ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೀಡಲು ಮೇದಾರ ಸಮಾಜದಿಂದ ಪುರಸಭೆಗೆ ಮನವಿ
ಮಹಾಲಿಂಗಪುರ 24: ಸಮುದಾಯ ಭವನ ನಿರ್ಮಾಣಕ್ಕೆ ಪುರಸಭೆ ನಿವೇಶನ ನೀಡಲು ಶ್ರೀ ಗುರು ಕೇತೇಶ್ವರ ಮೇದಾರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಹಾಗೂ ಸಮುದಾಯದ ಜನರು ನೂತನ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಮೇದಾರ ಸಮಾಜ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದ ಪರಿಶಿಷ್ಟ ಪಂಗಡ, ಮದುವೆ-ಮುಂಜುವೆ, ಸಮಾಜದ ಇನ್ನಿತರ ಧಾರ್ಮಿಕ ಕಾರ್ಯಗಳನ್ನು ಮಾಡಬೇಕೆಂದರೆ ದುಬಾರಿ ಖಾಸಗಿ ಮಂಟಪಗಳ ಮೊರೆ ಹೋಗಬೇಕು. ಅಂತಹದರೊಳಗೆ ಆರ್ಥಿಕವಾಗಿ ಹಿಂದುಳಿದ ವರ್ಗ ಬೇರೆ, ಖಾಸಗಿ ಖುಲ್ಲಾ ಜಾಗೆಗಳಲ್ಲಿಯೇ ಪೆಂಡಾಲ್ ಹಾಕಿ ಕಾರ್ಯಕ್ರಮಗಳನ್ನು ನಡೆಸಬೇಕು. ಈ ಅನಿವಾರ್ಯತೆಯಿಂದ ಇಲ್ಲಿಯೂ ಸಾವಿರ ಸಾವಿರ ಪೀಕುವುದು ಮತ್ತು ಹಣ ಹೊಂದಿಸುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ಸಮಸ್ಯೆ ತಪ್ಪಿಸಲು ಹಣ ಹೊಂದಿಸಬೇಕೆಂದರೆ ಸಮುದಾಯಕ್ಕೆ ಆಗದ ಮಾತಾಗಿದೆ ಎಂದು ಮನವಿಯಲ್ಲಿ ಅಸಹಾಯಕತೆ ತೋಡಿಕೊಂಡಿದ್ದಾರೆ. ಆದ್ದರಿಂದ ಅನೇಕ ಸಮಾಜಗಳಿಗೆ ಪುರಸಭೆಯಿಂದ ಜಾಗೆಗಳನ್ನು ಒದಗಿಸಿರುವಂತೆಯೇ ನಮ್ಮ ಸಮಾಜಕ್ಕೂ ಸಹಕಾರ ರೂಪದಲ್ಲಿ ಜಾಗೆಯನ್ನು ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷೆ ಶೀಲಾ ರಾಜೇಶ ಭಾವಿಕಟ್ಟಿ, ಸ್ಥಾಯಿ ಸಮಿತಿ ಚೇರ್ಮನ್ ಅಬ್ದುಲರಜಾಕ ಭಾಗವಾನ, ಸದಸ್ಯರಾದ ಶೇಖರ ಅಂಗಡಿ, ಮುಸ್ತಾಕ್ ಚಿಕ್ಕೋಡಿ, ಬಲವಂತಗೌಡ ಪಾಟೀಲ್, ಬಸವರಾಜ ಮೇದಾರ, ರಾಜು ಗೌಡಪ್ಪಗೋಳ ಮತ್ತು ಸದಸ್ಯೆಯರಾದ ಭಾವನಾ ಪಾಟೀಲ್, ಸುಜಾತಾ ಮಾಂಗ, ಸವಿತಾ ಹುರಕಡ್ಲಿ, ಚಾಂದನಿ ನಾಯಿಕ, ಮುಖಂಡರಾದ ಸುನೀಲಗೌಡ ಪಾಟೀಲ್, ಮಹಾಲಿಂಗಪ್ಪ ಮಾಳಿ, ಮಹಾದೇವಪ್ಪ ಮೇದಾರ, ಲಕ್ಷ್ಮಣ ಮಾಂಗ ಮತ್ತು ಮೇದಾರ (ಬುರುಡ) ಸಮುದಾಯದ ಅಂಬವ್ವ, ನಂದವ್ವ, ಸವಿತಾ, ಲಕ್ಷ್ಮಿ, ಅನಿತಾ, ಮಹಾದೇವ, ಶಿವಾನಂದ, ಮಹಾಲಿಂಗಪ್ಪ, ರಾಯಪ್ಪ, ಬಸು, ಅನೀಲ, ಸಂತೋಷ ಮುಂತಾದವರಿದ್ದರು.