ರಂಗೇರಿದ ಗ್ರಾಮದೇವತೆಯರ ಜಾತ್ರೆ ;ನಗರದೆಲ್ಲೆಡೆ ಹಬ್ಬದ ಸಂಭ್ರಮ
ಭಂಡಾರದಲ್ಲಿ ಮಿಂದೆದ್ದ ಮುಧೋಳ ನಗರ ಽ ಐವತ್ತು ಟನ್ ಭಂಡಾರ,3000 ಕಳಸಗಳ ಮೆರವಣಿಗೆ
ವೆಂಕಟೇಶ ಗುಡೆಪ್ಪನವರ
ಮುಧೋಳ 15: ಎಲ್ಲಿ ನೋಡಿದೆಲ್ಲೆಡೆ ಭಂಡಾರ,ಭಂಡಾರ,ಭಂಡಾರ ಹೌದು ಮುಧೋಳದ ಗ್ರಾಮದ ಶ್ರೀ ಗ್ರಾಮದೇವತೆಯ ಜೈ ಭಾರತ ಸರ್ಕಲ್ ದಿಂದ ಎಲ್ಲ ಶಿವಾಜಿ ವೃತ್ತ ಡಾ.ಅಂಬೇಡ್ಕರ್ ವೃತ್ತ ಮಾರ್ಗದೆಲ್ಲೆಡೆ ತಳಿರು ತೋರಣಗಳ ಮದ್ಯದಲ್ಲಿ ನೂರಾರು ಟ್ರ್ಯಾಕ್ಟರ್ದಲ್ಲಿ ಕುಳಿತ ಯುವಕರು,ಮಕ್ಕಳು ಎಲ್ಲೆಡೆ ಭಂಡಾರ ಎರೆಚುವ ಸಂಭ್ರಮದ ಜೊತೆಗೆ ಐದು ವರ್ಷಕ್ಕೊಮ್ಮೆ ನಡೆಯುವ ನಗರದ ಗ್ರಾಮ ದೇವತೆಯರಾದ ದುರ್ಗಾದೇವಿ ಹಾಗೂ ದ್ಯಾಮವ್ವ ದೇವಿಯ ಮೂರ್ತಿಯ ಮೆರವಣಿಗೆ ನಗರದಲ್ಲೆಡೆ ಸಂಚರಿಸಿ ಮಂಟಪದಲ್ಲಿ ಕೂಡಿಸಲಾಯಿತು.
ಹೌದು ಜಾತ್ರೆಯ ಪ್ರಯುಕ್ತ ನಗರದಲ್ಲಿಗ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಲ್ಲಿಯ ವೃತ್ತ,ರಸ್ತೆಗಳು,ದೇವಾಲಯಗಳು ನವವಧುವಿನಂತೆ ಸಿಂಗಾರಗೊಂಡು ಭಕ್ತರನ್ನು ತನ್ನತ್ತ ಸೆಳೆಯುತ್ತಿವೆ . ನಗರದಲ್ಲೆಡೆ ಭಕ್ತಿ - ಭಾವದ ಹೊಳೆ ಹರಿಯುತ್ತಿದೆ . ಕರೋನಾ ನಂತರ ಗ್ರಾಮದೇವತೆಯರಾದ ದುರ್ಗಾದೇವಿ ದ್ಯಾಮವ್ವದೇವಿಯ ಜಾತ್ರಾಮಹೋತ್ಸವ ಐದು ದಿನಗಳ ಕಾಲ ನಡೆಯಲಿದ್ದು ಮೊದಲ ದಿನವಾದ ಶುಕ್ರವಾರ ವಿವಿದ ಗ್ರಾಮ ಹಾಗೂ ಪಟ್ಟಣದಲ್ಲಿರುವ ಸ್ಥಳೀಯರು ತವರಿಗೆ ಲಗ್ಗೆ ಇಟ್ಟಿದ್ದಾರೆ .
ಶುಕ್ರವಾರ ಸುಮಂಗಲೆಯರ ಆರತಿ , ಕುಂಭ ಮತ್ತು ವಾಧ್ಯಮೇಳಗಳೊಂದಿಗೆ ಸ್ಥಳೀಯ ಗ್ರಾಮದೇವತೆಯಯರ ದೇಗುಲದಿಂದ ನಡುಚೌಕ,ಮಹಾತ್ಮ ಗಾಂದಿ ವೃತ್ತ,ಶಿವಾಜಿ ವೃತ್ತ ಬಸವೇಶ್ವರ ವೃತ್ತ ಮಾರ್ಗದ ಮೂಲಕ ದೇವಾಲಯದಿಂದ ಗ್ರಾಮದೇವತೆ ಮೂರ್ತಿಯನ್ನು ಸಡಗರ , ಸಂಭ್ರಮದಿಂದ ವೇದಿಕೆಯಲ್ಲಿ ತಂದು ಕೂಡ್ರಿಸಿಲಾಯಿತು .ಸುಮಾರು 60ಕ್ಕೂ ಅಧಿಕ ಟ್ರ್ಯಾಕ್ಟರ್ದಲ್ಲಿ ಸುಮಾರು 50 ಟನ್ ಭಂಡಾರವನ್ನು ಯುವಕರು , ಮಕ್ಕಳು ,ಮಹಿಳೆಯರು,ಹಿರಿಯರು ಒಬ್ಬರಿಗೊಬ್ಬರು ಭಂಡಾರ ಎರಚಿ ಸಂಭ್ರಮಿಸಿದರು . ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಅಪಾರ ಸಂಖ್ಯೆಯಲ್ಲಿ ಭಕ್ತರು , ಗ್ರಾಮಸ್ಥರು ಪಾಲ್ಗೊಂಡಿದ್ದರು.
ಬಂಟಿಂಗ್ ಬ್ಯಾನರ್ ;ಐದು ದಿನಗಳಕಾಲ ನಡೆಯುವ ಜಾತ್ರೆಗೆ ಎಲ್ಲೆಡೆ ನಗರ ತಳಿರು ತೋರಣದಿಂದ ಕಂಗೊಳಿಸುತ್ತಿದೆ.ತರತರಹದ ಬಂಟಿಂಗ್ ಬ್ಯಾನರ್ ಪೋಸ್ಟರ್ ಸ್ವಾಗತ ಕಮಾನುಗಳು ಗಮನ ಸೆಳೆಯುತ್ತಿವೆ. ಭಂಡಾರ ಉಗ್ಗುವಿಕೆಯಿಂದ ನಗರದ ರಸ್ತೆಗಳೆಲ್ಲ ಬಂಗಾರದ ವರ್ಣ ಪಡೆಯಿತು. ಗ್ರಾಮದ ಎಲ್ಲೆಡೆ ವಿದ್ಯುತ್ ದೀಪದ ವ್ಯಸ್ಥೆ ಜನಮನ ಸೆಳೆಯಿತು.
3000 ಕಳಸ,ಆರತಿ:ಐದು ವರ್ಷಕ್ಕೆ ಒಂದು ಸಲ ನಡೆಯುವ ಜಾತ್ರೆ ಕರೋನಾದಿಂದ ಎರಡು ರ್ವ ಹೆಚ್ಚಿನ ಅವಧಿ ತೆಗೆದುಕೊಂಡು ನಡೆದ ಪರಿಣಾಮದ ನಗರ ಹಾಗೂ ಗ್ರಾಮದಿಂದ ಬಂದ ಮಹಿಳೆಯರು ಸುಮಾರು 3000 ಕಳಸ ಹಾಗೂ 2000 ಆರತಿಗಳನ್ನು ಹೊತ್ತು ನಗರದಲ್ಲಿ ಪ್ರಮುಖ ರಸ್ತೆಯಲ್ಲಿ ಗ್ರಾಮದೇವತೆಯ ಮೂರ್ತಿ ಮೆರವಣಿಗೆಯಲ್ಲಿ ಸಂಚರಿಸಿದರು.
ಇಪ್ಪತ್ತು ತಂಡಗಳು ಭಾಗಿ:ಮೆರವಣಿಗೆಯಲ್ಲಿ ಆನೆ,ಕುದುರೆ,ಒಂಟೆ,ಬ್ಯಾಂಜೋ,ಜಾಂಚ್ ಫಥಕ,ಸುಡಗಾಡ ಸಿದ್ದರು,ದುರುಗ ಮುರುಗಿಯರು, ಸಂಬಾಳ, ಕರಡಿ ಮಜಲು, ಮಹಿಳೆ ಹಾಗೂ ಹೆಣ್ಣು ಮಕ್ಕಳ ಡೊಳ್ಳು,ಗೊಂದಲಿಗರು,ಹಲಗೆ ವಾದನ,ಕಳಿಸಿಂಗ್,ಸಾರವಾಡದ ಗೊಂಬೆಗಳು,ನಾಸಿಕ್ ಡೋಲ್ ಮಂಗಳ ಮುಖಿಯರ ನೃತ್ಯ ತಂಡ ಸಹಿತ ಇಪ್ಪತ್ತಕ್ಕೂ ಅಧಿಕ ತಂಡಗಳು ಬಾಗಿಯಾಗಿದ್ದವು,
ಗಣ್ಯರು ಭಾಗಿ:ನಗರಸಭೆಯ ಅಧ್ಯಕ್ಷ ಗುರುಪಾದ ಕುಳಲಿ,ಎಂ.ಎಲ್.ಸಿ ಆರ್.ಬಿ.ತಿಮ್ಮಾಪೂರ,ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ,ಬಿಜೆಪಿಯ ಅರುಣ ಕಾರಜೋಳ ಜಿಲ್ಲಾ ಬಿಜೆಪಿ ಉಪಾದ್ಯಕ್ಷ ರಾಜು(ನಾರಾಯಣ)ಯಡಹಳ್ಳಿ,ಸದಾ ಜಾದವ,ರಾಮನಗೌಡ ನಾಡಗೌಡ,ಚಂದ್ರಶೇಖರ ಕಬ್ಬೂರ ಸಹಿತ ಲಕ್ಷಾಂತರ ಗಭ್ಯರು ಭಾಗಿಯಾಗಿದ್ದರು.
ಐವತ್ತು ಟನ್ ಭಂಡಾರ;ಶ್ರೀ ಗ್ರಾಮದೇವತೆ ಜಾತ್ರಾ ಕಮೀಟಿಯ ಮೂವತ್ತು ಟನ್ ಸಹಿತ ಭಕ್ತರ ಇಪ್ಪತ್ತು ಟನ್ ಭಂಡಾರ ಸಹಿತ ಒಟ್ಟು ಐವತ್ತು ಟನ್ ಭಂಡಾರ ನಗರದೆಲ್ಲಡೆ ಉಗ್ಗಿದ್ದು ನಗರ ಬಂಗಾರದ ಬಣ್ಣ ಹಾಕಿದಂತೆ ಕಾಣುತ್ತಿದ್ದೆ ಇನ್ನು ಶುಕ್ರವಾರ ಹುಗ್ಗಿ ಹಾಗೂ ಅನ್ನ ಸಾಂಬರ ಇಪ್ಪತ್ತು ಸಾವಿರಕ್ಕೂ ಅಧಿಕ ಭಕ್ತರಿಗೆ ಉಣಬಡಿಸಿಲಾಗಿದೆ.