಕಲಾವಿದ ಡಿ.ಕೆ ರಂಗನಾಥ್ ಅವರಿಗೆ ಒಪ್ಪಿಸಲಾಗಿ ಅಲ್ಲದೆ ಕಾಲಾಂತರದಲ್ಲಿ ಈ ಹಣ ಸಂದಾಯ ಮಾಡಲು ಪುರಸಭೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿತ್ತು, ಆದರೆ ಅವರಿಗೆ ತಾಂತ್ರಿಕ ತೊಂದರೆ ಏನೆಂಬುವುದು ನನ್ನ ಅರಿವಿಗೆ ಇರುವುದಿಲ್ಲ. ಆದರೂ ಕೂಡ ನಮ್ಮ ಮುಖಂಡರುಗಳು ಮತ್ತು ಪುರಸಭೆ ಅಧಿಕಾರಿಗಳನ್ನು ಭೇಟಿ ಮಾಡಿ ಆಗಿರುವ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ.
- ಅಧ್ಯಕ್ಷ ಬಸವರಾಜ ಹಿಟ್ಟಿನಮಠ.
ಮಾಜಿ ಪುರಸಭಾಧ್ಯಕ್ಷ ಮಹಾಲಿಂಗಪುರ